ಬೆಂಗಳೂರು(ಸೆ.27): ರಾಜ್ಯದಲ್ಲಿನ ಪೊಲೀಸ್ ಸಿಬ್ಬಂದಿಗೆ ಸರ್ಕಾರ ದಸರಾ ಹಬ್ಬಕ್ಕೆ ಭರ್ಜರಿ ಉಡುಗೊರೆ ನೀಡಿದೆ. ಅಕ್ಟೋಬರ್ ತಿಂಗಳಲ್ಲಿ ಪೊಲೀಸರ ವೇತನ ಹೆಚ್ಚಳವನ್ನು ಡಿಪಿಜಿ ಓಂ ಪ್ರಕಾಶ್, ನಗರ ಪೊಲಿಸ್ ಆಯುಕ್ತ ಎಂ.ಎನ್. ಮೇಘರಿಕ್ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಗೃಹ ಸಚಿವ ಡಾ. ಪರಮೇಶ್ವರ್​ಗೆ ವರದಿ ಸಲ್ಲಿಸಿದ್ದಾರೆ. ರಾಜ್ಯ ಪೊಲೀಸರಿಗೆ ಶೇ. 22ರಷ್ಟು ವೇತನ ಹೆಚ್ಚಳಕ್ಕೆ ಸಮಿತಿ ಶಿಫಾರಸು ಮಾಡಿದೆ. 

ಪೊಲೀಸರ ಪ್ರತಿಭಟನೆಯ ಬಿಸಿ ಸರ್ಕಾರಕ್ಕೆ ತಟ್ಟಿದ್ದು ವೇತನ ಹೆಚ್ಚಳ ಸಮಸ್ಯೆ ಕೊನೆಗೂ ಬಗೆಹರಿದಿದೆ. ವೇತನ ಸರಿಪಡಿಸಲು ಸರ್ಕಾರ ಎಡಿಜಿಪಿ ರಾಘವೇಂದ್ರ ಔರಾದ್ಕರ್ ನೇತೃತ್ವದಲ್ಲಿ ಸಮಿತಿಯೊಂದನ್ನ ರಚನೆ ಮಾಡಿತ್ತು. 43 ದಿನಗಳ ಸುದೀರ್ಘ ಕೆಲಸ ಮಾಡಿದ ತಂಡ 11 ರಾಜ್ಯಗಳ ವೇತನವನ್ನ ಪರಿಶೀಲಿಸಿ ಸರ್ಕಾರಕ್ಕೆ ವರದಿ ನೀಡಿದೆ. ಇದರಲ್ಲಿ ಶೇಕಡಾ 22ರಷ್ಟು ವೇತನ ಹೆಚ್ಚಳಕ್ಕೆ ಸಮಿತಿ ಶಿಫಾರಸು ಮಾಡಿದೆ.

ಯಾರ ವೇತನ ಎಷ್ಟು ಹೆಚ್ಚಳ?

- ಪೊಲೀಸ್ ಕಾನ್ಸ್​ಟೇಬಲ್ - 19,600 - 25,200 ರೂ.

- ಹೆಡ್ ಕಾನ್ಸ್​ಟೇಬಲ್ - 21,000 - 28,600 ರೂ.

- ಪೊಲೀಸ್ ಸಬ್ ಇನ್ಸ್​ಪೆಕ್ಟರ್ - 33,550 - 42.500 ರೂ.

- ಪೊಲೀಸ್ ಇನ್ಸ್​ಪೆಕ್ಟರ್ - 36,200 - 50,500 ರೂ.

- ಡಿವೈಎಸ್​ಪಿ / ಎಸಿಪಿ - 46,996 - 53,306 ರೂ.

- ಎಸ್​ಪಿ - 60,600 - 68,300 ರೂ.

ಇನ್ನು ಮೂರು ರಾಜ್ಯಗಳಾದ ಕೇರಳ, ಆಂಧ್ರ ಪ್ರದೇಶ, ಮತ್ತು ಪಶ್ಚಿಮ ಬಂಗಾಳ ಪೊಲೀಸ್​​ ಇಲಾಖೆಯ ವೇತನ ಆಧರಿಸಿ ರಾಜ್ಯ ಪೊಲೀಸ್​ ವೇತನ ಪರಿಷ್ಕರಣೆ ಸಮಿತಿ ಸರ್ಕಾರಕ್ಕೆ ವರದಿ ನೀಡಿದೆ. ಇದ್ರಿಂದಾಗಿ ರಾಜ್ಯ ಸರ್ಕಾರ ಬೊಕ್ಕಸಕ್ಕೆ ವರ್ಷಕ್ಕೆ ಸರಾಸರಿ 875 ಕೋಟಿ ಹೆಚ್ಚುವರಿ ಹೊರೆಯಾಗಲಿದೆ. ಒಟ್ನಲ್ಲಿ ನವರಾತ್ರಿ ಹಬ್ಬಕ್ಕೆ ಪೊಲೀಸ್ ಸಿಬ್ಬಂದಿಗೆ ಭರ್ಜರಿ ಗಿಫ್ಟ್ ಸಿಗುತ್ತದೋ ಇಲ್ಲವೋ ಎಂಬುವುದನ್ನು ಕಾದು ನೋಡಬೇಕು.