ಪೊಲೀಸ್‌ ವೇತನ ಏರಿಕೆ ಜಾರಿಗೆ ದಿಢೀರ್‌ ತಡೆ| ಪೊಲೀಸ್‌ ಪ್ರಧಾನ ಕಚೇರಿ ಸುತ್ತೋಲೆ| ಇದೇ ತಿಂಗಳು ಹೊಸ ವೇತನ ಜಾರಿ: ಸಲೀಂ

ಬೆಂಗಳೂರು[ಸೆ.18]: ನಾಲ್ಕು ದಿನಗಳ ಹಿಂದೆ ಐಪಿಎಸ್‌ ಅಧಿಕಾರಿ ರಾಘವೇಂದ್ರ ಎಚ್‌.ಔರಾದ್ಕರ್‌ ವರದಿಯನ್ವಯ ಪೊಲೀಸರ ವೇತನ ಪರಿಷ್ಕರಣೆ ಮಾಡಿ ಹೊರಡಿಸಿದ್ದ ಆದೇಶಕ್ಕೆ ಮಂಗಳವಾರ ದಿಢೀರನೇ ರಾಜ್ಯ ಪೊಲೀಸ್‌ ಪ್ರಧಾನ ಕಚೇರಿ ಬ್ರೇಕ್‌ ಹಾಕಿದೆ.

ಇದರೊಂದಿಗೆ ಪೊಲೀಸರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ತಾವು ಮುಂದಿನ ಆದೇಶ ನೀಡುವವರೆಗೆ ಪೊಲೀಸರ ಪರಿಷ್ಕೃತ ವೇತನ ಜಾರಿಗೊಳಿಸಬಾರದು ಎಂದು ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ (ಆಡಳಿತ) ಡಾ.ಎಂ.ಎ.ಸಲೀಂ ಸುತ್ತೋಲೆ ಹೊರಡಿಸಿದ್ದಾರೆ.

ಪರಿಷ್ಕೃತ ವೇತನ ತಡೆಗೆ ಇಲಾಖೆ ನಿರ್ದಿಷ್ಟವಾದ ಕಾರಣ ನೀಡದ ಕಾರಣ ಪೊಲೀಸರಲ್ಲಿ ತೀವ್ರ ಅಸಮಾಧಾನ ಉಂಟಾಗಿದೆ. ಪೊಲೀಸರ ವೇತನ ಹೆಚ್ಚಳ ನಿರ್ಧಾರ ತೆಗೆದುಕೊಂಡ ಐಪಿಎಸ್‌ ಅಧಿಕಾರಿಗಳ ಕ್ರಮಕ್ಕೆ ಸರ್ಕಾರದ ಮಟ್ಟದಲ್ಲಿ ಐಎಎಸ್‌ ಸಮೂಹ ಆಕ್ಷೇಪ ವ್ಯಕ್ತಪಡಿಸಿದೆ ಎಂಬ ಮಾತುಗಳು ಕೇಳಿಬಂದಿವೆ.

ಈ ಬಗ್ಗೆ ‘ಕನ್ನಡಪ್ರಭ’ ಜತೆ ಮಾತನಾಡಿದ ಎಡಿಜಿಪಿ (ಆಡಳಿತ) ಸಲೀಂ ಅವರು, ‘ವೇತನ ಪರಿಷ್ಕರಣೆ ಜಾರಿಗೆ ತಾಂತ್ರಿಕ ಆಡಚಣೆ ಎದುರಾಗಿದೆ. ಎಚ್‌ಆರ್‌ಎಂಎಸ್‌ ಮಾಹಿತಿ ಕ್ರೋಢೀಕರಿಸಿ ವೇತನ ಪರಿಷ್ಕರಣೆಗೊಳಿಸಬೇಕಿದೆ. ಈ ಪ್ರಕ್ರಿಯೆ ಎರಡ್ಮೂರು ದಿನಗಳಲ್ಲಿ ಪೂರ್ಣಗೊಳ್ಳಲಿದ್ದು, ಇದೇ ತಿಂಗಳಲ್ಲಿ ಹೊಸ ವೇತನ ಪೊಲೀಸರಿಗೆ ಸಿಗಲಿದೆ’ ಎಂದು ಸ್ಪಷ್ಟಪಡಿಸಿದ್ದಾರೆ.

ಬಹಳ ದಿನಗಳ ಪೊಲೀಸರ ಒತ್ತಾಯದಂತೆ ಸರ್ಕಾರವು ರಾಘವೇಂದ್ರ ಔರಾದ್ಕರ್‌ ವರದಿ ಅನುಸಾರ ವೇತನ ಪರಿಷ್ಕರಿಸಿತ್ತು. ಈ ಸಂಬಂಧ ಸೆ.13ರಂದು ರಾಜ್ಯ ಪೊಲೀಸ್‌ ಮಹಾನಿರ್ದೇಶಕಿ ನೀಲಮಣಿ ಎನ್‌.ರಾಜು ಅಧಿಸೂಚನೆ ಹೊರಡಿಸಿದ್ದರು. ತಮ್ಮ ಹಲವು ದಿನಗಳ ಬೇಡಿಕೆಯೊಂದು ಈಡೇರಿದ್ದಕ್ಕೆ ಪೊಲೀಸರು ಸಹ ಖುಷಿಯಾಗಿದ್ದರು. ಪರಿಷ್ಕೃತ ವೇತನದಲ್ಲಿ ಸಬ್‌ ಇನ್ಸ್‌ಪೆಕ್ಟರ್‌ ಮತ್ತು ಡಿವೈಎಸ್ಪಿಗಳನ್ನು ಕೈಬಿಡಲಾಗಿತ್ತು. ಈ ತಾಂತ್ರಿಕ ತೊಂದರೆ ಸಹ ಪರಿಷ್ಕೃತ ವೇತನ ಆದೇಶ ಜಾರಿಗೆ ಅಡ್ಡಿಯಾಗಿದೆ ಎಂದು ತಿಳಿದು ಬಂದಿದೆ.

ವೇತನ ಜಾರಿಗೆ ತಡೆ ನೀಡುವ ಸಂಬಂಧ ಎಡಿಜಿಪಿ ಸಲೀಂ ಅವರು ವೇತನ ಪರಿಷ್ಕರಣೆ ಕುರಿತು ಸರ್ಕಾರ ಹಾಗೂ ಪ್ರಧಾನ ಕಚೇರಿಯಿಂದ ಆದೇಶ ನೀಡುವವರೆಗೂ ವೇತನ ನಿಗದಿಪಡಿಸುವ ಸಂಬಂಧ ಯಾವುದೇ ಕ್ರಮ ಕೈಗೊಳ್ಳದಿರಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ.