Asianet Suvarna News Asianet Suvarna News

ಚಂಡಮಾರುತ, ಸುನಾಮಿಯಂತ ವಿಕೋಪಕ್ಕೂ ಬಗ್ಗದ ವ್ಯವಸ್ಥೆ ರಾಜ್ಯದಲ್ಲಿ

ಚಂಡ​ಮಾ​ರುತ ಹಾಗೂ ಸುನಾ​ಮಿ​ಯಂತಹ ನೈಸ​ರ್ಗಿಕ ವಿಕೋ​ಪ​ಗ​ಳಿಂದ ರಕ್ಷಿ​ಸಲು ಒಡಿಶಾ ಮಾದ​ರಿಯ ನೈಸ​ರ್ಗಿಕ ವಿಕೋಪ ತಡೆ ಯೋಜನೆ ರಾಜ್ಯ​ದಲ್ಲೂ ಅಳ​ವ​ಡಿ​ಕೆ​ಯಾ​ಗ​ತೊ​ಡ​ಗಿದ್ದು, ಶೀಘ್ರವೇ ಪರಿ​ಪೂರ್ಣ ಪ್ರಮಾ​ಣ​ದಲ್ಲಿ ಕಾರ್ಯ​ರೂ​ಪಕ್ಕೆ ಬರ​ಲಿ​ದೆ.

Karnataka Plan To Implement Natural Calamity Prevent Project
Author
Bengaluru, First Published Oct 18, 2018, 9:03 AM IST

ಬೆಂಗಳೂರು :  ಕರ್ನಾ​ಟ​ಕದ ಕರಾ​ವ​ಳಿ​ಯನ್ನು ಚಂಡ​ಮಾ​ರುತ ಹಾಗೂ ಸುನಾ​ಮಿ​ಯಂತಹ ನೈಸ​ರ್ಗಿಕ ವಿಕೋ​ಪ​ಗ​ಳಿಂದ ರಕ್ಷಿ​ಸಲು ಒಡಿಶಾ ಮಾದ​ರಿಯ ನೈಸ​ರ್ಗಿಕ ವಿಕೋಪ ತಡೆ ಯೋಜನೆ ರಾಜ್ಯ​ದಲ್ಲೂ ಅಳ​ವ​ಡಿ​ಕೆ​ಯಾ​ಗ​ತೊ​ಡ​ಗಿದ್ದು, ಶೀಘ್ರವೇ ಪರಿ​ಪೂರ್ಣ ಪ್ರಮಾ​ಣ​ದಲ್ಲಿ ಕಾರ್ಯ​ರೂ​ಪಕ್ಕೆ ಬರ​ಲಿ​ದೆ.

ಒಡಿಶಾ ರಾಜ್ಯಕ್ಕೆ ಇತ್ತೀ​ಚೆಗೆ ‘ತಿತಿಲಿ’ ಮಹಾ ಚಂಡ​ಮಾ​ರುತ ಅಪ್ಪಳಿಸಿದ್ದರೂ ಆ ರಾಜ್ಯದಲ್ಲಿ ಅತ್ಯಂತ ಕಡಿಮೆ ಜೀವ ಹಾಗೂ ಆಸ್ತಿ​ಪಾಸ್ತಿ ನಾಶ ಅನು​ಭ​ವಿ​ಸಿತ್ತು. ಇದಕ್ಕೆ ಕಾರಣ ಆ ರಾಜ್ಯ​ದಲ್ಲಿ ಅಳ​ವ​ಡಿ​ಸ​ಲಾ​ಗಿ​ರುವ ‘ರಾಷ್ಟ್ರೀಯ ಚಂಡಮಾರುತ ಅಪಾಯ ಉಪಶಮನ ಯೋಜನೆ’ (ಎನ್‌ಸಿಆರ್‌ಎಂಪಿ). ಇದೇ ಯೋಜ​ನೆ ಈಗ ರಾಜ್ಯದ ಮೂರು ಕರಾ​ವಳಿ ಜಿಲ್ಲೆ​ಗ​ಳಲ್ಲಿ ಪ್ರಗ​ತಿ​ಯ​ಲ್ಲಿದ್ದು, ಶೀಘ್ರವೇ ಪರಿ​ಪೂರ್ಣ ಪ್ರಮಾ​ಣ​ದಲ್ಲಿ ಜಾರಿ​ಯಾ​ಗ​ಲಿದೆ. ಅದು ಜಾರಿ​ಯಾ​ದರೆ, ಭಾರಿ ಚಂಡ​ಮಾ​ರುತ ಹಾಗೂ ಸುನಾ​ಮಿ​ಯಂತಹ ನೈಸ​ರ್ಗಿಕ ವಿಕೋ​ಪ​ವನ್ನು ಸಮ​ರ್ಥ​ವಾಗಿ ಎದು​ರಿ​ಸಲು ಕರ್ನಾ​ಟಕ ಸಜ್ಜಾ​ದಂತಾ​ಗು​ತ್ತ​ದೆ.

ಸುನಾಮಿ ದುರಂತದ ಬಳಿಕ ಕೇಂದ್ರ ಸರ್ಕಾರ ವಿಶ್ವಬ್ಯಾಂಕ್‌ನ 130 ಕೋಟಿ ರು. ನೆರವಿನೊಂದಿಗೆ ದೇಶದ ಕಡಲ ತೀರದ ಜನರ ಸುರಕ್ಷತೆ ದೃಷ್ಟಿಯಿಂದ 2012ರಲ್ಲಿ ‘ರಾಷ್ಟ್ರೀಯ ಚಂಡಮಾರುತ ಅಪಾಯ ಉಪಶಮನ ಯೋಜನೆ’ ಆರಂಭಿಸಿತು. ಮೊದಲ ಹಂತದಲ್ಲಿ ಅತಿ ಹೆಚ್ಚು ಚಂಡಮಾರುತ ಹಾನಿಗೆ ಒಳಗಾಗುವ ಒಡಿಶಾ, ಗುಜರಾತ್‌, ಆಂಧ್ರಪ್ರದೇಶ ಮೊದಲಾದ ರಾಜ್ಯಗಳಲ್ಲಿ ಯೋಜನೆ ಅನುಷ್ಠಾನ ಮಾಡಿತು. 2016ರಲ್ಲಿ ಎರಡನೇ ಹಂತದಲ್ಲಿ ಕೇರಳ, ತಮಿಳುನಾಡು, ಕರ್ನಾಟಕ ರಾಜ್ಯದಲ್ಲಿ ಯೋಜನೆ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳ​ಲಾ​ಗಿದೆ. 360 ಕಿ.ಮೀ. ಕಡಲ ಕಿನಾರೆ ಹೊಂದಿರುವ ರಾಜ್ಯದ ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ 9 ತಾಲೂಕುಗಳಲ್ಲಿ ಈ ಯೋಜನೆ ಕಾರ್ಯ​ರೂ​ಪಕ್ಕೆ ಬರು​ತ್ತಿದೆ.

ಹೊಸ ವ್ಯವಸ್ಥೆಯಲ್ಲಿ ಏನೇನಿದೆ?:

ಹಲ​ವಾರು ವಿನೂ​ತನ ಕ್ರಮ​ಗ​ಳನ್ನು ಈ ಯೋಜನೆ ಒಳ​ಗೊಂಡಿದೆ. ನೈಸ​ರ್ಗಿಕ ವಿಕೋ​ಪದ ಸಂದ​ರ್ಭ​ದಲ್ಲಿ ಸಂತ್ರಸ್ತರನ್ನು ತ್ವರಿ​ತ​ವಾಗಿ ಸುರ​ಕ್ಷಿತ ಪ್ರದೇ​ಶಕ್ಕೆ ರವಾ​ನಿ​ಸಲು ಅಗ​ತ್ಯ​ವಾದ ಮೂಲ ಸೌಕರ್ಯ ಹಾಗೂ ಕಾಯಂ ಸೈಕ್ಲೋನ್‌ ಶೆಲ್ಟ​ರ್‌​ಗ​ಳನ್ನು ನಿರ್ಮಿ​ಸ​ಲಾಗುತ್ತಿದೆ. ಅಲ್ಲದೆ, ವಿಕೋಪ ಉಂಟಾದ ಸಂದ​ರ್ಭ​ದಲ್ಲಿ ಬೆಂಗ​ಳೂ​ರಿ​ನಿಂದ ಕರಾ​ವ​ಳಿಯ ಜಿಲ್ಲೆ​ಗ​ಳಿಗೆ ನೇರ​ವಾಗಿ ಸೈರನ್‌ ನೀಡುವ ವ್ಯವಸ್ಥೆಯನ್ನು ಈ ಯೋಜನೆ ಒಳ​ಗೊಂಡಿ​ದೆ.

ಇದರ ಜತೆಗೆ, ತಂತ್ರಜ್ಞಾನ ಅಭಿವೃದ್ಧಿ, ಚಂಡಮಾರುತ ಅಪ್ಪಳಿಸಿದ ಸಂದರ್ಭದಲ್ಲಿ ವೇಗವಾಗಿ ಪರಿಹಾರ ಕಾರ್ಯಾಚರಣೆ ಕೈಗೊಳ್ಳುವುದಕ್ಕೆ ಬೇಕಾದ ಮೂಲಸೌಕರ್ಯ ಅಭಿವೃದ್ಧಿ ಮಾಡಲಾಗುತ್ತಿದೆ. ಚಂಡಮಾರುತ ಅಥವಾ ಸುನಾಮಿ ಅಪ್ಪಳಿದ ಸಂದರ್ಭದಲ್ಲಿ ಸಂತ್ರಸ್ತರಿಗೆ ಊಟ, ವಸತಿ ವ್ಯವಸ್ಥೆ ಮಾಡುವುದಕ್ಕೆ ಕರಾವಳಿ ಜಿಲ್ಲೆಗಳ ಒಂಬತ್ತು ತಾಲೂಕುಗಳಲ್ಲಿ 11 ಬಹೂಪಯೋಗಿ ಕಾಯಂ ಸೈಕ್ಲೋನ್‌ ಶೆಲ್ಟರ್‌ಗಳನ್ನು ನಿರ್ಮಿಸಲಾಗುತ್ತಿದೆ. ಅಲ್ಲಿ ಅಡುಗೆ ಮನೆ, ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ, ಕೊಠಡಿ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ಮಾಡಲಾಗಿದೆ. ಆಯಾ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಮಿತಿಗಳನ್ನು ರಚನೆ ಮಾಡಲಾಗಿದ್ದು, ಶೆಲ್ಟರ್‌ಗಳ ನಿರ್ವಹಣೆ ಜವಾಬ್ದಾರಿ ನೀಡಲಾಗಿದೆ. ದಕ್ಷಿಣ ಕನ್ನಡ ಹಾಗೂ ಉಡುಪಿಯಲ್ಲಿ ತಲಾ ಎರಡು ಸೈಕ್ಲೋನ್‌ ಶೆಲ್ಟರ್‌ ನಿರ್ಮಿಸಲಾಗಿದ್ದು, ಉಳಿದ ಏಳು ಸೈಕ್ಲೋನ್‌ ಶೆಲ್ಟರ್‌ಗಳನ್ನು ಉತ್ತರ ಕನ್ನಡ ಜಿಲ್ಲೆಯಲ್ಲಿ ನಿರ್ಮಿಸಲಾಗುತ್ತಿದೆ. ಶೇ.80ರಷ್ಟುಕಾಮಗಾರಿ ಪೂರ್ಣಗೊಂಡಿದೆ.

48 ಕಿ.ಮೀ. ಕಾಂಕ್ರೀಟ್‌ ರಸ್ತೆ:

ಚಂಡಮಾರುತ, ಸುನಾಮಿ ಸಂದರ್ಭದಲ್ಲಿ ಈ ಪ್ರದೇಶಗಳು ರಸ್ತೆ ಸಂಪರ್ಕ ಕಳೆದುಕೊಳ್ಳುವ ಸಾಧ್ಯತೆಗಳು ಹೆಚ್ಚು. ಹಾಗಾಗಿ, ಈ ಮೂರು ಜಿಲ್ಲೆಗಳಲ್ಲಿ ಹೆದ್ದಾರಿಗಳಿಂದ ಬಹೂಪಯೋಗಿ ಸೈಕ್ಲೋನ್‌ ಶೆಲ್ಟರ್‌ ಕೇಂದ್ರಗಳಿಗೆ ಸಾಗುವ ರಸ್ತೆಗಳನ್ನು ಕಾಂಕ್ರೀಟ್‌ನಿಂದ ನಿರ್ಮಿಸಲಾಗುತ್ತಿದೆ. ಎಷ್ಟೇ ಮಳೆ ಬಂದರೂ ರಸ್ತೆ ಕುಸಿಯದಂತೆ ಅಭಿವೃದ್ಧಿ ಪಡಿಸಲಾಗುತ್ತಿದೆ. ಅಲ್ಲದೇ ಕುಮಟಾದ ಸಮುದ್ರ ತೀರದಲ್ಲಿ 10 ಕೋಟಿ ವೆಚ್ಚದಲ್ಲಿ 7 ಕಿ.ಮೀ. ಉಪ್ಪುನೀರು ತಡೆಗೋಡೆ ನಿರ್ಮಾಣ ಮಾಡಲಾಗುತ್ತಿದೆ.

ಜ್ಞಾನಾಧಾರಿತ ಮುನ್ನೆಚ್ಚರಿಕೆ ವ್ಯವಸ್ಥೆ:

ಅಪಾಯದಲ್ಲಿರುವ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಹಾಗೂ ಮೀನುಗಾರಿಕಾ ಕೇಂದ್ರಗಳಿಗೆ ಎಚ್ಚರಿಕೆ ಸಂದೇಶಗಳನ್ನು ನೀಡುವ ಜವಾಬ್ದಾರಿಯನ್ನು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ವಹಿಸಿಕೊಂಡಿದೆ. ಚಂಡಮಾರುತ ಸಂದರ್ಭದಲ್ಲಿ ಸಂವಹನ ಸಂಪರ್ಕ ಸಂಪೂರ್ಣವಾಗಿ ಕಡಿತಗೊಳ್ಳುತ್ತವೆ. ಹೀಗಾಗಿ ಸಂವಹನ ಕಡಿತಗೊಳ್ಳದಂತೆ ಸ್ಯಾಟಲೈಟ್‌ ಫೋನ್‌, ಡಿಜಿಟಲ್‌ ಮೊಬೈಲ್‌ ರೆಡಿಯೋಗಳ ವ್ಯವಸ್ಥೆ ಮಾಡಲಾಗಿದೆ. ಇದರ ಮೂಲಕ ಜಿಲ್ಲಾಧಿಕಾರಿಗಳು ಮತ್ತು ತಹಶೀಲ್ದಾರ್‌ಗಳು ಸಂಹವನ ನಡೆಸಬಹುದಾಗಿದೆ. ವಿಡಿಯೋ, ಆಡಿಯೋ, ಸಂದೇಶ ಎಲ್ಲವನ್ನೂ ಇದರ ಮೂಲಕ ವಿನಿಮಯ ಮಾಡಿಕೊಳ್ಳಬಹುದಾಗಿದೆ. ಇದರಿಂದ ಪರಿಹಾರ ಕಾರ್ಯಾಚರಣೆಗೆ ಅನುಕೂಲವಾಗಲಿದೆ.

ಬೆಂಗಳೂರಿನಿಂದ ಕರಾವಳಿಯಲ್ಲಿ ಸೈರನ್‌:

ಕಡಲ ಕಿನಾರೆಯ ಅಪಾಯದ ಪ್ರದೇಶಗಳಲ್ಲಿ 60ರಿಂದ 70 ಸೈರನ್‌ ಟವರ್‌ಗಳನ್ನು ಅಳಡಿಸಲಾಗುತ್ತಿದೆ. ಅಪಾಯದ ಮುನ್ಸೂಚನೆಗಳು ಕಂಡುಬಂದ ತಕ್ಷಣ ಬೆಂಗಳೂರಿನ ಕೆಎಸ್‌ಎನ್‌ಡಿಎಂಸಿ ಕಚೇರಿಯಿಂದ ಸೈರನ್‌ ಮೊಳಗಿಸಿ ಎಚ್ಚರಿಕೆ ನೀಡಲಾಗುವುದು. ಇನ್ನು ಸಮೂಹ ಎಚ್ಚರಿಕೆ ಸಂದೇಶ ವ್ಯವಸ್ಥೆಯನ್ನೂ ಮಾಡಲಾಗಿದೆ. ಅಪಾಯದ ಪ್ರದೇಶದಲ್ಲಿ ಇರುವ ಎಲ್ಲ ಮೊಬೈಲ್‌ ಫೋನ್‌ಗಳಿಗೆ ಅಪಾಯದ ಎಚ್ಚರಿಕೆ ಸಂದೇಶ ರವಾನೆಗೆ ಎಲ್ಲ ಮೊಬೈಲ್‌ ಸೇವಾ ಪೂರೈಕೆದಾರ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ.


ಎಲ್ಲೆಲ್ಲಿ ವಿಪತ್ತು ತಡೆ ವ್ಯವಸ್ಥೆ?

ಜಿಲ್ಲೆ       ತಾಲೂಕು

ದಕ್ಷಿಣ ಕನ್ನಡ        ಬಂಟ್ವಾಳ, ಮಂಗಳೂರು

ಉಡುಪಿ        ಕುಂದಾಪುರ, ಉಡುಪಿ

ಉತ್ತರ ಕನ್ನಡ        ಅಂಕೋಲ, ಭಟ್ಕಳ, ಹೊನ್ನಾವರ, ಕಾರವಾರ, ಕುಮಟ

130 ಕೋಟಿ ರು. ವೆಚ್ಚದ ಯೋಜನೆ

2016ರಲ್ಲಿ ಯೋಜನೆ ಆರಂಭ

ವಿಪತ್ತು ತಡೆ ಹೇಗೆ?

- ಕರಾವಳಿ ಪ್ರದೇಶದಲ್ಲಿ 11 ಬಹೂಪಯೋಗಿ ಶಾಶ್ವತ ಗಂಜಿಕೇಂದ್ರ ಆರಂಭ. ಅಲ್ಲಿ ಜನರ ರಕ್ಷಣೆಗೆ ಸಂಪೂರ್ಣ ವ್ಯವಸ್ಥೆ.

- ಸೈಕ್ಲೋನ್‌ ಶೆಲ್ಟರ್‌ಗಳಿಗೆ ಹೆದ್ದಾರಿಯಿಂದ ಸಂಪರ್ಕ ಕಲ್ಪಿಸಲು 48 ಕಿ.ಮೀ. ಕಾಂಕ್ರೀಟ್‌ ರಸ್ತೆ ನಿರ್ಮಾಣ.

- ಕರಾವಳಿ ಊರುಗಳಲ್ಲಿ 60ರಿಂದ 70 ಸೈರನ್‌ ಟವರ್‌ ನಿರ್ಮಾಣ. ಬೆಂಗಳೂರಿನಿಂದಲೇ ಇಲ್ಲಿಗೆ ಚಂಡಮಾರುತದ ಎಚ್ಚರಿಕೆ!

- 7 ಕಿ.ಮೀ. ಉದ್ದದ ಉಪ್ಪು ನೀರು ತಡೆಗೋಡೆ ನಿರ್ಮಾಣ.

- 15 ಕೋಟಿ ರು. ವೆಚ್ಚದಲ್ಲಿ ಮುನ್ನೆಚ್ಚರಿಕೆ ತಂತ್ರಜ್ಞಾನ ಅಭಿವೃದ್ಧಿ.

ಕೇರಳ, ತಮಿಳುನಾಡು ಹಾಗೂ ಕರ್ನಾಟಕಕ್ಕೆ ಅಷ್ಟೊಂದು ದೊಡ್ಡ ಪ್ರಮಾಣದ ಚಂಡಮಾರುತ, ಸುನಾಮಿ ಅಪ್ಪಳಿಸುವ ಸಾಧ್ಯತೆ ಕಡಿಮೆ. ಒಂದು ವೇಳೆ ಸಂಭವಿಸಿದರೂ ಯಾವುದೇ ಜೀವ ಹಾನಿ ಆಗಬಾರದು ಎಂಬುದು ಈ ಯೋಜನೆಯ ಉದ್ದೇಶವಾಗಿದೆ.

- ಪ್ರಭು, ವಿಜ್ಞಾನಿ, ಕೆಎಸ್‌ಎನ್‌ಡಿಎಂಸಿ

ಈಗಾಗಲೇ ಬಹೂಪಯೋಗಿ ಕಾಯಂ ಸೈಕ್ಲೋನ್‌ ಶೆಲ್ಟರ್‌ ಹಾಗೂ ರಸ್ತೆ ನಿರ್ಮಾಣ ಬಹುತೇಕ ಪೂರ್ಣಗೊಂಡಿದೆ. ತಂತ್ರಜ್ಞಾನ ಆಧರಿತ ಕೆಲಸ ಬಾಕಿ ಉಳಿದಿದೆ. ಶೀಘ್ರದಲ್ಲಿ ಪೂರ್ಣಗೊಳಿಸುವುದಕ್ಕೆ ಕ್ರಮ ಕೈಗೊಳ್ಳಲಾಗಿದೆ.

- ಸುಧಾಕರ್‌ ಶೆಟ್ಟಿ, ಯೋಜನಾ ವ್ಯವಸ್ಥಾಪಕ, ಎನ್‌ಸಿಆರ್‌ಎಂಪಿ


ವಿಶ್ವನಾಥ ಮಲೇಬೆನ್ನೂರು

Follow Us:
Download App:
  • android
  • ios