Asianet Suvarna News Asianet Suvarna News

ಜನರ ಭಾವನೆ, ರಾಜಕಾರಣ ಮತ್ತು ಎಚ್‌ಡಿಕೆ ಕಣ್ಣೀರು: ಏನು, ಎತ್ತ?

ಚುನಾವಣೆಗೂ ಮುನ್ನ ಭರವಸೆ ನೀಡುವ ಭರದಲ್ಲಿ ಕುಮಾರಸ್ವಾಮಿ ಹೇಳಿದ್ದ ಸಾಲ ಮನ್ನಾ ವಿಚಾರವೇ ಅವರ ಕಣ್ಣಲ್ಲಿ ನೀರು ತರಿಸಿತೆ? ಗೊತ್ತಿಲ್ಲ ಆದರೆ ಹೀಗೊಂದು ಪ್ರಶ್ನೆ ಕೇಳಿಕೊಳ್ಳಲೇಬೇಕಿದೆ.. ಜತೆಗೆ ಅದಕ್ಕೆ ಉತ್ತರವನ್ನು ಹುಡುಕಬೇಕಿದೆ.

Karnataka People Feelings and HD Kumaraswamy tears and Politics an Overview
Author
Bengaluru, First Published Jul 15, 2018, 5:51 PM IST

ಬೆಂಗಳೂರು[ಜು.15]  ವೇದಿಕೆಯಲ್ಲೇ ಮಾತನಾಡುತ್ತ ಕುಮಾರಸ್ವಾಮಿ  ‘ಮೈತ್ರಿ ಸರ್ಕಾರದಲ್ಲಿ ನಾನು ವಿಷಕಂಠನಾಗಿದ್ದೇನೆ. ನಾನು ಸಂತಸದಿಂದ ಇಲ್ಲ. ಮುಳ್ಳಿನ ಆಸನದಲ್ಲಿ ಕುಳಿತಿದ್ದೇನೆ. ಹಿಂದಿನ ಸರ್ಕಾರದ ಸಾಲಮನ್ನಾದ ಹೊರೆಯೂ ನನ್ನಮೇಲಿದೆ. ಈಗ ಸಾಲಮನ್ನಾ ಮಾಡಿದರೂ ಎಲ್ಲರನ್ನು ತೃಪ್ತಿ ಪಡಿಸಲು ಸಾಧ್ಯವಾಗಿಲ್ಲ.. ಎನ್ನುತ್ತಲೇ ಕಣ್ಣೀರು ಹಾಕಿದ್ದರು.

ಇಡಿ ಭಾಷಣದ ಉದ್ದಕ್ಕೂ ಭಾವನಾತ್ಮಕವಾಗಿಯೇ ಕುಮಾರಸ್ವಾಮಿ ಮಾತನಾಡಿದರು. ಚುನಾವಣೆ ಪ್ರಚಾರದ ವೇಳೆಯೂ ‘ನಾನು ಬದುಕಬೇಕು ಎಂದರೆ ಮತ ಕೊಡಿ’ ಎಂದು ಕೇಳಿದ್ದರು. ಕನ್ನಡ ನಾಡಿನ ಜನರ ಸೆಂಟಿಮೆಂಟ್ ಗಳೊಂದಿಗೆ ಕುಮಾರಸ್ವಾಮಿ ಬೆರೆಯುವ ಯತ್ನ ಮಾಡುತ್ತಿದ್ದಾರೆಯೇ? ಅದೂ ಗೊತ್ತಿಲ್ಲ.

ನಿನ್ನೆಯ ಅವರ ಭಾಷಣದ ಒಂದೊಂದು ಹೇಳಿಕೆಗಳು ರಾಜ್ಯದ ರೈತರನ್ನೋ ಅಥವಾ ವಿರೋಧಿಗಳನ್ನೋ ಉದ್ದೇಶಿಸಿ ಹೇಳಿದಂತೆ ಇರಲಿಲ್ಲ. ಅವರ ಒಂದೊಂದು ಮಾತಿಗೂ ಒಂದೊಂದು ಅರ್ಥವನ್ನೇ ಹುಡುಕಬಹುದು. ಭಾವನೆಗಳ ಜತೆ ಆಟ ಆಡುವ ಹಳೆಯ ರಾಜಕಾರಣಕ್ಕೆ ಕುಮಾರಸ್ವಾಮಿ ಹೊಸ ರೂಪ ಕೊಟ್ಟರೆ?

ಜನ ಸೇರುತ್ತಾರೆ.. ಮತ ಹಾಕುತ್ತಿಲ್ಲ!  ನಿಮ್ಮೆಲ್ಲರ ಅಣ್ಣನೋ ತಮ್ಮನೋ ಮುಖ್ಯಮಂತ್ರಿ ಯಾಗಿದ್ದಾರೆ ಎಂದು ನೀವೆಲ್ಲಾ ಸಂತೋಷವಾಗಿದ್ದೀರಿ. ಆದರೆ ನಾನು ಸಂತೋಷವಾಗಿಲ್ಲ. ನಾನು ಹೋದ ಕಡೆಯೆಲ್ಲಾ ಜನ ಸೇರುತ್ತಾರೆ.ಪ್ರೀತಿ ತೋರಿಸುತ್ತಾರೆ .ಆದರೆ ಅದೇ ಪ್ರೀತಿಯನ್ನು ನನ್ಮ ಪಕ್ಷದ ಮೇಲೆ,ಅಭ್ಯರ್ಥಿಗಳ ಮೇಲೆ ಏಕೆ ತೋರಿಸುತ್ತಿಲ್ಲ ಎಂಬುದು ಅರ್ಥವಾಗುತ್ತಿಲ್ಲ‌ ಎನ್ನುವ ಮಾತನ್ನು ಹೇಳಿದ ಕುಮಾರಸ್ವಾಮಿ ಜೆಡಿಎಸ್ ಗೆ ಪೂರ್ಣ ಅಧಿಕಾರ ಸಿಕ್ಕಿಲ್ಲ ಎಂಬುದನ್ನು ಮತ್ತೊಮ್ಮೆ ಹೇಳಿದರು.

ಮೆರೆಯಲು ಮುಖ್ಯಮಂತ್ರಿ ಆಗಿಲ್ಲ ! ಅದಕ್ಕೆ ಜನಕ್ಕೆ ದೋಷ ಕೊಡಲ್ಲ.ನನ್ಮ ತಂದೆ ತಾಯಿ ಮಾಡಿದ ಪೂಜೆಯ ಫಲವಾಗಿ ನನಗೆ ಮತ್ತೆ ಅಧಿಕಾರ ಸಿಕ್ಕಿದೆ.ಮುಖ್ಯಮಂತ್ರಿ ಯಾಗಿ ಜವಾಬ್ದಾರಿ ನಿರ್ವಹಿಸಬೇಕಾಗಿದೆ.  ಮುಖ್ಯಮಂತ್ರಿ ಆಗಿ ಮೆರೆಯಬೇಕೆಂದು ನಾನು ಮುಖ್ಯಮಂತ್ರಿ ಆಗಲಿಲ್ಲ ಎನ್ನುತ್ತಾ ಜನರ ಮುಂದೆ ತಾವೇ ಕಷ್ಟದಲ್ಲಿದ್ದೇನೆ ಎಂದು ಹೇಳಿಕೊಂಡರು.

ಮಾಧ್ಯಮಗಳು ನನ್ನ ವಿರುದ್ಧ ಇವೆ: ಒಂದು ವರ್ಗದ ಮಾಧ್ಯಮಗಳು ನನ್ನ ವಿರುದ್ಧ ಇವೆ. ಮಾಧ್ಯಮಗಳಿಗೆ ನನ್ನ ಮೇಲೆ ಯಾಕೆ ಆಕ್ರೋಶ ಇದೆ ನಾನು ಮಾಡಿದ ತಪ್ಪಾದರೂ ಏನು? ಇದು ನನಗೆ ಯಾವಾಗಲೂ ಕೊರೆಯುತ್ತಿರುತ್ತದೆ ಎನ್ನುವ ಮೂಲಕ ಸರಕಾರದ ಕ್ರಮಗಳನ್ನು ಖಂಡಿಸುವ ಮಾಧ್ಯಮಗಳಿಗೂ ಸಣ್ಣದಾಗಿ ಟಾಂಗ್ ನೀಡಿದರು.

ಮೊದಲಿಗೆ ರೈತರ ಸುಸ್ತಿ ಸಾಲ ಮನ್ನಾ ಘೋಷಿಸಿದ್ದ ಸಿಎಂ ನಂತರ ಚಾಲ್ತಿ ಖಾತೆಯ 1 ಲಕ್ಷ ರೂ. ಸಾಲ ಮನ್ನಾಕ್ಕೂ ಒಪ್ಪಿಗೆ ನೀಡಿದರು. ಆದರೆ ಅವರ ಇತ್ತೀಚಿನ ಪ್ರತಿ ಮಾತು ಒಂದು ಕಡೆ ಬಿಜೆಪಿ ಟೀಕೆ, ಇನ್ನೊಂದು ಕಡೆ ಮಾಧ್ಯಮಗಳ ಟೀಕೆಗೆ ಸೀಮಿತವಾಗಿಲ್ಲ. ರಾಜ್ಯದ ಜನರ ಭಾವನೆಗಳನ್ನು ಹೆಕ್ಕಿ ಅದರ ಜತೆ ಮಾತನಾಡುವ ಯತ್ನ ಮಾಡುತ್ತಿದ್ದಾರೆ. ಎಲ್ಲದರಲ್ಲೂ ರಾಜಕಾರಣವೇ ಅಡಗಿದೆ ಎಂದು ಹೇಳಲಾಗಲ್ಲ. ಆದರೆ ರಾಜಕಾರಣವಿಲ್ಲದ ಭಾಷಣ ಇಲ್ಲ!

ಕಾಂಗ್ರೆಸ್ ನವರ ಕಿರುಕುಳ: ಮುಖ್ಯಮಂತ್ರಿ ಸ್ಥಾನ ಒಪ್ಪಿಕೊಂಡಾಗಿದೆ. ಆದರೆ ಕಾಂಗ್ರೆಸ್ ನಾಯಕರಿಂದ ಬರುತ್ತಿರುವ ಒತ್ತಡ ಕಡಿಮೆಯಾಗಿಲ್ಲ. ಒಂದು ಕಡೆ ಮಾಜಿ ಸಿಎಂ ಸಿದ್ದರಾಮಯ್ಯ ಬಹಿರಂಗ ಹೇಳಿಕೆ ನೀಡುತ್ತಿದ್ದಾರೆ.. ಸರಣಿ ಪತ್ರ ಬರೆಯುತ್ತಿದ್ದಾರೆ.. ಕೆಲ ಕಾಂಗ್ರೆಸ್ ನಾಯಕರೆ ಸರಕಾರದ ಕ್ರಮ ಟೀಕಿಸುತ್ತಿದ್ದಾರೆ. ಈ ಎಲ್ಲ ಅಂಶಗಳು ಕುಮಾರಸ್ವಾಮಿ ಕಣ್ಣೀರಿಗೆ ಕಾರಣವಾಯಿತೆ?

ತೈಲಕ್ಕೆ ಹೆಚ್ಚಿಗೆ ಹಣ ನೀಡಲು ಆರಂಭಿಸಿದ್ದೇವೆ. ವಿದ್ಯುತ್ ಶಾಕ್ ಶುರುವಾಗ್ತಿದೆ.  ಮದ್ಯ ವ್ಯಸನಿಗಳ ಜೇಬಿಗೆ ಬಿಸಿ ತಾಗಿದೆ. ಸಹಕಾರ ಸಂಘಗಳಿಗೆ ಸಿದ್ದರಾಮಯ್ಯ ನೀಡಿದ್ದ 50 ಸಾವಿರ ಮನ್ನಾದ ಹಣವೇ ಪೂರ್ಣವಾಗಿ ಬಿಡುಗಡೆಯಾಗಿಲ್ಲ. ಕುಮಾರಸ್ವಾಮಿ ಬಜೆಟ್ ನಲ್ಲಿ ಘೋಷಣೆ ಮಾಡಿದ್ದರೂ ರೈತರಿಗೆ ತಲುಪುವ ನಿರ್ದೇಶನ ಸೂತ್ರಗಳು ಲಭ್ಯವಾಗಿಲ್ಲ. ಆದರೆ ಪ್ರಶ್ನೆಗಳಿಗೆ ಉತ್ತರ ಕೊಡುವ ಬದಲು ಸಿಎಂ ಭಾವನಾತ್ಮಕ ಭಾಷಣ ಮಾಡಿದರು.

Follow Us:
Download App:
  • android
  • ios