Asianet Suvarna News Asianet Suvarna News

ಬಿಜೆಪಿಯಲ್ಲೀಗ ಎಂಎಲ್ ಸಿ ಹುದ್ದೆಗಾಗಿ ಶುರುವಾಗಿದೆ ತೀವ್ರ ಲಾಬಿ

ಬರುವ ಜೂ.11 ರಂದು ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ನಡೆಯಲಿರುವ ಚುನಾವಣೆಯಲ್ಲಿ ಪ್ರಮುಖ ಪ್ರತಿಪಕ್ಷ ಬಿಜೆಪಿ ಪಾಲಿಗೆ ಐದು ಸ್ಥಾನಗಳು ನಿರಾಯಾಸವಾಗಿ ಲಭಿಸಲಿದ್ದು, ಇದಕ್ಕಾಗಿ ಪಕ್ಷದಲ್ಲಿ ಬಿರುಸಿನ ಚಟುವಟಿಕೆಗಳು  ಆರಂಭಗೊಂಡಿವೆ. 

Karnataka MLC polls 2018  : Lobby In BJP

ಬೆಂಗಳೂರು :  ಬರುವ ಜೂ.11 ರಂದು ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ನಡೆಯಲಿರುವ ಚುನಾವಣೆಯಲ್ಲಿ ಪ್ರಮುಖ ಪ್ರತಿಪಕ್ಷ ಬಿಜೆಪಿ ಪಾಲಿಗೆ ಐದು ಸ್ಥಾನಗಳು ನಿರಾಯಾಸವಾಗಿ ಲಭಿಸಲಿದ್ದು, ಇದಕ್ಕಾಗಿ ಪಕ್ಷದಲ್ಲಿ ಬಿರುಸಿನ ಚಟುವಟಿಕೆಗಳು  ಆರಂಭಗೊಂಡಿವೆ. 

ಇದೇ ತಿಂಗಳ 31  ರಂದು ಅಂದರೆ, ಗುರುವಾರ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ಇನ್ನುಳಿದ ಎರಡ್ಮೂರು ದಿನಗಳಲ್ಲಿ ಅಭ್ಯರ್ಥಿಗಳನ್ನು ಅಂತಿಮಗೊಳಿಸಬೇಕಿದೆ. ಇದಕ್ಕಾಗಿ ಬಿಜೆಪಿಯ ಹಿರಿಯ ನಾಯಕರು ತೆರೆಮರೆಯಲ್ಲಿ ಸತತ ಮಾತುಕತೆ, ಪರಿಶೀಲನೆ ಕಾರ್ಯ ನಡೆಸಿದ್ದಾರೆ. 

ಕಳೆದ ಬಾರಿ ಪಕ್ಷದಿಂದ ಚುನಾಯಿತರಾಗಿದ್ದ ಬಿ.ಜೆ.ಪುಟ್ಟಸ್ವಾಮಿ, ಡಿ.ಎಸ್.ವೀರಯ್ಯ, ಎಂ.ಬಿ.ಭಾನುಪ್ರಕಾಶ್, ರಘುನಾಥರಾವ್ ಮಲ್ಕಾಪುರೆ ಹಾಗೂ ಸೋಮಣ್ಣ ಬೇವಿನಮರದ ಅವರ ಅವಧಿ ಮುಕ್ತಾಯಗೊಳ್ಳುತ್ತಿದೆ. ಆದರೆ, ಈ ಪೈಕಿ ಸೋಮಣ್ಣ ಬೇವಿನಮರದ ಅವರು ಈಗಾಗಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಪಕ್ಷ ತೊರೆದಿದ್ದಾರೆ.  
 
ಹೀಗಾಗಿ, ತೆರವುಗೊಳಿಸುತ್ತಿರುವ ನಾಲ್ವರ ಪೈಕಿ ಯಾರಿಗಾದರೂ ಮತ್ತೊಮ್ಮೆ ಅವಕಾಶ ಸಿಗುತ್ತಾ ಎಂಬ ಕುತೂಹಲವೂ ಇದೆ. ಪುಟ್ಟಸ್ವಾಮಿ ಮತ್ತು ವೀರಯ್ಯ ಅವರಿಬ್ಬರೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಅವರ ಪರಮಾಪ್ತರು. ಅವರಿಬ್ಬರೂ ಮೂರನೇ ಅವಧಿಗೆ ಪ್ರಯತ್ನವನ್ನೂ ಮುಂದುವರೆಸಿದ್ದಾರೆ. ಯಡಿಯೂರಪ್ಪ ಅವರಿಗೆ ಒಲವಿದ್ದರೂ ಪಕ್ಷದ ಹೈಕಮಾಂಡ್ ಅವಕಾಶ ನೀಡುವ ಬಗ್ಗೆ ಅನುಮಾನವೂ ಇದೆ. ಈ ಬಗ್ಗೆ ಇನ್ನೆರಡು ದಿನಗಳಲ್ಲಿ ಸ್ಪಷ್ಟ ಚಿತ್ರಣ ಹೊರಬೀಳಲಿದೆ ಎಂದು ಮೂಲಗಳು ತಿಳಿಸಿವೆ.

ಪುಟ್ಟಸ್ವಾಮಿ ಅವರಿಗೆ ವಯಸ್ಸಾಗಿದೆ ಎಂಬ ಕಾರಣಕ್ಕಾಗಿ ಅವರನ್ನು ಮುಂದುವರೆಸುವುದು ಬೇಡ ಎಂಬ ವಾದ ಕೇಳಿಬಂದಿದೆ. ಅದೇ ರೀತಿ ವೀರಯ್ಯ ಅವರನ್ನು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕೋಲಾರ ಮೀಸಲು ಕ್ಷೇತ್ರದಿಂದ ಅಭ್ಯರ್ಥಿಯನ್ನಾಗಿಸುವುದು ಸೂಕ್ತ ಎಂಬ ಅಭಿಪ್ರಾಯವೂ ಇದೆ.

ಈ ಬಾರಿ ಐದು ಸ್ಥಾನಗಳನ್ನು ವೀರಶೈವ ಲಿಂಗಾಯತ, ಒಕ್ಕಲಿಗ, ಇತರ ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ, ಬ್ರಾಹ್ಮಣ ಹಾಗೂ ಮುಸ್ಲಿಂ ಎಂಬ ಕೋಟಾಗಳಲ್ಲಿ ಹಂಚಿಕೆ ಮಾಡಲು ಚಿಂತನೆ ನಡೆದಿದೆ. ವೀರ ಶೈವ ಲಿಂಗಾಯತ ಕೋಟಾದಡಿ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅವರಿಗೆ ವಿಧಾನಸಭಾ ಕ್ಷೇತ್ರ ಬಿಟ್ಟುಕೊಟ್ಟಿದ್ದ ಜಿಲ್ಲಾಧ್ಯಕ್ಷ ರುದ್ರೇಗೌಡ, ಕ್ರೀಡಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಹಾಗೂ ಸಂಘ ಪರಿವಾರದ ಒಲವು ಹೊಂದಿರುವ ಗಿರೀಶ್ ಪಟೇಲ್ ಮತ್ತು ಹುಬ್ಬಳ್ಳಿ ಧಾರವಾಡದ ಮುಖಂಡ ಲಿಂಗರಾಜ ಪಾಟೀಲ್ ಅವರ ಪೈಕಿ ಒಬ್ಬರನ್ನು ಅಭ್ಯರ್ಥಿಯನ್ನಾಗಿಸುವ ಸಾಧ್ಯತೆಯಿದೆ. 

ಎನ್ನಲಾಗುತ್ತಿದೆ. ಭಾನುಪ್ರಕಾಶ್ ಅವರಿಂದ ತೆರವಾಗುವ ಒಂದು ಸ್ಥಾನವನ್ನು ಯಡಿಯೂರಪ್ಪ ಅವರು ತಮ್ಮ ಜಿಲ್ಲೆಗೆ ಉಳಿಸಿಕೊಳ್ಳುತ್ತಾರಾ ಎಂಬುದನ್ನು ಕಾದು ನೋಡಬೇಕು. ಒಕ್ಕಲಿಗ ಸಮುದಾಯದಿಂದ ಪಕ್ಷದ ವಕ್ತಾರ ಅಶ್ವತ್ಥನಾರಾಯಣ ಹಾಗೂ ಸಹ ವಕ್ತಾರರಾದ ತೇಜಸ್ವಿನಿ ಗೌಡ ಅವರ ಹೆಸರುಗಳು ಮುಂಚೂಣಿಯಲ್ಲಿವೆ. ಮಹಿಳೆಯೊಬ್ಬರನ್ನು ಪರಿಷತ್ತಿಗೆ ಕಳುಹಿಸಬೇಕು ಎಂಬ ನಿರ್ಧಾರ ಹೊರಬಿದ್ದಲ್ಲಿ ತೇಜಸ್ವಿನಿಗೌಡ ಅವರ ಪಾಲಾಗಬಹುದು. 

ಇತರ ಹಿಂದುಳಿದ ವರ್ಗದಿಂದ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್, ಪರಿಷತ್ತಿನ ಮಾಜಿ ಸದಸ್ಯ ಶಂಕರಪ್ಪ, ಮಾಜಿ ಶಾಸಕ ರಾಜಶೇಖರ್ ಶೀಲವಂತರ್ ಅವರ ಹೆಸರುಗಳು ಕೇಳಿಬರುತ್ತಿವೆ. ಜೊತೆಗೆ ಕುರುಬ ಸಮುದಾಯದಿಂದ ಮತ್ತೊಂದು ಬಾರಿ ಮುಂದುವರೆಸಬಹುದೇ ಎಂಬುದನ್ನು ಕಾದು ನೋಡಬೇಕು. ಪರಿಶಿಷ್ಟ ಜಾತಿ ಕೋಟಾದಡಿಯಲ್ಲಿ ಆನೇಕಲ್ಲಿನ ಮಾಜಿ ಶಾಸಕ ನಾರಾಯಣಸ್ವಾಮಿ ಅವರ ಹೆಸರು ಪರಿಶೀಲನೆಯಲ್ಲಿದೆ. ಬ್ರಾಹ್ಮಣ ಸಮುದಾಯದಿಂದ ಪಕ್ಷದ ಸಹ ವಕ್ತಾರರಾದ ಡಾ.ವಾಮನಾಚಾರ್ಯ ಹಾಗೂ ಖಜಾಂಚಿ ಸುಬ್ಬ ನರಸಿಂಹ ಅವರ ಹೆಸರುಗಳಿವೆ. 

ಮುಸ್ಲಿಂ ವರ್ಗಕ್ಕೆ ಒಂದು ಸ್ಥಾನ ನೀಡಬೇಕು ಎಂಬ ಚರ್ಚೆ ಪಕ್ಷದಲ್ಲಿ ಗಂಭೀರವಾಗಿ ನಡೆಯುತ್ತಿದೆ. ರಾಜ್ಯ ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ ಹಾಗೂ ಮಾಜಿ ಶಾಸಕ ಅಬ್ದುಲ್ ಅಜಿಂ ಅವರ ಪೈಕಿ ಒಬ್ಬರಿಗೆ ಅವಕಾಶ ಸಿಗಬಹುದು ಎನ್ನಲಾಗುತ್ತಿದೆ. ಒಟ್ಟು 11  ಸ್ಥಾನ ಖಾಲಿ: ವಿಧಾನಸಭೆಯಿಂದ    ವಿಧಾನಪರಿಷತ್ತಿನ 11 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಈ ಪೈಕಿ ಸಂಖ್ಯಾಬಲದ ಆಧಾರದ ಮೇಲೆ ಬಿಜೆಪಿಗೆ ಐದು ಸ್ಥಾನಗಳು ಲಭಿಸಲಿವೆ. ಕಾಂಗ್ರೆಸ್ಸಿಗೆ ನಾಲ್ಕು ಮತ್ತು ಜೆಡಿಎಸ್‌ಗೆ ಎರಡು ಸ್ಥಾನಗಳು ಸಿಗಲಿವೆ.

ಜೆಡಿಎಸ್‌ಗೆ ಎರಡು ಸ್ಥಾನಗಳು ಲಭ್ಯವಾಗಲಿದ್ದು, ಈ ಪೈಕಿ ಒಂದು ಸ್ಥಾನವನ್ನು ಮುಸ್ಲಿಂ ಸಮುದಾಯಕ್ಕೆ ಸೇರಿದ ಪಕ್ಷದ ಹಿರಿಯ ಮುಖಂಡ ಹಾಗೂ ಕಳೆದ ಎರಡು ಬಾರಿ ರಾಜ್ಯಸಭಾ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದ ಬಿ.ಎಂ.ಫಾರೂಕ್ ಅವರಿಗೆ ನೀಡುವ ಸಾಧ್ಯತೆ ಹೆಚ್ಚಾಗಿದೆ. ಇನ್ನುಳಿದ ಒಂದು ಸ್ಥಾನಕ್ಕೆ ವಿಧಾನಸಭಾ ಚುನಾವಣೆಯಲ್ಲಿ ಸೋಲು ಅನುಭವಿಸಿದ ವೈ.ಎಸ್.ವಿ.ದತ್ತ, ಮಧು ಬಂಗಾರಪ್ಪ, ಎನ್.ಎಚ್.ಕೋನರೆಡ್ಡಿ ಮೊದಲಾದವರು ಹೆಸರುಗಳು ಕೇಳಿಬರುತ್ತಿವೆಯಾದರೂ ಅಂತಿಮಗೊಂಡಿಲ್ಲ.

Follow Us:
Download App:
  • android
  • ios