ಡೆಮಾಕ್ರೆಟಿಕ್ ರಿಫಾರ್ಮ್ಸ್ ಅಸೋಸಿಯೇಶನ್ ಹಾಗೂ ನ್ಯಾಷನಲ್ ಇಲೆಕ್ಷನ್ ವಾಚ್ ಸಂಸ್ಥೆಗಳ ಜಂಟಿ ಅಧ್ಯಯನದಿಂದ ಈ ಕುತೂಹಲಕರ ಅಂಶ ಬೆಳಕಿಗೆ ಬಂದಿದೆ. ಅದರಲ್ಲಿ ಕರ್ನಾಟಕ ಶಾಸಕರು ಅತ್ಯಂತ ಶ್ರೀಮಂತರು ಎನಿಸಿಕೊಂಡಿದ್ದಾರೆ.
ನವದಹಲಿ: ದೇಶದಲ್ಲೇ ಕರ್ನಾಟಕ ಶಾಸಕರ ವಾರ್ಷಿಕ ಆದಾಯ ಅತಿ ಹೆಚ್ಚು ಇದ್ದು, ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಕರ್ನಾಟಕ ಶಾಸಕರ ಸರಾಸರಿ ವಾರ್ಷಿಕ ಆದಾಯ 1.11 ಕೋಟಿ ರು. ಆಗಿದೆ ಎಂದು ಅಧ್ಯಯನವೊಂದರಿಂದ ತಿಳಿದುಬಂದಿದೆ.
ಡೆಮಾಕ್ರೆಟಿಕ್ ರಿಫಾರ್ಮ್ಸ್ ಅಸೋಸಿಯೇಶನ್ ಹಾಗೂ ನ್ಯಾಷನಲ್ ಇಲೆಕ್ಷನ್ ವಾಚ್ ಸಂಸ್ಥೆಗಳ ಜಂಟಿ ಅಧ್ಯಯನದಿಂದ ಈ ಕುತೂಹಲಕರ ಅಂಶ ಬೆಳಕಿಗೆ ಬಂದಿದೆ. ದೇಶದ ಒಟ್ಟಾರೆ ಶಾಸಕರ ವಾರ್ಷಿಕ ಆದಾಯ 24.59 ಲಕ್ಷ ರುಪಾಯಿ ಇದೆ.
ಕರ್ನಾಟಕಕ್ಕೆ ಹೋಲಿಸಿದರೆ ಛತ್ತೀಸ್‌ಗಢ ಶಾಸಕರ ವಾರ್ಷಿಕ ಆದಾಯ ನಗಣ್ಯವಾಗಿದ್ದು, ವಾರ್ಷಿಕ 5.4 ಲಕ್ಷ ರು. ಸರಾಸರಿ ಆದಾಯ ಹೊಂದುವ ಮೂಲಕ ದೇಶದಲ್ಲೇ ಅತಿ ಕನಿಷ್ಠ ಆದಾಯದ ಶಾಸಕರಾಗಿದ್ದಾರೆ. ಅಧ್ಯಯನದಲ್ಲಿ ಕರ್ನಾಟಕದ 224 ಶಾಸಕರ ಪೈಕಿ 203 ಜನರ
ಆದಾಯವನ್ನು ಅಳೆಯಲಾಗಿದ್ದು, ಇವರ ಸರಾಸರಿ ವಾರ್ಷಿಕ ಆದಾಯ 111.4 ಲಕ್ಷ (1.11ಕೋಟಿ ರುಪಾಯಿ) ಆಗಿದೆ. ಎರಡನೇ ಸ್ಥಾನದಲ್ಲಿ ಮಹಾರಾಷ್ಟ್ರ 43.3 ಲಕ್ಷ ರು. ಆಗಿದೆ. ದೇಶದ ಒಟ್ಟಾರೆ 4086 ಹಾಲಿ ಶಾಸಕರ ಪೈಕಿ 3145 ಶಾಸಕರ ಸ್ವಘೋಷಿತ ಆಸ್ತಿ ವಿವರವನ್ನು ವಿಶ್ಲೇಷಿಸಲಾಗಿದೆ. 941 ಶಾಸಕರು ಆಸ್ತಿಯನ್ನೇ ಘೋಷಿಸಿಕೊಂಡಿಲ್ಲ.
