ವಿಜಯಪುರ :  ಗೃಹ ಖಾತೆ ಒಂದು ಪ್ರತಿಷ್ಠೆಯ ಖಾತೆಯಾಗಿದೆ. ಮುಖ್ಯಮಂತ್ರಿ ನಂತರ, ಎರಡನೇ ಸ್ಥಾನದಲ್ಲಿರುವ ಖಾತೆ. ಆದರೆ ನನ್ನ ಹೃದಯ ನೀರಿನಲ್ಲಿದೆ. ಖಾತೆ ಹಂಚಿಕೆಯಲ್ಲಿ ನನಗೆ ಮೋಸವಾಗಿದೆ ಎಂದು ಗೃಹ ಸಚಿವ ಎಂ.ಬಿ.ಪಾಟೀಲ್‌ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.

ವಿಜಯಪುರ ಜಿಲ್ಲೆಯ ಬಬಲೇಶ್ವರ ವಿಧಾನಸಭೆ ಮತಕ್ಷೇತ್ರದ ಹೊನವಾಡ ಹಾಗೂ ಕನಮಡಿ ಗ್ರಾಮದಲ್ಲಿ ಗುರುವಾರ ಮೈತ್ರಿ ಅಭ್ಯರ್ಥಿ ಡಾ.ಸುನಿತಾ ಚವ್ಹಾಣ ಪರವಾಗಿ ಮತಯಾಚನೆ ಮಾಡಿದ ಅವರು, ಖಾತೆ ಹಂಚಿಕೆಯಲ್ಲಿ ನನಗೂ ಮೋಸವಾಗಿದೆ. ನನಗೆ ಜಲಸಂಪನ್ಮೂಲ ಖಾತೆ ಬೇಕಿತ್ತು.

ಆದರೆ ಗೃಹ ಖಾತೆ ದೊರೆತಿದೆ. ಇನ್ನೊಂದು ಬಾರಿ ನಾನು ಜಲಸಂಪನ್ಮೂಲ ಸಚಿವನಾಗಿದ್ದರೆ ರಾಜ್ಯದ ನೀರಾವರಿ ಚಿತ್ರಣವನ್ನೇ ಬದಲಿಸುತ್ತಿದ್ದೆ. ಹಾಗೆಂದ ಮಾತ್ರಕ್ಕೆ ನಾನು ಈಗಲೂ ಸುಮ್ಮನೆ ಕುಳಿತಿಲ್ಲ. ಚುನಾವಣೆ ನೀತಿ ಸಂಹಿತೆ ಜಾರಿಯಾಗುವ ಮುಂಚೆಯೇ ಎಲ್ಲ ನೀರಾವರಿ ಯೋಜನೆಗಳ ಕಾಮಗಾರಿಯನ್ನು ಒಂದು ಸುತ್ತು ಹಾಕಿ ಪರಿಶೀಲಿಸಿದ್ದೇನೆ.

 ಸಿದ್ದೇಶ್ವರ ಶ್ರೀಗಳ ಮಾತಿನಂತೆ ನಾನು ನಡೆದುಕೊಂಡಿದ್ದೇನೆ. ಈಗ ನಾನು ಹೊಂದಿರುವ ಖಾತೆ ಚಿಕ್ಕದಲ್ಲ. ಇದು ಸಿಎಂ ನಂತರ ಎರಡನೇ ಸ್ಥಾನದಲ್ಲಿರುವ ಖಾತೆ. ಆದರೂ ನನ್ನ ಹೃದಯ ಇರುವುದು ನೀರಾವರಿಯಲ್ಲಿ ಎಂದು ಪುನರುಚ್ಚರಿಸಿದರು.