ವಿಧಾನಸಭೆ :  ವಿಧಾನಸಭೆ ಹಾಗೂ ಲೋಕಸಭೆ ಉಪಚುನಾವಣೆ, ಶಾಸಕರ ಕಾರು ಖರೀದಿ, ಸಾಲಮನ್ನಾ, ಬೆಳಗಾವಿ ಆಧಿವೇಶನ, ಮೈಸೂರು ದಸರಾ ಸೇರಿದಂತೆ ವಿವಿಧ ಉದ್ದೇಶಗಳಿಗಾಗಿ 6980 ಕೋಟಿ ರು. ಪೂರಕ ಅಂದಾಜನ್ನು ಕೆಳಮನೆಯಲ್ಲಿ ಮಂಡಿಸಲಾಯಿತು.

ಕುತೂಹಲಕಾರಿ ಸಂಗತಿಯೆಂದರೆ, ಪೂರಕ ಅಂದಾಜಿನಲ್ಲೂ ಅನುದಾನ ಪಡೆಯಲು ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ ಮೇಲುಗೈ ಸಾಧಿಸಿದ್ದಾರೆ.

ಹಣಕಾಸು ಸಚಿವರಾಗಿರುವ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಪರವಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣ ಬೈರೇಗೌಡ ಪೂರಕ ಅಂದಾಜು ಮಂಡಿಸಿದರು.

ವಿವಿಧ ಕಾಮಗಾರಿ, ಬಿಲ್‌ ಪಾವತಿಗಳಿಗಾಗಿ ಲೋಕೋಪಯೋಗಿ ಇಲಾಖೆಗೆ 1979 ಕೋಟಿ ರು. ಅನುದಾನ ಪಡೆದುಕೊಳ್ಳುವಲ್ಲಿ ರೇವಣ್ಣ ಯಶಸ್ವಿಯಾಗಿದ್ದಾರೆ. ಸಾಲಮನ್ನಾ ಹಿನ್ನೆಲೆಯಲ್ಲಿ ಸಹಕಾರ ಇಲಾಖೆಗೆ 2600 ಕೋಟಿ ರು. ನೀಡಲಾಗಿದೆ. ಈ ಎರಡು ಇಲಾಖೆ ಹೊರತು ಪಡಿಸಿದರೆ ಇನ್ನುಳಿದ ಇಲಾಖೆಗಳಿಗೆ ಕಡಿಮೆ ಮೊತ್ತ ಅನುದಾನ ನೀಡಿರುವುದು ಪೂರಕ ಅಂದಾಜಿನಲ್ಲಿ ದಾಖಲಾಗಿದೆ.

15ನೇ ವಿಧಾನಸಭೆಗೆ ಆಯ್ಕೆಯಾಗಿರುವ ಶಾಸಕರಿಗೆ ಕಾರು ಖರೀದಿಸಲು ಮುಂಗಡವಾಗಿ 31 ಕೋಟಿ ರು. ಬಿಡುಗಡೆ ಮಾಡಲಾಗಿದೆ. ಒಟ್ಟು ವೆಚ್ಚ 37.5 ಕೋಟಿ ರು. ಅಂದಾಜಿಸಲಾಗಿದೆ. ಸಹಕಾರ ಬ್ಯಾಂಕುಗಳಿಗೆ 8 ಸಾವಿರ ಕೋಟಿ ರು. ಸಾಲದ ರೂಪದಲ್ಲಿ ಬಿಡುಗಡೆ ಮಾಡಲಾಗಿದ್ದು, ಅದನ್ನು ಅನುದಾನ ಎಂದು ಪರಿಗಣಿಸಲಾಗಿದೆ. ಈ ಮೊತ್ತಕ್ಕೆ 18 ಸಾವಿರ ಕೋಟಿ ರು. ಸೇರಿಸಿ ಒಟ್ಟು 26 ಸಾವಿರ ಕೋಟಿ ರು. ಸಾಲಮನ್ನಾಕ್ಕಾಗಿ ನೀಡಲಾಗುವುದು. ಸಾಲಮನ್ನಾ ಯೋಜನೆಗಾಗಿ 40 ಸಾವಿರ ಕೋಟಿ ರು. ಅಗತ್ಯ ಇದೆ ಎಂದು ಪೂರಕ ಅಂದಾಜುವಿನಲ್ಲಿ ತಿಳಿಸಲಾಗಿದೆ.

ಲೋಕಸಭೆ ಉಪಚುನಾವಣೆಗೆ 30 ಕೋಟಿ ರು. ಮತ್ತು ವಿಧಾನಸಭೆ ಉಪಚುನಾವಣೆಗೆ 3 ಕೋಟಿ ರು. ಸೇರಿ 39 ಕೋಟಿ ರು. ವೆಚ್ಚವಾಗಿದೆ. ಆ ಮೊತ್ತವನು ಸರ್ಕಾರವೇ ಭರಿಸಿದೆ. ಬೆಳಗಾವಿ ಅಧಿವೇಶನಕ್ಕಾಗಿ ಹೆಚ್ಚುವರಿಯಾಗಿ 35 ಕೋಟಿ ರು. ಒದಗಿಸಲಾಗಿದೆ. ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಯೋಜನೆ ಕಾಮಗಾರಿಗಾಗಿ ಕಾರ್ಯಪಡೆಗೆ 500ಕೋಟಿ ರು., ಗ್ರಾಮೀಣ ಕುಡಿಯುವ ನೀರು ಯೋಜನೆಗೆ 1 ಸಾವಿರ ಕೋಟಿ ರು. ಗ್ರಾಮೀಣ ರಸ್ತೆ ಮತ್ತು ದುರಸ್ತಿಗಾಗಿ 3500 ಕೋಟಿ ರು. ಅನುದಾನ ಒದಗಿಸಲಾಗುವುದು ಎಂದು ಸರ್ಕಾರ ತಿಳಿಸಿದೆ.

ಮೈಸೂರು ದಸರಾಕ್ಕೆ 120 ಕೋಟಿ ರು. ಅನುದಾನ ನೀಡಲಾಗಿತ್ತು. 84ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ 60 ಕೋಟಿ ರು. ಅನುದಾನ ನೀಡುವ ಬಗ್ಗೆ ಪ್ರಸ್ತಾಪಿಸಲಾಗಿದೆ. ಹಾಸನದಲ್ಲಿನ ಕಿಮ್ಕೋ ಕಂಪನಿಯ ಪುನರುಜ್ಜೀವನಕ್ಕಾಗಿ 10 ಕೋಟಿ ರು. ಹೆಚ್ಚುವರಿಯಾಗಿ ಒದಗಿಸಲಾಗಿದೆ. ರಾಜ್ಯದ 8 ಟ್ರಾಮಾಕೇರ್‌ ಸೆಂಟರ್‌ ಸ್ಥಾಪನೆಗೆ 3.64 ಕೋಟಿ ರು ಬಿಡುಗಡೆ ಮಾಡಲಾಗಿದೆ. 6980.88 ಕೋಟಿ ರು. ಮೊತ್ತದಲ್ಲಿ 65.75 ಕೋಟಿ ರು. ಪ್ರಭೃತ ವೆಚ್ಚ ಮತ್ತು 6915.13 ಕೋಟಿ ರು. ಪುರಸ್ಕೃತ ವೆಚ್ಚ ಸೇರಿಸಲಾಗಿದೆ. ಅಲ್ಲದೇ, 334.75 ಕೋಟಿ ರು. ಕೇಂದ್ರ ಸಹಾಯಕ್ಕೆ ಮತ್ತು 5.93 ಕೋಟಿ ರು. ಲೆಕ್ಕ ಹೊಂದಾಣಿಕೆಗೆ ಸಂಬಂಧಿಸಿದೆ ಎಂದು ಹೇಳಲಾಗಿದೆ.