ಮೈಸೂರು[ಜೂ.08]: ಅನಾರೋಗ್ಯದಿಂದ ನಿಧನರಾದ ಚಾಮುಂಡೇಶ್ವರಿ ಕ್ಷೇತ್ರದ ಮಾಜಿ ಶಾಸಕ ಎಂ. ಸತ್ಯನಾರಾಯಣ ಅವರ ಪಾರ್ಥಿವ ಶರೀರಕ್ಕೆ ಸ್ವತಃ ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ ಅವರೇ ಹೆಗಲು ಕೊಟ್ಟಪ್ರಸಂಗ ಶುಕ್ರವಾರ ನಡೆಯಿತು.

ಕೆಲಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಸತ್ಯನಾರಾಯಣ ಅವರು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ರಾತ್ರಿ ಕೊನೆಯುಸಿರೆಳೆದಿದ್ದರು. ಸತ್ಯನಾರಾಯಣ ಅವರು ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಒಂದು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. 2008ರಲ್ಲಿ ಜಯಭೇರಿ ಬಾರಿಸಿದ್ದ ಅವರು 2013ರಲ್ಲಿ ಜಿ.ಟಿ. ದೇವೇಗೌಡ ಎದುರು ಪರಾಭವಗೊಂಡಿದ್ದರು. ಸತ್ಯನಾರಾಯಣ ಹಾಗೂ ಜಿ.ಟಿ. ದೇವೇಗೌಡ ಇಬ್ಬರೂ ಗುಂಗ್ರಾಲ್‌ ಛತ್ರ ಗ್ರಾಮದವರು.

ರಾಜಕಾರಣ ಏನೇ ಇದ್ದರೂ ಸಜ್ಜನ ರಾಜಕಾರಣಿಯಾಗಿ ಹೆಸರು ಗಳಿಸಿದ್ದ ಸತ್ಯನಾರಾಯಣ ಜತೆ ಜಿಟಿಡಿ ಆತ್ಮೀಯತೆ ಉಳಿಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಗುಂಗ್ರಾಲ್‌ ಛತ್ರದಲ್ಲಿ ನಡೆದ ಸತ್ಯನಾರಾಯಣ ಅವರ ಅಂತ್ಯಕ್ರಿಯೆಲ್ಲಿ ಪಾಲ್ಗೊಂಡಿದ್ದ ಸಚಿವ ಜಿಟಿಡಿ, ಅದಕ್ಕೂ ಮುನ್ನ ನಡೆದ ಮೆರವಣಿಗೆಯಲ್ಲಿ ತಾವೇ ಮುಂದೆ ನಿಂತು ಅವರ ಪಾರ್ಥಿವ ಶರೀರಕ್ಕೆ ಕೆಲಹೊತ್ತು ಹೆಗಲುಕೊಟ್ಟರು.

ಸತ್ಯನಾರಾಯಣ ಅವರ ಆತ್ಮೀಯರಾದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಪುಟ್ಟರಂಗಶೆಟ್ಟಿ, ಸಿ.ಎಸ್‌.ಪುಟ್ಟರಾಜು, ಶಾಸಕರಾದ ಡಾ.ಯತೀಂದ್ರ ಸಿದ್ದರಾಮಯ್ಯ, ಅನಿಲ್‌ ಚಿಕ್ಕಮಾದು, ಎಚ್‌.ವಿಶ್ವನಾಥ್‌, ತನ್ವೀರ್‌ ಸೇಠ್‌, ಧರ್ಮಸೇನ, ಎಲ್‌.ನಾಗೇಂದ್ರ, ಸಂಸದರಾದ ಶ್ರೀನಿವಾಸ ಪ್ರಸಾದ, ಪ್ರತಾಪ್‌ ಸಿಂಹ ಮತ್ತಿತರರು ಸತ್ಯನಾರಾಯಣ ಅವರ ಅಂತಿಮ ದರ್ಶನ ಪಡೆದರು.