ಮೂವರ ರಾಜೀನಾಮೆ : ಉಪ ಚುನಾವಣೆ ಖಚಿತ

First Published 10, Jun 2018, 9:06 AM IST
Karnataka Lok Sabha Seat By Election
Highlights

ಕರ್ನಾಟಕದ ಮಂಡ್ಯ, ಬಳ್ಳಾರಿ ಹಾಗೂ ಶಿವಮೊಗ್ಗ ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯುವುದು ಖಚಿತವಾಗಿದೆ.

ನವದೆಹಲಿ: ಕರ್ನಾಟಕದ ಮಂಡ್ಯ, ಬಳ್ಳಾರಿ ಹಾಗೂ ಶಿವಮೊಗ್ಗ ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯುವುದು ಖಚಿತವಾಗಿದೆ.

ಪ್ರಸಕ್ತ ಲೋಕಸಭೆಯು ಜೂನ್‌ 4, 2014ರಂದು ಅಸ್ತಿತ್ವಕ್ಕೆ ಬಂದಿತ್ತು. ಹೀಗಾಗಿ ಜೂನ್‌ 4ರ ನಂತರ ಯಾರಾದರೂ ಸಂಸದರು ರಾಜೀನಾಮೆ ನೀಡಿದರೆ ಅಥವಾ ನಿಧನರಾದರೆ ಲೋಕಸಭೆಯ ಅವಧಿ 1 ವರ್ಷಕ್ಕಿಂತ ಕಡಿಮೆ ಉಳಿಯುವ ಕಾರಣ ಉಪಚುನಾವಣೆ ನಡೆಸಲೇಬೇಕು ಎಂದೇನಿಲ್ಲ. ಅದನ್ನು ‘ಮುಂದಿನ ಲೋಕಸಭೆಗೆ’ ಎಂದು ಖಾಲಿ ಉಳಿಸಲಾಗುತ್ತದೆ ಎಂದು ನಿಯಮದ ಪುಸ್ತಕ ಹೇಳುತ್ತದೆ.

ಆದರೆ ಕರ್ನಾಟಕ ವಿಧಾನಸಭೆಗೆ ಆಯ್ಕೆಯಾದ ಕಾರಣ ಮಂಡ್ಯದ ಜೆಡಿಎಸ್‌ ಸಂಸದರಾಗಿದ್ದ ಸಿ.ಎಸ್‌. ಪುಟ್ಟರಾಜು, ಬಳ್ಳಾರಿಯ ಬಿಜೆಪಿ ಲೋಕಸಭಾ ಸದಸ್ಯರಾಗಿದ್ದ ಬಿ. ಶ್ರೀರಾಮುಲು ಹಾಗೂ ಶಿವಮೊಗ್ಗದ ಬಿಜೆಪಿ ಸಂಸದರಾಗಿದ್ದ ಬಿ.ಎಸ್‌. ಯಡಿಯೂರಪ್ಪ ನೀಡಿದ್ದ ರಾಜೀನಾಮೆ ಮೇ ಕೊನೆಯ ವಾರ ಅಂಗೀಕಾರಗೊಂಡು ಅಧಿಸೂಚನೆ ಪ್ರಕಟವಾಗಿದೆ.

ಹೀಗಾಗಿ ಜೂನ್‌ 4ರ ಕಟಾಫ್‌ ದಿನಾಂಕಕ್ಕಿಂತ ಮುಂಚೆಯೇ ಇವರ ರಾಜೀನಾಮೆ ಅಂಗೀಕಾರವಾದ ಕಾರಣ ಈ ಮೂರೂ ಲೋಕಸಭೆ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ ಎಂದು ಮಾಧ್ಯಮ ವರದಿಯೊಂದು ಹೇಳಿದೆ.

loader