ಲಿಂಗಾಯತ ಜಗದ್ಗುರು ಮಾತೆ ಮಹಾದೇವಿ ಲಿಂಗೈಕ್ಯ
ಶ್ವಾಸಕೋಶದ ಸಮಸ್ಯೆ ಎದುರಿಸುತ್ತಿದ್ದ ಬಸವ ಪೀಠದ ಅಧ್ಯಕ್ಷೆ ಮಾತೆ ಮಹಾದೇವಿ[73] ಲಿಂಗೈಕ್ಯರಾಗಿದ್ದಾರೆ. ಕಿರಿಯ ವಯಸ್ಸಿನಲ್ಲಿ ಸನ್ಯಾಸ ಸ್ವೀಕರಿಸಿದ ಮಾತೆ ಮಹಾದೇವಿ ತಮ್ಮ ಜನಾನುರಾಗಿ ಕಾರ್ಯದ ಮೂಲಕ ಹೆಸರು ಮಾಡಿದ್ದರು.
ಬೆಂಗಳೂರು[ಮಾ. 14] ಶ್ವಾಸಕೋಶ ಹಾಗೂ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಬಸವ ಪೀಠದ ಅಧ್ಯಕ್ಷೆ ಮಾತೆ ಮಹಾದೇವಿ[74] ಲಿಂಗೈಕ್ಯರಾಗಿದ್ದಾರೆ. ಬೆಂಗಳೂರಿನ ಹಳೇ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
"
ಕಳೆದ ನಾಲ್ಕು ದಿನಗಳಿಂದ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು ಗುರುವಾರ ಇಹಲೋಕದ ಯಾತ್ರೆ ಮುಗಿಸಿದ್ದಾರೆ. ಕಿರಿಯ ವಯಸ್ಸಿನಲ್ಲಿ ಸನ್ಯಾಸ ಸ್ವೀಕರಿಸಿದ ಮಾತೆ ಮಹಾದೇವಿ ಅವರ ಜನನ 1946 ಮಾರ್ಚ್ 13ರಂದಾಗಿತ್ತು.
ಚಿತ್ರದುರ್ಗ ಜಿಲ್ಲೆಯ ಸಾಸಲಹಟ್ಟಿಯಲ್ಲಿ ಜನಿಸಿದ್ದ ಮಹಾದೇವಿ ಧಾರವಾಡದಲ್ಲಿ ಅಕ್ಕಮಹಾದೇವಿ ಆಶ್ರಮ ಸ್ಥಾಪನೆ ಮಾಡಿ ಜನಾನುರಾಗಿ ಕೆಲಸ ಆರಂಭಿಸಿದ್ದರು. 5 ನೇ ಏಪ್ರಿಲ್ 1966 ಜಂಗಮ ದೀಕ್ಷೆ ಪಡೆದ ಮಾತೆ ಮಹಾದೇವಿ ವಿಶ್ವದ ಪ್ರಥಮ ಮಹಿಳಾ ಜಗದ್ಗುರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದರು.
ಉತ್ತಮ ವಾಗ್ಮಿ ಮತ್ತು ಸಾಹಿತಿಗಳಾಗಿದ್ದ ಮಾತೆ ಮಹಾದೇವಿ ಗುರು ಲಿಂಗಾನಂದರವರಿಂದ ಪ್ರಭಾವಿತರಾಗಿ ಸನ್ಯಾಸ ಸ್ವೀಕರಿಸಿದ್ದರು. 1980 ಬಸವ ಧರ್ಮ ಪ್ರಚಾರಕ್ಕೆ ಅಮೆರಿಕ ಪ್ರವಾಸ ಕೈಗೊಂಡಿದ್ದರು. 1978 ಬೆಂಗಳೂರಿನ ಕುಂಬಳಗೋಡಿನಲ್ಲಿ ಬಸವ ಗಂಗೋತ್ರಿ ಆಶ್ರಮ ನಿರ್ಮಾಣ ಮತ್ತು 1975ರಂದು ಬೆಂಗಳೂರಿನ ರಾಜಾಜಿನಗರದಲ್ಲಿ ಬಸವ ಮಂಟಪ ಸ್ಥಾಪನೆ ಮಾಡಿದ್ದರು.
ಅವರ ‘ಹೆಪ್ಪಿಟ್ಟ ಹಾಲು’ಈ ಕೃತಿಗೆ ರಾಜ್ಯ ಸಾಹಿತ್ಯ ಅಕಾಡಮಿ ಪುರಸ್ಕಾರ ಲಭ್ಯವಾಗಿತ್ತು. ಶುಕ್ರವಾರ ಕೂಡಲ ಸಂಗಮದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ. ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟದ ವೇಳೆ ಮಾತೆ ಮಹಾದೇವಿ ಮುಂಚೂಣಿಯಲ್ಲಿ ಕಾಣಿಸಿಕೊಂಡಿದ್ದರು.