ಒಂದರಿಂದ ನಾಲ್ಕನೇ ತರಗತಿಯವರೆಗೆ ಕನ್ನಡದಲ್ಲೇ ಶಿಕ್ಷಣ ನೀಡಬೇಕು. ಆನಂತರ ಮಾತೃಭಾಷೆಯಲ್ಲಿ ಶಿಕ್ಷಣ ಪಡೆಯಲು ಆಯಾ ವಿದ್ಯಾರ್ಥಿಗಳಿಗೆ ಅವಕಾಶ ನೀಡಬೇಕು. ಪ್ರಾಥಮಿಕ ಹಂತದಲ್ಲಿ ಇಂಗ್ಲಿಷ್ ಅನ್ನು ಒಂದು ಭಾಷೆಯಾಗಿ ಕಲಿಯಬೇಕು ಎಂದು ಆಯೋಗ ಹೇಳಿದೆ.
ಬೆಂಗಳೂರು: ರಾಜ್ಯದಲ್ಲಿ ಒಂದರಿಂದ ನಾಲ್ಕನೇ ತರಗತಿವರೆಗೆ ಕನ್ನಡದಲ್ಲೇ ಶಿಕ್ಷಣ ನೀಡುವುದು ಹಾಗೂ ಎಲ್ಲ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ಏಕರೂಪದ ಪಠ್ಯಕ್ರಮವನ್ನು ಜಾರಿಗೊಳಿಸುವುದು ಸೇರಿದಂತೆ ಜಾಗತಿಕ ವರ್ತಮಾನಕ್ಕೆ ತಕ್ಕಂತೆ ಶೈಕ್ಷಣಿಕ ಕ್ಷೇತ್ರದಲ್ಲಿ ಆಗಬೇಕಾದ ಸುಧಾರಣೆಗಳ ಕುರಿತಂತೆ ಹಲವಾರು ಶಿಫಾರಸುಗಳನ್ನು ಕರ್ನಾಟಕ ಜ್ಞಾನ ಆಯೋಗ ಸರ್ಕಾರಕ್ಕೆ ಸಲ್ಲಿಸಿದೆ.
ವಿಧಾನಸೌಧದಲ್ಲಿ ಶನಿವಾರ ಆಯೋಗದ ಅಧ್ಯಕ್ಷ ಡಾ.ಕೆ.ಕಸ್ತೂರಿರಂಗನ್ ಆಯೋಗದ ವರದಿಯನ್ನು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಹಾಗೂ ಪ್ರಾಥಮಿಕ ಶಿಕ್ಷಣ ಸಚಿವ ತನ್ವೀರ್ ಸೇಠ್ ಅವರಿಗೆ ಸಲ್ಲಿಸಿದರು.
ಸರ್ಕಾರಿ ಶಾಲೆಗಳಿಗಿಂತ ಖಾಸಗಿ ಶಾಲೆಗಳಲ್ಲಿ ಅತ್ಯುತ್ತಮ ಗುಣಮಟ್ಟದ ಶಿಕ್ಷಣ ದೊರೆಯುತ್ತದೆ ಎಂಬ ಭಾವನೆ ಸಾರ್ವಜನಿಕ ವಲಯದಲ್ಲಿ ಇದೆ. ಈ ಭಾವನೆ ನಿವಾರಿಸುವ ಸಂಬಂಧ ಏಕರೂಪದ ಪಠ್ಯಕ್ರಮವನ್ನು ಜಾರಿಗೆ ತರಬೇಕು ಎಂದು ಆಯೋಗ ಅಭಿಪ್ರಾಯಪಟ್ಟಿದೆ. ಏಕರೂಪದ ಪಠ್ಯಕ್ರಮವನ್ನು ಜಾರಿಗೆ ತಂದರೆ ಶಿಕ್ಷಣದಲ್ಲಿ ಸಮಾನತೆ ಬರುತ್ತದೆ. ಜಗತ್ತಿನ ಆಗು ಹೋಗುಗಳನ್ನು ಗಮನದಲ್ಲಿಟ್ಟುಕೊಂಡು ಶೈಕ್ಷಣಿಕ ಪದ್ಧತಿ ಅನುಷ್ಠಾನಗೊಳಿಸಬೇಕು ಎಂದೂ ತಿಳಿಸಿದೆ.
ಮುಂದಿನ ಹತ್ತು ವರ್ಷಗಳಲ್ಲಿ ರಾಜ್ಯದ ಜನಸಂಖ್ಯೆ ಏಳೂವರೆ ಕೋಟಿಗೆ ಏರಲಿದೆ. ಆ ಮೂಲಕ ಶಿಕ್ಷಣಕ್ಕಾಗಿ ದೊಡ್ಡ ಪ್ರಮಾಣದ ಹಣವನ್ನು ಪೋಷಕರು ಬಂಡವಾಳವಾಗಿ ಹೂಡುವುದು ಅನಿವಾರ್ಯವಾಗುತ್ತದೆ. ಒಂದು ಅಂದಾಜಿನ ಪ್ರಕಾರ ಪೋಷಕರು ತಮ್ಮ ಆದಾಯದ ಶೇ.30ರಷ್ಟು ಹಣವನ್ನು ಮಕ್ಕಳ ಶಿಕ್ಷಣಕ್ಕಾಗಿ ಬಂಡವಾಳವನ್ನಾಗಿ ಹೂಡುವ ಪರಿಸ್ಥಿತಿ ಬರಲಿದೆ. ಹೀಗಾಗಿ ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಮುಂದುವರಿಯಬೇಕು. ಹಾಗೆಯೇ ಬಾಲಕಿಯರಿಗೆ ಪಿಯುಸಿ ಹಾಗೂ ಮೂರು ವರ್ಷಗಳ ಪದವಿ ಶಿಕ್ಷಣ ಕಡ್ಡಾಯವಾಗಿ ಲಭ್ಯವಾಗುವಂತೆ ಮಾಡಬೇಕು. ಆ ಮೂಲಕ ಮಹಿಳಾ ಸಬಲೀಕರಣಕ್ಕೆ ಆದ್ಯತೆ ನೀಡಬೇಕು ಎಂದು ಆಯೋಗ ಶಿಫಾರಸು ಮಾಡಿದೆ.
ಒಂದರಿಂದ ನಾಲ್ಕನೇ ತರಗತಿಯವರೆಗೆ ಕನ್ನಡದಲ್ಲೇ ಶಿಕ್ಷಣ ನೀಡಬೇಕು. ಆನಂತರ ಮಾತೃಭಾಷೆಯಲ್ಲಿ ಶಿಕ್ಷಣ ಪಡೆಯಲು ಆಯಾ ವಿದ್ಯಾರ್ಥಿಗಳಿಗೆ ಅವಕಾಶ ನೀಡಬೇಕು. ಪ್ರಾಥಮಿಕ ಹಂತದಲ್ಲಿ ಇಂಗ್ಲಿಷ್ ಅನ್ನು ಒಂದು ಭಾಷೆಯಾಗಿ ಕಲಿಯಬೇಕು ಎಂದು ಆಯೋಗ ಹೇಳಿದೆ.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ, ರಾಜ್ಯದ ಶೈಕ್ಷಣಿಕ ನೀತಿ ಬಲಪಡಿಸುವ ಕುರಿತು ಕಸ್ತೂರಿರಂಗನ್ ನೇತೃತ್ವದ ಸಮಿತಿ ಸುಮಾರು 200 ಶಿಫಾರಸುಗಳನ್ನು ನೀಡಿದೆ. ಈ ಎಲ್ಲ ಶಿಾರಸುಗಳ ಕುರಿತು ಅಧ್ಯಯನ ನಡೆಸುತ್ತೇವೆ. ಇದಕ್ಕಾಗಿಯೇ ಸಚಿವರ ತಂಡವೊಂದನ್ನು ರಚಿಸಿ ಇದನ್ನು ಕಾರ್ಯಗತಗೊಳಿಸುವ ಚಿಂತನೆ ಇದೆ. ನಂತರ ಸಚಿವ ಸಂಪುಟದ ಮುಂದೆ ಮಂಡಿಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ. ವರದಿಯನ್ನು ಆದಷ್ಟು ಶೀಘ್ರವಾಗಿ ಸಚಿವ ಸಂಪುಟದ ಮುಂದೆ ಮಂಡಿಸಲಾಗುವುದು. ಯಾವ ಕಾರಣಕ್ಕೂ ಈ ವಿಷಯದಲ್ಲಿ ವಿಳಂಬ ಮಾಡುವ ಪ್ರಶ್ನೆಯೇ ಇಲ್ಲ ಎಂದರು.
ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ಮಾತನಾಡಿ, ರಾಜ್ಯಾದ್ಯಂತ ಆದಷ್ಟು ಬೇಗ ಹೊಸದಾಗಿ ಸರ್ಕಾರಿ ಪ್ರಾಥಮಿಕ ಶಾಲೆಗಳನ್ನು ಆರಂಭಿಸಲು ನಿರ್ಧರಿಸಿದ್ದು, ಈ ಸಂಬಂಧ ಕೇಂದ್ರದ ಜತೆ ಮಾತುಕತೆ ನಡೆಸುತ್ತಿದೆ. ಪೂರ್ವ ಪ್ರಾಥಮಿಕ ಶಾಲೆಗಳು (ಪ್ರಿ- ನರ್ಸರಿ) ಸದ್ಯಕ್ಕೆ ಖಾಸಗಿಯವರ ಹಿಡಿತದಲ್ಲಿದ್ದು, ಸರ್ಕಾರದ ವತಿಯಿಂದಲೂ ಪೂರ್ವ ಪ್ರಾಥಮಿಕ ಶಾಲೆ ಪ್ರಾರಂಭಿಸಲು ಸರ್ಕಾರ ಮುಂದಾಗಿದೆ. ಆ ಮೂಲಕ ಕರ್ನಾಟಕದ ಶೈಕ್ಷಣಿಕ ನೀತಿಯನ್ನು ಮತ್ತಷ್ಟು ಬಲಪಡಿಸುವ ಕೆಲಸವಾಗಲಿದೆ ಎಂದರು.
ಜ್ಞಾನ ಆಯೋಗದ ಪ್ರಮುಖ ಶಿಫಾರಸುಗಳು:
* 1ರಿಂದ 4ನೇ ತರಗತಿವರೆಗೆ ಮಾತೃಭಾಷೆಯಲ್ಲೇ ಶಿಕ್ಷಣ
* 5ನೇ ತರಗತಿಯಿಂದ ಬೋಧನಾ ಮಾಧ್ಯಮ ಯಾವ ಭಾಷೆ ಎಂಬುದು ಐಚ್ಛಿಕ
* 1ರಿಂದ 4ರವರೆಗೆ ಮಾತೃಭಾಷೆ ಕನ್ನಡದಲ್ಲೇ ಕಲಿಕೆ ಜತೆಗೆ ಇಂಗ್ಲಿಷ್ ದ್ವಿತೀಯ ಭಾಷೆ
* 5ರಿಂದ 7ರವರೆಗೆ ಮೂರು ಭಾಷೆಗಳು ಹಾಗೂ ವಿದ್ಯಾರ್ಥಿಗಳ ಇಚ್ಛೆಗೆ ಅನುಸಾರ ಎರಡು ಭಾಷೆಗೆ ಅವಕಾಶ
* ವಿಜ್ಞಾನ ಮತ್ತು ಗಣಿತ ವಿಷಯ ಇಂಗ್ಲಿಷ್ ಭಾಷೆಯಲ್ಲಿ ಕಲಿಕೆ. ಭೂಗೋಳಶಾಸ, ಇತಿಹಾಸದ ಬೋಧನಾ ಮಾಧ್ಯಮ ಐಚ್ಛಿಕವಾಗಿರಲಿ.
* 8ರಿಂದ 10ರವರೆಗೆ ಕಲಿಕಾ ಮಾಧ್ಯಮ ಐಚ್ಛಿಕಗೊಳಿಸಿ, ಎರಡು ಭಾಷೆಗಳಿರಲಿ
* 11ರಿಂದ 12ರವರೆಗೆ ಐಚ್ಛಿಕ ಬೋಧನಾ ಮಾಧ್ಯಮ ಅನುಸಾರ ಒಂದು ಭಾಷೆ
* ಪ್ರಾಥಮಿಕ ಶಿಕ್ಷಕರಿಗೆ ನಾಲ್ಕು ವರ್ಷಗಳ ಬಿ.ಇಡಿ ಪದವಿ ಕಡ್ಡಾಯ. ಸದ್ಯದ ಎರಡು ವರ್ಷಗಳ ಡಿ.ಎಡ್.ರದ್ದತಿಗೆ ಶಿಾರಸು
* ಸದ್ಯ ಬಿ.ಇಡಿ ಪದವಿಧರರಲ್ಲದ ಡಿ.ಇಡಿ ಶಿಕ್ಷಕರಿಗೆ ಬಿ.ಇಡಿ ಪೂರೈಸಲು ಅವಕಾಶ
* ಪಿಯುಸಿ ನಂತರ ವಿದ್ಯಾರ್ಥಿನಿಯರಿಗೆ ಮೂರು ವರ್ಷಗಳ ಪದವಿ ಶಿಕ್ಷಣ ಕಡ್ಡಾಯ
