ಬೆಂಗಳೂರು [ಆ.03]:  ರಾಜ್ಯದ ಕೇಂದ್ರ, ಜಿಲ್ಲಾ, ತಾಲೂಕು ಹಾಗೂ ಬಯಲು ಕಾರಾಗೃಹಗಳಲ್ಲಿನ ಕೈದಿಗಳ ಸ್ಥಿತಿಗತಿ ಕುರಿತು ಹೈಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿರುವ ಸರ್ಕಾರ, ರಾಜ್ಯದ ಕಾರಾಗೃಹಗಳಲ್ಲಿ 13,622 ಕೈದಿಗಳನ್ನು ಬಂಧಿಸಿಡಬಹುದು. ಆದರೆ, ಪ್ರಸ್ತುತ ಕಾರಾಗೃಹಗಳಲ್ಲಿ ಪ್ರಸ್ತುತ 15,257 ಕೈದಿಗಳಿದ್ದಾರೆ. ಅರ್ಥಾತ್‌, ಕಾರಾಗೃಹಗಳ ಸಾಮರ್ಥ್ಯಕ್ಕಿಂತ ಶೇ.11ರಷ್ಟುಹೆಚ್ಚು ಕೈದಿಗಳು ಇದ್ದಾರೆ.

ಜೈಲುಗಳಲ್ಲಿ ಕೈದಿಗಳ ಅಸಹಜ ಸಾವುಗಳು ಸಂಭವಿಸಿದಾಗ ಅವರ ಕುಟುಂಬಸ್ಥರಿಗೆ ಪರಿಹಾರ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ ನಿರ್ದೇಶನದಂತೆ ಹೈಕೋರ್ಟ್‌ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್‌.ಓಕ ಹಾಗೂ ನ್ಯಾ.ಎ.ಎಸ್‌ ಬೆಳ್ಳುಂಕೆ ಅವರಿದ್ದ ವಿಭಾಗೀಯ ನ್ಯಾಯಪೀಠಕ್ಕೆ ಸರ್ಕಾರ ಈ ಕುರಿತು ಶುಕ್ರವಾರ ಪ್ರಮಾಣಪತ್ರ ಸಲ್ಲಿಸಿದೆ. ವಿಚಾರಣೆಯನ್ನು ಆ.23ಕ್ಕೆ ಮುಂದೂಡಿದೆ. ಕಾರಾಗೃಹಗಳ ಅಧೀಕ್ಷಕ ಕೆ.ಸುರೇಶ್‌ ಸಲ್ಲಿಸಿರುವ ಪ್ರಮಾಣಪತ್ರವನ್ನು ಸರ್ಕಾರದ ಪರ ವಕೀಲರು ನ್ಯಾಯಪೀಠಕ್ಕೆ ಹಾಜರುಪಡಿಸಿದರು.

ವಿಚಾರಣೆ ವೇಳೆ, ಸರ್ಕಾರದ ಪರ ವಾದ ಮಂಡಿಸಿದ ವಕೀಲರಾದ ಎ.ಅಚ್ಚಪ್ಪ ವಾದಿಸಿದರು. ಬೆಂಗಳೂರು ಜೈಲಿನ ಸಾಮರ್ಥ್ಯ 3236 ಇದ್ದರೂ, 5192 ಕೈದಿಗಳನ್ನು ಬಂಧಿಸಿಲಾಗಿದೆ ಎಂದು ಪ್ರಮಾಣ ಪತ್ರದಲ್ಲಿ ತಿಳಿಸಲಾಗಿದೆ.