ರಾಜ್ಯವು ರಾಷ್ಟ್ರದಲ್ಲಿಯೇ ಮೊಬೈಲ್ ಆ್ಯಪ್ ಬಳಸಿ ಬೆಳೆ ಕಟಾವು ಪ್ರಯೋಗಕ್ಕೆ ಮುಂದಾಗಿದೆ ಎಂದು ಕೃಷಿ ಸಚಿವ ಕೃಷ್ಣ ಬೈರೇಗೌಡ ಹೇಳಿದರು.

ನಾಯಕನಹಟ್ಟಿ (ನ.07): ರಾಜ್ಯವು ರಾಷ್ಟ್ರದಲ್ಲಿಯೇ ಮೊಬೈಲ್ ಆ್ಯಪ್ ಬಳಸಿ ಬೆಳೆ ಕಟಾವು ಪ್ರಯೋಗಕ್ಕೆ ಮುಂದಾಗಿದೆ ಎಂದು ಕೃಷಿ ಸಚಿವ ಕೃಷ್ಣ ಬೈರೇಗೌಡ ಹೇಳಿದರು.

ಚಳ್ಳಕೆರೆ ತಾಲೂಕು ಕಾಟವ್ವನಹಳ್ಳಿಯಲ್ಲಿ ಸೋಮವಾರ ಹನುಮಂತಪ್ಪ ಅವರ ಜಮೀನಿನಲ್ಲಿ ಮೊಬೈಲ್ ಆ್ಯಪ್ ಬಳಸಿ ಶೇಂಗಾ ಕಟಾವು ಪ್ರಯೋಗ ಪ್ರಾತ್ಯಕ್ಷಿಕೆ ಕಾರ್ಯಕ್ರಮ ವೀಕ್ಷಿಸಿ ಅವರು ಮಾತನಾಡಿದರು.

ರೈತರು ತಾವು ಬೆಳೆದ ಬೆಳೆಯಲ್ಲಿ ಎಷ್ಟು ಇಳುವರಿ ಬಂದಿದೆ. ಯಾವ ಬೆಳೆ ಬೆಳೆದಿದ್ದಾರೆ ಎಂಬುದರ ನಿಖರ ಮಾಹಿತಿ ತಿಳಿಯಲು ಮೊಬೈಲ್ ಆ್ಯಪ್ ಪ್ರಯೋಗ ತುಂಬಾ ಸಹಕಾರಿಯಾಗಿದೆ. ಈ ಹಿಂದೆ ಬೆಳೆ ನಷ್ಟದ ಬಗ್ಗೆ ಅಧಿಕಾರಿಗಳು ಖುದ್ದು ಜಮೀನಿಗೆ ಭೇಟಿ ನೀಡಿ ಸಮೀಕ್ಷೆ ನಡೆಸದೇ ವಾಸ್ತವದ ಅಂಕಿ ಅಂಶಗಳನ್ನು ನೀಡುತ್ತಿರಲಿಲ್ಲ. ಎಲ್ಲ ಮಾಹಿತಿಗಳು ಕೇಂದ್ರ ಕಚೇರಿಗೆ ತಲುಪಲು ಹಾಗೂ ಬಹುಬೇಗ ಕೆಲಸ ಪೂರ್ಣಗೊಳ್ಳುವುದಿಲ್ಲ ಎಂಬುದರ ಬಗ್ಗೆ ಅನೇಕ ವರ್ಷಗಳಿಂದ ದೂರುಗಳ ಕೇಳಿಬರುತ್ತಿವೆ ಎಂದರು.

ಇಂತಹ ನ್ಯೂನತೆಯನ್ನು ಬಗೆಹರಿಸಲು ರಾಜ್ಯವು ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಟ್ಯಾಬ್‌ಗಳ ಮೂಲಕ ಇಳುವರಿ ಇತ್ಯರ್ಥ ಮಾಡುವ ಕಾರ್ಯ ಮೊದಲ ಬಾರಿಗೆ ಮೊಬೈಲ್ ಆ್ಯಪ್ ಬಳಕೆ ಮಾಡಲಾಗುತ್ತಿದೆ. ಹಿಂದೆ ಬೆಳೆ ಪರಿಸ್ಥಿತಿಯ ಮಾಹಿತಿ ಹಿಂದಿನ ವರ್ಷದ ಮಾಹಿತಿಯನ್ನೇ ಸಲ್ಲಿಸಲಾಗುತ್ತಿತ್ತು. ಆದರೆ, ಮೊಬೈಲ್ ಆ್ಯಪ್ ಬಳಕೆಯಿಂದಾಗಿ ವಾಸ್ತವದ ವೀಡಿಯೋ, ಪೋಟೋ ಅಪ್‌ಲೋಡ್ ಮಾಡುವುದರಿಂದ ಪಾರದಶರ್ಕತೆ ಕಾಪಾಡಲು ಸಾಕ್ಷೀಕರಿಸುವುದು ಎಂದರು.

ರಾಜ್ಯವು ಮೊದಲಿಗೆ ತ್ವರಿತಗತಿಯಲ್ಲಿ ಬರ ಪರಿಸ್ಥಿತಿಯ ವರದಿ ತಯಾರಿಸಿ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಪ್ರಾಥಮಿಕ ವರದಿಯಲ್ಲಿ ರೂ.12 ಸಾವಿರ ಕೋಟಿ ನಷ್ಟವಾಗಿದೆ. ನಿಯಮಾವಳಿಗಳ ಪ್ರಕಾರ ರೂ. 3370 ಸಾವಿರ ಕೋಟಿ ಕೊಡಬೇಕು. ಕೆಲ ಅತಿವೃಷ್ಠಿ ಪ್ರದೇಶಗಳಿಗೆ ರೂ.150 ಕೋಟಿ ನೀಡಬೇಕೆಂದು ಮನವಿ ಸಲ್ಲಿಸಲಾಗಿದೆ ಎಂದರು.

ಈ ಹಿಂದೆ 110 ತಾಲೂಕುಗಳನ್ನು ಬರಗಾಲಪೀಡಿತ ಪ್ರದೇಶ ಎಂದು ಘೋಷಿಸಲಾಗಿತ್ತು. ಅದರ ಜೊತೆಗೆ ಇನ್ನೂ 29 ತಾಲೂಕುಗಳನ್ನು ಸೇರ್ಪಡೆಗೊಳಿಸಲಾಗಿದೆ. ಕಂದಾಯ ಹಾಗೂ ಕೃಷಿ ಇಲಾಖೆ ಜಂಟಿ ಸಮೀಕ್ಷೆ ನಡೆಸಲಾಗುತ್ತಿದೆ. ಇದರಿಂದ ನಿಖರವಾಗಿ ಎಷ್ಟು ಪ್ರಮಾಣದಲ್ಲಿ ನಷ್ಟ ವಾಗಿದೆ ಎಂಬುದನ್ನು ತಿಳಿಯಲು ಸಹಕಾರಿ ಆಗುವುದು ಎಂದರು.

ಜಿಲ್ಲೆಯಲ್ಲಿ ಸುಮಾರು 3.30 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬರದಿಂದ ಬೆಳೆ ಹಾನಿಯಾಗಿದೆ ಎಂದು ವರದಿ ನೀಡಲಾಗಿದೆ. ಎಲ್ಲ ಜಿಲ್ಲೆಗಳಿಗೆ ನ 10 ರವರೆಗೆ ಪೂರ್ಣ ವರದಿ ನೀಡಬೇಕೆಂದು ಸೂಚಿಸಲಾಗಿದೆ. ಅಂತಿಮ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿ ಹೆಚ್ಚಿನ ಹಣ ಬಿಡುಗಡೆ ಮಾಡಬೇಕೆಂದು ಕೇಂದ್ರದ ಕೃಷಿ ಹಾಗೂ ಹಣಕಾಸು ಸಚಿವರಿಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಜಿಲ್ಲೆ ಸತತ ಬರಗಾಲಕ್ಕೆ ತುತ್ತಾಗುತ್ತಿದೆ. ಕಳೆದ ವರ್ಷ ರೂ.68 ಕೋಟಿ ನೀಡಲಾಗಿತ್ತು. ಕೆಲ ನ್ಯೂನತೆಗಳನ್ನು ತಪ್ಪಿಸಲು ಜಂಟಿ ಸಮೀಕ್ಷೆ ಕೈಗೊಳ್ಳಲಾಗಿದೆ. ಇದರಿಂದ ನಿಖರ ಮಾಹಿತಿ ಲಭ್ಯವಾಗುವುದಲ್ಲದೇ ಪಾರದರ್ಶಕವಾಗಿ ನೇರವಾಗಿ ಫಲಾನುಭವಿಗಳ ಖಾತೆಗೆ ಹಣ ಜಮೆ ಮಾಡಲಾಗುವುದು. ಸರ್ಕಾರವು ಈರುಳ್ಳಿ ಖರೀದಿ ಕೇಂದ್ರಗಳ ಸ್ಥಾಪನೆಗೆ ಕೇಂದ್ರಕ್ಕೆ ತ್ವರಿತಗತಿಯಲ್ಲಿ ಮಾಹಿತಿ ನೀಡಿ ಕೇಂದ್ರಗಳ ಸ್ಥಾಪನೆ ಮಾಡಲಾಗಿದೆ. ಇದರಿಂದ ಮಾರುಕಟ್ಟೆಯಲ್ಲಿ ಸುಧಾರಣೆಯಾಗಿದೆ ಎಂದು ತಿಳಿಸಿದರು.

ಇದಕ್ಕೂ ಮುನ್ನ ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ಚಿಕ್ಕಕೆರೆಯನ್ನು ವೀಕ್ಷಿಸಿ ಮಾಹಿತಿ ಪಡೆದರು. ಪಪಂ ಸದಸ್ಯರಾದ ಜೆ.ಟಿ.ಎಸ್. ತಿಪ್ಪೇಸ್ವಾಮಿ, ಜೆ.ಆರ್. ರವಿಕುಮಾರ್, ಬಸಣ್ಣ ಕೆರೆ ಹೂಳು ತೆಗೆಸಲು ಮನವಿ ಸಲ್ಲಿಸಿದರು.

ಶಾಸಕ ಎಸ್.ತಿಪ್ಪೆಸ್ವಾಮಿ, ಜಿಪಂ ಸದಸ್ಯೆ ಶಶಿರೇಖಾ, ತಹಸೀಲ್ದಾರ್ ಶ್ರೀಧರಮೂರ್ತಿ ಎಸ್. ಪಂಡಿತ್, ಜಿಲ್ಲಾ ಕೃಷಿ ಜಂಟಿ ನಿರ್ದೇಶಕ ಲಕ್ಷ್ಮಣ್ ಕಲ್ಲೇನವರ್, ಜಂಟಿ ನಿರ್ದೇಶಕರಾದ ಸುಜಾತ, ಶಿವಕುಮಾರ್, ಕೃಷಿ ಸಹಾಯಕ ನಿರ್ದೇಶಕ ಮಾರುತಿ, ತಾಲೂಕಿನ ಸಹಾಯಕ ಕೃಷಿ ಅಧಿಕಾರಿಗಳು ಗ್ರಾಮ ಲೆಕ್ಕಾಧಿಕಾರಿಗಳು ಉಪಸ್ಥಿತರಿದ್ದರು.