ಬೆಂಗಳೂರು : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವುದರಿಂದ ರಾಜ್ಯದ ಹಲವೆಡೆ ಧಾರಾಕಾರ ಮಳೆಯಾಗಿದೆ. ಹಲವೆಡೆ ಹಾನಿಯಾಗಿದೆ. ಗುಡುಗು ಸಹಿತ, ಬಿರುಗಾಳಿಯೊಂದಿಗೆ ಮಳೆ ಸುರಿದಿದೆ.

ಚಿಕ್ಕಮಗಳೂರು, ಚಿತ್ರದುರ್ಗ, ಬಂಡೀಪುರ ಅರಣ್ಯ ಪ್ರದೇಶದಲ್ಲಿ ಭರ್ಜರಿಯಾಗಿ ಮಳೆಯಾಗಿದೆ. ಉತ್ತರ ಕನ್ನಡದ ಕರಾವಳಿ, ಮಂಡ್ಯ, ಶಿವಮೊಗ್ಗದ ತೀರ್ಥಹಳ್ಳಿ ಸುತ್ತಮುತ್ತ ಗುಡುಗು ಸಹಿತ ಮಳೆಯಾಗಿದೆ. ಸುಬ್ರಹ್ಮಣ್ಯ ಮತ್ತು ಕರಾವಳಿಯಲ್ಲಿ ಬಿರುಗಾಳಿ ಸಮೇತ ಮಳೆಯಾಗಿದೆ. ಮೀನುಗಾರಿಕೆ ಮಾಡುತ್ತಿದ್ದ ಬೋಟುಗಳು ಬಂದರಿಗೆ ಮರಳಿ ಲಂಗರು ಹಾಕಿವೆ. ಕೊಡಗಿನಲ್ಲಿ ಸತತ ಮೂರನೇ ದಿನವೂ ಮಳೆ ಸುರಿದಿದ್ದು, ಜನರ ಜೀವನ ತತ್ತರಿಸಿತ್ತು. ಮೈಸೂರು ನಗರದಲ್ಲಿ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿತು. ಜಿಲ್ಲೆಯ ಗಡಿ ಭಾಗದಲ್ಲಿ ಉತ್ತಮ ಮಳೆಯಾಗಿದೆ.

ಬುಧವಾರ ಸಂಜೆ ಬಿದ್ದ ಮಳೆ, ಬಿರುಗಾಳಿಯಿಂದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಹಲವೆಡೆಗಳಲ್ಲಿ ಹಾನಿ ಸಂಭವಿಸಿದೆ. ಧಾರವಾಡ, ಹಾವೇರಿ, ಗದಗ, ಉತ್ತರ ಕನ್ನಡ ಜಿಲ್ಲೆಗಳ ಬಹುತೇಕ ಪ್ರದೇಶದಲ್ಲಿ ಮಳೆಯಾಗಿದೆ. ಉತ್ತರ ಕನ್ನಡದಲ್ಲಿ ಇದು ಸ್ವಲ್ಪ ಜೋರಾಗಿಯೇ ಇತ್ತು. ಬೆಂಗಳೂರಿನಲ್ಲೂ ಸಂಜೆ ಮಳೆ ತಂಪೆರೆದಿದೆ.

ಹಾವೇರಿ ಜಿಲ್ಲೆ ಗದಗ ಜಿಲ್ಲೆಯ ನರಗುಂದ ಮಳೆ ಸ್ವಲ್ಪ ಜೋರಾಗಿತ್ತು. ಹುಬ್ಬಳ್ಳಿ- ಧಾರವಾಡ ಅವಳಿ ನಗರದಲ್ಲಿಯೂ ಗುರುವಾರ ಮುಂಜಾನೆ ಸುಮಾರು 10 ನಿಮಿಷ, ಸಂಜೆ ಸಂಜೆ ಸ್ವಲ್ಪ ಮಳೆಯಾಗಿದೆ.

ಚಿಕ್ಕಬಳ್ಳಾಪುರ, ಯಾದಗಿರಿ, ಕೊಪ್ಪಳ, ಬೆಳಗಾವಿ, ದಾವಣಗೆರೆ ಇನ್ನಿತರೆಡೆ ಜಿಟಿ ಜಿಟಿ ಮಳೆಯಾಗಿದೆ.

ಇನ್ನೂ ಎರಡು ದಿನ ಮಳೆ: ಬಂಗಳಕೊಲ್ಲಿಯ ನೈಋುತ್ಯ ದಿಕ್ಕಿನಿಂದ ತಮಿಳುನಾಡು ಮತ್ತು ಶ್ರೀಲಂಕಾ ನಡುವಿನ ಕೊಮರಿನೇರಿಯಾವರೆಗೆ ಉಂಟಾಗಿದ್ದ ವಾಯುಭಾರ ಕುಸಿತ ಬಲಗೊಂಡು ಅರಬ್ಬೀಸಮುದ್ರದ ಆಗ್ನೇಯ ದಿಕ್ಕಿನವರೆಗೆ ವ್ಯಾಪಿಸಿರುವುದರಿಂದ ರಾಜ್ಯದಲ್ಲಿ ಮಳೆಯಾಗುತ್ತಿದೆ.

ಗುರುವಾರ ಹಾಸನ, ಚಿಕ್ಕಮಗಳೂರು ಮತ್ತು ಮೈಸೂರು ಜಿಲ್ಲೆಯ ವಿವಿಧೆಡೆ 75ರಿಂದ 80 ಮಿ.ಮೀ., ಬೆಂಗಳೂರು ನಗರ, ಚಾಮರಾಜನಗರ, ಮಂಡ್ಯ, ಶಿವಮೊಗ್ಗ, ಬಳ್ಳಾರಿ, ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಗಳ ವಿವಿಧ ಪ್ರದೇಶಗಳಲ್ಲಿ 30 ಮಿ.ಮೀ.ನಿಂದ 56 ಮಿ.ಮೀ. ವರೆಗೆ ಮಳೆಯಾಗಿದೆ. ಶುಕ್ರವಾರ ಉತ್ತರ ಒಳನಾಡಿನ ಜಿಲ್ಲೆಗಳಲ್ಲೂ ಉತ್ತಮ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ನಿರ್ದೇಶಕ ಸುಂದರ್‌ ಮೇತ್ರಿ ತಿಳಿಸಿದ್ದಾರೆ.