Asianet Suvarna News Asianet Suvarna News

ಬಿಬಿಎಂಪಿ ಸ್ಥಾಯಿ ಸಮಿತಿ ಚುನಾವಣೆಗೆ ತಡೆಯಾಜ್ಞೆ

ಬಿಬಿಎಂಪಿ ಸ್ಥಾಯಿ ಸಮಿತಿ ಚುನಾವಣೆಗೆ ತಡೆಯಾಜ್ಞೆ |  ಅಧ್ಯಕ್ಷರ ಅಧಿಕಾರ ಅವಧಿ ಪೂರ್ಣಗೊಳ್ಳುವ ಮುನ್ನ ಚುನಾವಣೆ ಸೂಕ್ತವಲ್ಲ |  ಅಧಿಕಾರ ಅವಧಿ ಮೊಟಕುಗೊಳಿಸುವ ಅಧಿಕಾರ ಸರ್ಕಾರಕ್ಕಿಲ್ಲ: ಹೈಕೋರ್ಟ್‌

Karnataka high court stays election to BBMP Standing committees
Author
Bengaluru, First Published Sep 28, 2019, 10:53 AM IST

ಬೆಂಗಳೂರು (ಸೆ. 28): ಬಿಬಿಎಂಪಿಯ 12 ಸ್ಥಾಯಿ ಸಮಿತಿಗಳ ಚುನಾವಣೆಗೆ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ. ಮೇಯರ್‌ ಹಾಗೂ ಉಪ ಮೇಯರ್‌ ಚುನಾವಣೆ ಜತೆಗೆ ಅ.1ರಂದು ಸ್ಥಾಯಿ ಸಮಿತಿಗಳಿಗೂ ಚುನಾವಣೆ ನಿಗದಿಗೊಳಿಸಲಾಗಿತ್ತು.

ಮೇಯರ್‌ ಹಾಗೂ ಉಪ ಮೇಯರ್‌ ಚುನಾವಣೆ ಜತೆಗೆ 12 ಸ್ಥಾಯಿ ಸಮಿತಿಗಳಿಗೆ ಚುನಾವಣೆ ನಡೆಸಲು ನಗರಾಭಿವೃದ್ಧಿ ಇಲಾಖೆ ಅಧೀನ ಕಾರ್ಯದರ್ಶಿ ಮತ್ತು ಬಿಬಿಎಂಪಿ ಕೌನ್ಸಿಲ್‌ ಕಾರ್ಯದರ್ಶಿ ಸೆ.23ರಂದು ಹೊರಡಿಸಿದ ಅಧಿಸೂಚನೆ ಪ್ರಶ್ನಿಸಿ, ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಇಮ್ರಾನ್‌ ಪಾಷಾ ಸೇರಿ ವಿವಿಧ 8 ಸ್ಥಾಯಿ ಸಮಿತಿಗಳ ಅಧ್ಯಕ್ಷರು ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು.

ಬಿಬಿಎಂಪಿ ಮೇಯರ್ ಆಯ್ಕೆಯಲ್ಲಿ ಮಹಾ ಟ್ವಿಸ್ಟ್ : ಮೋದಿ ಕೊಟ್ರು ಈ ಸೂಚನೆ!

ಶುಕ್ರವಾರ ಈ ಅರ್ಜಿ ಕುರಿತು ವಾದ ಆಲಿಸಿದ ನ್ಯಾಯಮೂರ್ತಿ ಬಿ.ವೀರಪ್ಪ ಅವರಿದ್ದ ಏಕ ಸದಸ್ಯ ನ್ಯಾಯಪೀಠ, ಸ್ಥಾಯಿ ಸಮಿತಿಗೆ ಚುನಾಯಿತ ಅಧ್ಯಕ್ಷರ ಅಧಿಕಾರವಾವಧಿ ಒಂದು ವರ್ಷ ಆಗಿರುತ್ತದೆ. ಆ ಅವಧಿಯನ್ನು ಸರ್ಕಾರ ಮೊಟಕುಗೊಳಿಸುವಂತಿಲ್ಲ ಅಭಿಪ್ರಾಯಪಟ್ಟಿತು. ನಂತರ ಅ.1ರಂದು ಬಿಬಿಎಂಪಿಯ ವಿವಿಧ 12 ಸ್ಥಾಯಿ ಸಮಿತಿಗಳಿಗೆ ಚುನಾವಣೆ ನಡೆಸಲು ಹೊರಡಿಸಿದ್ದ ಅಧಿಸೂಚನೆಗೆ ಮಧ್ಯಂತರ ತಡೆಯಾಜ್ಞೆ ನೀಡಿ ಆದೇಶ ಮಾಡಿತು.

ಜತೆಗೆ, ಅರ್ಜಿ ಕುರಿತು ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿ ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ, ಬೆಂಗಳೂರು ವಲಯದ ಪ್ರಾದೇಶಿಕ ಆಯುಕ್ತರು, ಬಿಬಿಎಂಪಿ ಆಯುಕ್ತರು ಮತ್ತು ಕೌನ್ಸಿಲ್‌ ಕಾರ್ಯದರ್ಶಿಗೆ ನೋಟಿಸ್‌ ಜಾರಿಗೊಳಿಸಿ ವಿಚಾರಣೆ ಮುಂದೂಡಿತು.

ಬಿಜೆಪಿ ಮೇಯರ್ ಆಯ್ಕೆ: ಸಿಎಂ ಅಧ್ಯಕ್ಷರ ಹಗ್ಗಜಗ್ಗಾಟ!

ಬಿಬಿಎಂಪಿ 12 ಸ್ಥಾಯಿ ಸಮಿತಿಗಳಿಗೆ 2018ರ ಡಿ.5ರಂದು ಚುನಾವಣೆ ನಡೆದಿದೆ. ಕರ್ನಾಟಕ ಮುನ್ಸಿಪಲ್‌ ಕಾರ್ಪೋರೇಷನ್‌ ಕಾಯ್ದೆಯ ಸೆಕ್ಷನ್‌ 11(5) ಅನ್ವಯ ಸ್ಥಾಯಿ ಸಮಿತಿ ಅಧ್ಯಕ್ಷರ ಅವಧಿ ಒಂದು ವರ್ಷ. ಅದರಂತೆ 2019ರ ಡಿ.4 ಕ್ಕೆ ಮತ್ತೆ ಚುನಾವಣೆ ನಡೆಯಬೇಕು. ಆದರೆ, ಅಧಿಕಾರವಧಿ ಪೂರ್ಣಗೊಳ್ಳುವ ಮೊದಲೇ ಅ.1ರಂದು ಚುನಾವಣೆ ನಿಗದಿ ಪಡಿಸಲಾಗಿದೆ. ಸ್ಥಾಯಿ ಸಮಿತಿಗಳ ಚುನಾಯಿತ ಸದಸ್ಯರ ಅಧಿಕಾರಾವಧಿ ಮೊಟಕುಗೊಳಿಸುವುದು ಸರಿಯಲ್ಲ. ಆ ಕ್ರಮ ಕಾನೂನು ಬಾಹಿರವಾಗಿದ್ದು, ಚುನಾವಣಾ ಅಧಿಸೂಚನೆಯನ್ನು ರದ್ದುಪಡಿಸಬೇಕೆಂದು ಕೋರಿದರು.

Follow Us:
Download App:
  • android
  • ios