ಬೆಂಗಳೂರು (ಸೆ. 26): ರಾಜಧಾನಿ ಬೆಂಗಳೂರಿನ ಮೇಯರ್ ಅಭ್ಯರ್ಥಿ ಆಯ್ಕೆಗೆ ಸಂಬಂಧಿಸಿದಂತೆ ಆಡಳಿತಾರೂಢ ಬಿಜೆಪಿ ಮತ್ತು ಸರ್ಕಾರದ ನಡುವೆ ಕಂದಕವನ್ನೇ ಸೃಷ್ಟಿಸಿದ್ದು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ನಡುವೆ ಸಮನ್ವಯದ ಕೊರತೆ ಕಾಣಿಸಿಕೊಂಡಿದೆ.

ಸೋಮವಾರ ಮುಖ್ಯಮಂತ್ರಿ ಬಿ.ಎಸ್ .ಯಡಿಯೂರಪ್ಪ ನೇತೃತ್ವದಲ್ಲಿ ನಡೆದಿದ್ದ ಶಾಸಕರು ಹಾಗೂ ಸಂಸದರ ಸಭೆಯಲ್ಲಿ ಮೇಯರ್ ಅಭ್ಯರ್ಥಿ ಆಯ್ಕೆ ಕುರಿತು ಅಭಿಪ್ರಾಯ ಸಂಗ್ರಹಿಸಲು ಶಾಸಕ ಎಸ್.ರಘು ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು. ಸಮಿತಿ ರಚಿಸಿರುವ ಬಗ್ಗೆ ಕಂದಾಯ ಸಚಿವ ಆರ್. ಅಶೋಕ್ ಅಧಿಕೃತವಾಗಿ ಹೇಳಿಕೆಯನ್ನೂ ನೀಡಿದ್ದರು. ಜೊತೆಗೆ ಸಮಿತಿ ತನ್ನ ಕೆಲಸವನ್ನೂ ನಡೆಸಿತ್ತು. ಆದರೆ, ಎರಡು ದಿನಗಳ ನಂತರ ಆ ಸಮಿತಿ ರಚನೆಗೆ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ.

ನಿಷೇಧದ ನಂತ್ರ ರಾತ್ರಿಹೊತ್ತಲ್ಲಿ ಪ್ಲಾಸ್ಟಿಕ್ ತಯಾರಿ, BBMPಗೆ ತಲೆನೋವು

‘ಬಿಬಿಎಂಪಿ ಮೇಯರ್ ಚುನಾವಣೆ ದೃಷ್ಟಿಯಿಂದ ಪಕ್ಷವು ಯಾವುದೇ ಸಮಿತಿ ರಚನೆ ಮಾಡಿಲ್ಲ. ಮಾಧ್ಯಮಗಳಲ್ಲಿ ವರದಿಯಾಗಿರುವಂತೆ ಬಿಬಿಎಂಪಿ ಮೇಯರ್ ಚುನಾವಣೆಗೆ ಸಂಬಂಧಿಸಿದಂತೆ ಪಕ್ಷದ ಆಯ್ಕೆ ಸಮಿತಿ ರಚನೆಯಾಗಿರುವುದು ಸತ್ಯಕ್ಕೆ ದೂರವಾದದ್ದು. ಬೆಂಗಳೂರಿನ ಪ್ರಮುಖರೊಂದಿಗೆ ಸಮಾಲೋಚನೆ ನಡೆಸಿ ಮೇಯರ್ ಅಭ್ಯರ್ಥಿಯನ್ನು ರಾಜ್ಯ ಬಿಜೆಪಿಯು ಮಾಡಲಿದೆ’ ಎಂದು ರಾಜ್ಯಾಧ್ಯಕ್ಷ ಕಟೀಲ್ ಅವರು ಬುಧವಾರ ಪ್ರಕಟಣೆ ನೀಡುವ ಮೂಲಕ ಪಕ್ಷದ ವಿರೋಧ ದಾಖಲಿಸಿದ್ದಾರೆ.

ರಸ್ತೆ ಹೊಂಡಗಳನ್ನು ಮುಚ್ಚೋಕೆ ಅಡ್ಡಿಯಾಗ್ತಿದೆ ವಾಹನ ದಟ್ಟಣೆ

ಒಟ್ಟಾರೆ ಬಿಬಿಎಂಪಿ ಮೇಯರ್ ಆಯ್ಕೆ ವಿಚಾರದಲ್ಲಿ ಪಕ್ಷವನ್ನು ದೂರವಿಟ್ಟು ಸರ್ಕಾರದ ಮುಖ್ಯಮಂತ್ರಿ, ಸಚಿವರು ಹಾಗೂ ಶಾಸಕರೇ ನಿರ್ಧರಿಸಲು ಹೊರಟಿರುವುದು ರಾಜ್ಯಾಧ್ಯಕ್ಷ ಕಟೀಲ್ ಅವರಿಗೆ ಆಕ್ರೋಶ ಮೂಡಿಸಿದೆ. ಈ ಬಗ್ಗೆ ಬುಧವಾರ ಸಂಜೆ ನಡೆದ ಪಕ್ಷದ ಹಿರಿಯ ನಾಯಕರನ್ನು ಒಳಗೊಂಡ ಕೋರ್ ಕಮಿಟಿ ಸಭೆಯಲ್ಲೂ ಚರ್ಚೆ ನಡೆದಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ರಾಜ್ಯಾಧ್ಯಕ್ಷ ಕಟೀಲ್ ಅವರು ಮೇಯರ್ ಅಭ್ಯರ್ಥಿ ಆಯ್ಕೆ ಮಾಡಲು ತೀರ್ಮಾನಿಸಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.