ಬೆಂಗಳೂರು :  ಪುತ್ತೂರಿನ ಶ್ಯಾಮಶಾಸ್ತ್ರಿ ಅಸಹಜ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸನಗರದ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ವಿರುದ್ಧ ನಡೆಯುತ್ತಿರುವ ವಿಚಾರಣೆಗೆ ಹೈಕೋರ್ಟ್‌ ಗುರುವಾರ ತಡೆಯಾಜ್ಞೆ ನೀಡಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಸಿಜೆಎಂ ನ್ಯಾಯಾಲಯದಲ್ಲಿ ಶ್ಯಾಮಶಾಸ್ತ್ರಿ ಅಸಹಜ ಸಾವು ಪ್ರಕರಣದ ವಿಚಾರಣೆ ನಡೆಯುತ್ತಿದ್ದು, ಪ್ರಕರಣ ರದ್ದು ಮಾಡಬೇಕು ಹಾಗೂ ವಿಚಾರಣೆಗೆ ತಡೆಯಾಜ್ಞೆ ನೀಡುವಂತೆ ಸ್ವಾಮೀಜಿ ಅರ್ಜಿ ಸಲ್ಲಿಸಿದ್ದರು. ನ್ಯಾಯಮೂರ್ತಿ ಅಶೋಕ್‌ ನಿಜಗಣ್ಣವರ್‌ ಅವರಿದ್ದ ಹೈಕೋರ್ಟ್‌ ಏಕಸದಸ್ಯ ನ್ಯಾಯಪೀಠವು ಸ್ವಾಮೀಜಿ ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿ ಅರ್ಜಿಯ ಮುಂದಿನ ವಿಚಾರಣೆವರೆಗೆ ಪುತ್ತೂರು ಸಿಜೆಎಂ ನ್ಯಾಯಾಲಯದ ವಿಚಾರಣೆಗೆ ತಡೆ ನೀಡಿ, ಪ್ರಕರಣದ ವಿಚಾರಣೆಯನ್ನು 2019ರ ಜನವರಿ 10ಕ್ಕೆ ಮುಂದೂಡಿತು.

ಸ್ವಾಮೀಜಿ ಪರ ವಕೀಲ ಪಿ.ಎನ್‌. ಮನಮೋಹನ್‌ ವಾದ ಮಂಡಿಸಿ, ಕಾನೂನು ಪ್ರಕಾರ ಅಪರಾಧ ಅಥವಾ ಘಟನೆ ನಡೆದ ಪೊಲೀಸ್‌ ಠಾಣೆ ವ್ಯಾಪ್ತಿಯ ಉಸ್ತುವಾರಿ ಠಾಣಾಧಿಕಾರಿಯ ವರದಿ ಆಧರಿಸಿ ಮ್ಯಾಜಿಸ್ಪ್ರೇಟ್‌ ನ್ಯಾಯಾಲಯ ಪ್ರಕರಣವನ್ನು ವಿಚಾರಣೆಗೆ ಪರಿಗಣಿಸಬಹುದು. ಈ ಪ್ರಕರಣದಲ್ಲಿ ಠಾಣಾಧಿಕಾರಿ ಚಾರ್ಜ್ ಶೀಟ್ ಸಲ್ಲಿಸಿಲ್ಲ, ಬದಲಿಗೆ ಸಿಐಡಿ ಪೊಲೀಸರು ಚಾಜ್‌ರ್‍ಶೀಟ್‌ ಸಲ್ಲಿಸಿದ್ದಾರೆ. ಈ ಪ್ರಕರಣದಲ್ಲಿ ಸಿಐಡಿ ಸಂಬಂಧಪಟ್ಟಪೊಲೀಸ್‌ ಠಾಣೆಯ ಉಸ್ತುವಾರಿ ಠಾಣಾಧಿಕಾರಿ ಅಲ್ಲ. ಅಲ್ಲದೇ ಸಿಐಡಿಯನ್ನು ಪೊಲೀಸ್‌ ಠಾಣೆ ಎಂದು ಪರಿಗಣಿಸಲಾಗುವುದಿಲ್ಲ. ಹಾಗಾಗಿ, ಸ್ವಾಮೀಜಿ ವಿರುದ್ಧ ದೂರು ದಾಖಲಿಸಿಕೊಳ್ಳಲು ಹೇಳಿದ ಮತ್ತು ವಿಚಾರಣೆ ಮುಂದುವರಿಸುತ್ತಿರುವ ಸಿಜೆಎಂ ನ್ಯಾಯಾಲಯದ ಕ್ರಮ ಲೋಪದಿಂದ ಕೂಡಿದೆ ಎಂದು ವಾದಿಸಿದ್ದರು.

ಅರ್ಜಿದಾರರ ಪರ ವಕೀಲರ ವಾದ ಪುರಸ್ಕರಿಸಿದ ನ್ಯಾಯಪೀಠ, ಸ್ವಾಮೀಜಿ ವಿರುದ್ಧದ ವಿಚಾರಣೆ ತಡೆ ನೀಡಿ ಆದೇಶಿಸಿತು.

ಪ್ರಕರಣವೇನು?:  ರಾಮ​ಕಥಾ ಗಾಯಕಿ ಪ್ರೇಮ​ಲತಾ ಅವರ ಪತಿ ದಿವಾ​ಕರ ಶಾಸ್ತ್ರಿ ಅವರ ಸಹೋ​ದ​ರ​ರಾದ ಪುತ್ತೂರಿನ ಶ್ಯಾಮಶಾಸ್ತ್ರಿ 2014ರ ಆಗಸ್ಟ್‌ 31ರಂದು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರು. ಅಂದು ಶ್ಯಾಮಶಾಸ್ತ್ರಿ ಅವರ ಪತ್ನಿ ಸಂಧ್ಯಾ ಲಕ್ಷ್ಮೀ ಪುತ್ತೂರು ಪೊಲೀಸ್‌ ಠಾಣೆಯಲ್ಲಿ ರಾಘವೇಶ್ವರ ಸ್ವಾಮೀಜಿ ವಿರುದ್ಧ ದೂರು ದಾಖಲಿಸಿದ್ದರು. ಈ ಸಂಬಂಧ ಎಫ್‌ಐಆರ್‌ ದಾಖಲಾಗಿತ್ತು. ನಾಲ್ಕು ವರ್ಷದ ಬಳಿಕ ಅಂದರೆ 2018ರ ಸೆ.20ರಂದು ಚಾರ್ಜ್ ಸಲ್ಲಿಸಲಾಗಿತ್ತು. ಪ್ರಕರಣವನ್ನು ವಿಚಾರಣೆಗೆ ಪರಿಗಣಿಸಿದ ಸಿಜೆಎಂ ನ್ಯಾಯಾಲಯ 2018ರ ಅ.31ರಂದು ಸ್ವಾಮೀಜಿ ವಿರುದ್ಧ ಸಮನ್ಸ್‌ ಜಾರಿಗೊಳಿಸಿತ್ತು.