ಸಾಮಾಜಿಕ ಕಾರ್ಯಕರ್ತೆ ಭೀಮಪುತ್ರಿ ರೇವತಿ ರಾಜ್ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಜಾತಿ ನಿಂದನೆ ಹಾಗೂ ಚಾರಿತ್ರ್ಯಹರಣ ಮಾಡುವಂತಹ ಬರಹಗಳನ್ನು ಪ್ರಕಟಿಸಿದ ಆರೋಪ ಸಂಬಂಧ ರಾಮಚಂದ್ರಾಪುರ ಮಠದ ರಾಘವೇಶ್ವರ ಸ್ವಾಮೀಜಿ ಅವರ ಐವರು ಭಕ್ತರ ವಿರುದ್ಧ ಗಿರಿನಗರ ಠಾಣೆಯಲ್ಲಿ ದಾಖಲಾಗಿದ್ದ ಎಫ್‌'ಐಆರ್‌'ಗೆ ಹೈಕೋರ್ಟ್ ಸೋಮವಾರ ಮಧ್ಯಂತರ ತಡೆಯಾಜ್ಞೆ ನೀಡಿದೆ.
ಬೆಂಗಳೂರು(ನ.21): ಸಾಮಾಜಿಕ ಕಾರ್ಯಕರ್ತೆ ಭೀಮಪುತ್ರಿ ರೇವತಿ ರಾಜ್ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಜಾತಿ ನಿಂದನೆ ಹಾಗೂ ಚಾರಿತ್ರ್ಯಹರಣ ಮಾಡುವಂತಹ ಬರಹಗಳನ್ನು ಪ್ರಕಟಿಸಿದ ಆರೋಪ ಸಂಬಂಧ ರಾಮಚಂದ್ರಾಪುರ ಮಠದ ರಾಘವೇಶ್ವರ ಸ್ವಾಮೀಜಿ ಅವರ ಐವರು ಭಕ್ತರ ವಿರುದ್ಧ ಗಿರಿನಗರ ಠಾಣೆಯಲ್ಲಿ ದಾಖಲಾಗಿದ್ದ ಎಫ್'ಐಆರ್'ಗೆ ಹೈಕೋರ್ಟ್ ಸೋಮವಾರ ಮಧ್ಯಂತರ ತಡೆಯಾಜ್ಞೆ ನೀಡಿದೆ.
ಪ್ರಕರಣದ ಸಂಬಂಧ ತಮ್ಮ ವಿರುದ್ಧ ಗಿರಿನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್'ಐಆರ್ ರದ್ದುಪಡಿಸುವಂತೆ ಕೋರಿ ಸಾಗರ ತಾಲ್ಲೂಕಿನ ಹೆಗ್ಗೆಕೊಪ್ಪ ಗ್ರಾಮದ ಪ್ರಶಾಂತ್ ಜಿ. ಹೆಗಡೆ, ಕುಂದಾಪುರ ತಾಲೂಕು ಕಂಬದಕೋಣೆಯ ಎಂ.ಮಂಜುನಾಥ ಭಟ್, ಸಿದ್ದಾಪುರ ತಾಲೂಕಿನ ಇಟ್ಟಗಿಯ ಪ್ರಕಾಶ್ ಸೀತಾರಾಮ ಭಟ್, ಸುಳ್ಯ ತಾಲೂಕಿನ ಬಾಳಿಲ ಗ್ರಾಮದ ಕೆ. ರಾಮಪ್ರಸಾದ್ ಮತ್ತು ಹೊನ್ನಾವರ ತಾಲೂಕಿನ ಕುಂಬಾರಮಕ್ಕಿ ಗ್ರಾಮದ ಗಣಪತಿ ಹೆಗಡೆ ಹೈಕೋರ್ಟ್ಗೆ ತಕರಾರು ಅರ್ಜಿ ಸಲ್ಲಿಸಿದ್ದರು.
ಸೋಮವಾರ ಈ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಅವರಿದ್ದ ಏಕಸದಸ್ಯ ನ್ಯಾಯಪೀಠ ಅರ್ಜಿದಾರರ ವಿರುದ್ಧದ ಎಫ್'ಐಆರ್'ಗೆ ತಡೆಯಾಜ್ಞೆ ನೀಡಿತು. ಅಲ್ಲದೆ, ಅರ್ಜಿ ಕುರಿತು ಉತ್ತರಿಸುವಂತೆ ಪ್ರತಿವಾದಿಗಳಾದ ಗಿರಿನಗರ ಪೊಲೀಸ್ ಇನ್ಸ್ಪೆಕ್ಟರ್, ಬಹುಜನ ದಲಿತ ಸಂಘರ್ಷ ಸಮಿತಿ ಸಂಸ್ಥಾಪಕ ಅಧ್ಯಕ್ಷ ಆರ್.ಎಂ.ಎನ್. ರಮೇಶ್ ಹಾಗೂ ಭೀಮಪುತ್ರಿ ರೇವತಿ ಅವರಿಗೆ ನೋಟಿಸ್ ಜಾರಿ ಮಾಡಿತು.
ಕನ್ಯಾ ಸಂಸ್ಕಾರ ವಿವಾದ: ರಾಘವೇಶ್ವರ ಭಾರತೀ ಸ್ವಾಮೀಜಿ ಅವರು ಬೆಂಗಳೂರಿನ ಗಿರಿನಗರದಲ್ಲಿರುವ ರಾಮಚಂದ್ರಾಪುರ ಶಾಖಾಮಠದಲ್ಲಿ 2017ರ ಜುಲೈ 20ರಂದು ಕನ್ಯಾ ಸಂಸ್ಕಾರ ನಡೆಸಿದ್ದರು.ಇದನ್ನು ವಿರೋಧಿಸಿ ಬಹುಜನ ದಲಿತ ಸಂಘರ್ಷ ಸಮಿತಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಭೀಮಪುತ್ರಿ ರೇವತಿ ರಾಜ್ ಹಾಗೂ ಸಮಿತಿಯ ಇತರೆ ಕಾರ್ಯಕರ್ತರು ಮಠದ ಮುಂದೆ ಪ್ರತಿಭಟನೆ ನಡೆಸಿದ್ದರು.
ತದನಂತರ ರೇವತಿರಾಜ್ ಅವರು 20017ರ ಸೆಪ್ಟೆಂಬರ್ 20ರಂದು ರಾಜ್ಯ ಗಿರಿನಗರ ಪೊಲೀಸ್ ಠಾಣೆಯಲ್ಲಿ ಒಂಬತ್ತು ಜನರ ವಿರುದ್ಧ ದೂರು ನೀಡಿದ್ದರು. ಒಂಬತ್ತು ಜನರ ಪೈಕಿ ಐವರು ಅರ್ಜಿದಾರರು ಸೇರಿದ್ದಾರೆ. ಪ್ರಶಾಂತ್ ಜಿ. ಹೆಗಡೆ ಹಾಗೂ ಇತರೆ ನಾಲ್ವರು ಅರ್ಜಿದಾರರು ಸೇರಿದಂತೆ ಒಂಬತ್ತು ಜನ ತಮ್ಮ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಜಾತಿ ನಿಂದನೆ ಹಾಗೂ ನನ್ನ ಚಾರಿತ್ರ್ಯಹರಣ ಮಡುವಂತಹ ಬರಹ ಪ್ರಕಟಿದ್ದಾರೆ. ಹಾಗೆಯೇ, ತಮಗೆ ಜೀವ ಬೆದರಿಕೆಯನ್ನೂ ಒಡ್ಡಿದ್ದಾರೆ ಎಂದು ರೇವತಿರಾಜ್ ದೂರಿದ್ದರು. ಪೊಲೀಸರು ಅರ್ಜಿದಾರರ ವಿರುದ್ಧ ಎಫ್ ಐಆರ್ ದಾಖಲಿಸಿದ್ದರು.
