ಬೆಂಗಳೂರು[ಆ.18] ಮಳೆಯ ಅವಾಂತರಕ್ಕೀಡಾಗಿರುವ ಕೊಡಗು, ದಕ್ಷಿಣ ಕನ್ನಡ, ಉಡುಪಿ, ಹಾಸನ, ಚಿಕ್ಕಮಗಳೂರು, ಉತ್ತರ ಕನ್ನಡ ಜಿಲ್ಲೆಗಳಿಗೆ ಪರಿಹಾರ ಕಾರ್ಯಗಳಿಗಾಗಿ ಈ ಅನುದಾನ ನೀಡಲಾಗುವುದು ಎಂದು ಅವರು ಹೇಳಿದ್ದಾರೆ. 200 ಕೋಟಿ ರು. ಅನುದಾನ ಕೂಡಲೇ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಭಾರೀ ಮಳೆಯಿಂದಾಗಿ ತಲೆದೋರಿರುವ ಪ್ರವಾಹ ಮತ್ತು ಮಣ್ಣಿನ ಕುಸಿತದಿಂದ ಸಿಲುಕಿಕೊಂಡ ಜನರ ರಕ್ಷಣೆ ಮತ್ತು ಇತರ ಪರಿಹಾರ ಕಾರ್ಯಾಚರಣೆಗಳ ಕುರಿತು ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್‌ ಅವರಿಂದ ಮುಖ್ಯಮಂತ್ರಿಗಳು ಮಾಹಿತಿ ಪಡೆದುಕೊಂಡಿದ್ದಾರೆ.

ವಾಡಿಕೆಗಿಂತ ಹೆಚ್ಚು ಮಳೆ: ಮಳೆಯಿಂದಾಗಿ ಮಲೆನಾಡು ಮತ್ತು ಕರಾವಳಿ ಭಾಗದ ಜಿಲ್ಲೆಯಲ್ಲಿ ಸಂಭವಿಸಿರುವ ನಷ್ಟದ ಕುರಿತು ಎರಡು ದಿನದಲ್ಲಿ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ. ವಾಡಿಕೆಗಿಂತ ಕೊಡಗಿನಲ್ಲಿ ಶೇ.175ರಷ್ಟು, ಉಡುಪಿಯಲ್ಲಿ ಶೇ.62ರಷ್ಟು, ಶಿವಮೊಗ್ಗದಲ್ಲಿ ಶೇ.117, ಚಿಕ್ಕಮಗಳೂರಿನಲ್ಲಿ ಶೇ.170, ಹಾಸನದಲ್ಲಿ ಶೇ.130, ಉತ್ತರಕನ್ನಡ ಜಿಲ್ಲೆಯಲ್ಲಿ ಶೇ.81ರಷ್ಟುಹೆಚ್ಚುವರಿಯಾಗಿ ಮಳೆಯಾಗಿದೆ. ಎಲ್ಲಾ ಜಿಲ್ಲಾ ಉಸ್ತುವಾರಿ ಸಚಿವರು ಆಯಾ ಜಿಲ್ಲೆಗಳಲ್ಲಿ ವಾಸ್ತವ್ಯ ಹೂಡಿ ಪರಿಹಾರ ಕಾರ್ಯಗಳ ಮೇಲ್ವಿಚಾರಣೆ ಮಾಡುತ್ತಿದ್ದಾರೆ. 29 ಗಂಜಿ ಕೇಂದ್ರಗಳನ್ನು ತೆರೆಯಲಾಗಿದ್ದು, 1755 ಜನರಿಗೆ ಆಶ್ರಯ ನೀಡಲಾಗಿದೆ ಎಂದು ಕುಮಾರಸ್ವಾಮಿ ವಿವರಿಸಿದ್ದಾರೆ.

ಸಂತ್ರಸ್ತರ ರಕ್ಷಣೆಗೆ ಸೇನೆಯ ನೆರವು ಪಡೆಯಲಾಗುತ್ತಿದೆ. ಹೆಲಿಕಾಪ್ಟರ್‌ ಮೂಲಕ ರಕ್ಷಿಸುವ ಪ್ರಯತ್ನ ನಡೆಸಲಾಗುತ್ತಿದೆಯಾದರೂ ಹವಾಮಾನ ವೈಪರಿತ್ಯದಿಂದಾಗಿ ಕಷ್ಟವಾಗುತ್ತಿದೆ. ಸಂಕಷ್ಟದಲ್ಲಿ ಸಿಲುಕಿರುವವರನ್ನು ಶೀಘ್ರದಲ್ಲಿಯೇ ರಕ್ಷಣೆ ಮಾಡಲಾಗುವುದು. ಆಹಾರ, ನೀರಿನ ಸೌಲಭ್ಯದ ವ್ಯವಸ್ಥೆ ಮಾಡಲಾಗಿದೆ. ಜಿಲ್ಲಾಧಿಕಾರಿಗಳ ವರದಿ ಆಧರಿಸಿ, ಪರಿಹಾರಕ್ಕಾಗಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದಿದ್ದಾರೆ.

ಎಲ್ಲಾ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಿಯಂತ್ರಣ ಕೊಠಡಿ ಸ್ಥಾಪನೆ ಮಾಡಲಾಗಿದ್ದು, ದಿನದ 24 ಗಂಟೆಯೂ ಕಾರ್ಯನಿರ್ವಹಿಸುತ್ತಿದೆ. ಈಗಾಗಲೇ ಜಿಲ್ಲಾಧಿಕಾರಿಗಳ ಬಳಿ 237 ಕೋಟಿ ರು. ಅನುದಾನ ಲಭ್ಯವಿದ್ದು, ತಕ್ಷಣ ಪರಿಹಾರ ಒದಗಿಸಲು ಯಾವುದೇ ಸಮಸ್ಯೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಮಲೆನಾಡು ಮತ್ತು ಕರಾವಳಿ ಭಾಗದಲ್ಲಿನ ರಕ್ಷಣೆ ಕಾರ್ಯಾಚರಣೆ ಕುರಿತು ನಿರಂತರವಾಗಿ ಅಧಿಕಾರಿಗಳ ಜತೆ ಸಂಪರ್ಕದಲ್ಲಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಪ್ರವಾಹ ಮತ್ತು ಗುಡ್ಡ ಕುಸಿತದಿಂದ ಸಿಲುಕಿಕೊಂಡಿರುವ ಜನರನ್ನು ರಕ್ಷಿಸಲು ಸೇನೆಯು ನೆರವಿಗೆ ಬಂದಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ, ಅಗ್ನಿ ಶಾಮಕ ದಳ, ಕ್ವಿಕ್‌ ರೆಸ್ಪಾನ್ಸ್‌ ತಂಡ ಸೇರಿದಂತೆ ಇತರೆ ತಂಡಗಳು ಜನರ ರಕ್ಷಣೆಯಲ್ಲಿ ತೊಡಗಿವೆ.

ಜಿಲ್ಲಾ ಉಸ್ತುವಾರಿಗಳ ಸಚಿವರ ಜತೆಗೂ ಮುಖ್ಯಮಂತ್ರಿ ನಿಕಟ ಸಂಪರ್ಕದಲ್ಲಿದ್ದು, ಪರಿಹಾರ ಕಾರ್ಯಗಳ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಪ್ರಧಾನ ಕಾರ್ಯದರ್ಶಿಗಳು ಸಹ ಆಯಾ ಜಿಲ್ಲೆಗಳಲ್ಲಿ ಪರಿಹಾರ ಕಾರ್ಯಾಚರಣೆಯ ಉಸ್ತುವಾರಿ ನಿರ್ವಹಿಸುತ್ತಿದ್ದಾರೆ.