ಬೆಂಗಳೂರು [ಜೂ.15] :  ‘ಹಳ್ಳಿ ಜನರು ತೆರಿಗೆ ಕಟ್ಟುತ್ತಾರಾ? ತೆರಿಗೆ ಕಟ್ಟುವವರು ಉದ್ಯಮಿಗಳು... ಹಳ್ಳಿಗರು ಕೃಷಿ ಮಾಡುತ್ತಾರೆ, ತೆರಿಗೆ ಕಟ್ಟುವುದಿಲ್ಲ. ಉದ್ಯಮಿಗಳು ಮಾತ್ರ ತೆರಿಗೆ ಕಟ್ಟುತ್ತಾರೆ, ಜಿಎಸ್‌ಟಿ ಕಟ್ಟುತ್ತಾರೆ. ಹೀಗಾಗಿ, ಉದ್ಯಮಿಗಳಿಗೆ ಜಮೀನು ನೀಡಿದರೆ ಅದರಿಂದ ಸರ್ಕಾರಕ್ಕೆ ತೆರಿಗೆ ಬರುತ್ತದೆ’

ಹೀಗಂತ ಜಿಂದಾಲ್‌ ಸಂಸ್ಥೆಗೆ ಜಮೀನು ನೀಡುವ ಸರ್ಕಾರದ ಕ್ರಮವನ್ನು ಬಲವಾಗಿ ಸಮರ್ಥಿಸಿಕೊಂಡಿದ್ದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌. ರಾಜಭವನದಲ್ಲಿ ಶುಕ್ರವಾರ ನಡೆದ ಸಚಿವ ಸಂಪುಟ ವಿಸ್ತರಣೆ ಕಾರ್ಯಕ್ರಮಕ್ಕೂ ಮುನ್ನ ಸುದ್ದಿಗಾರರ ಜತೆ ಜಿಂದಾಲ್‌ ಕಂಪನಿಗೆ ಭೂಮಿ ಹಂಚಿಕೆ ಕುರಿತು ಮಾತನಾಡಿದರು. ಸಚಿವರ ಹೇಳಿಕೆಯು ಪ್ರತಿಪಕ್ಷ ಬಿಜೆಪಿಗೆ ಸರ್ಕಾರ ವಿರುದ್ಧ ಮತ್ತೊಂದು ಟೀಕಾಸ್ತ್ರ ಸಿಕ್ಕಂತಾಗಿದೆ.

ಹಳ್ಳಿ ಜನರು ತೆರಿಗೆ ಕಟ್ಟುವುದಿಲ್ಲ. ಕೃಷಿ ಮಾಡುತ್ತಾರೆ. ತೆರಿಗೆ ಪಾವತಿಸುವವರು ಉದ್ಯಮಿಗಳು ಎನ್ನುವ ಮೂಲಕ ಹಳ್ಳಿ ಜನರ ಬಗ್ಗೆ ಹಗುರವಾಗಿ ಮಾತನಾಡಿ, ಉದ್ಯಮಿಗಳ ಪರ ಬ್ಯಾಟ್‌ ಬೀಸಿದ್ದಾರೆ. ಜಿಂದಾಲ್‌ ಕಂಪನಿಗೆ ಭೂಮಿ ಕೊಡುವುದನ್ನು ಬೆಂಬಲಿಸುತ್ತೇನೆ. ಉದ್ಯೋಗ ಕೊಡುವುದು ಬೇಡವಾ? ಐ ಸ್ಟ್ಯಾಂಡ್‌ ವಿತ್‌ ದೆಮ್‌. ತೆರಿಗೆ ಕಟ್ಟುವುದು, ಬಂಡವಾಳ ಹೂಡುವುದು ಕಂಪನಿಗಳೇ ಎಂದು ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡರು.

ನನಗೆ ಉದ್ಯೋಗ ಸೃಷ್ಟಿಯಾಗಬೇಕು. ನಮ್ಮ ಕ್ಷೇತ್ರದಲ್ಲಿ ಯಾರಾದರೂ ಕೈಗಾರಿಕೆ ಸ್ಥಾಪನೆ ಮಾಡುತ್ತೇನೆ ಎಂದು ಮುಂದೆ ಬಂದರೆ ನಾನೇ ಮುಂದೆ ನಿಂತು ಕೈಗಾರಿಕೆ ಸ್ಥಾಪನೆಗೆ ಜಮೀನು ಕೊಡಿಸುತ್ತೇನೆ. ಮೈಸೂರಿನಲ್ಲಿ ಇಸ್ಫೋಸಿಸ್‌ ಸಂಸ್ಥೆಗೆ ಜಮೀನು ಮಂಜೂರು ಮಾಡಿದಾಗಲೂ ಇದೇ ರೀತಿ ಆರೋಪಗಳು ಕೇಳಿ ಬಂದಿದ್ದವು. ಬಿಜೆಪಿಯವರ ಆರೋಪವು ಕೈಗಾರಿಕೆಗಳ ಅಭಿವೃದ್ಧಿಗೆ ವಿರುದ್ಧವಾಗಿದೆ ಎಂದು ಕಿಡಿಕಾರಿದ ಅವರು, ಮೈತ್ರಿ ಸರ್ಕಾರದ ಬಗ್ಗೆ ಯಾರು ಏನೇ ಭವಿಷ್ಯ ಬೇಕಾದರೂ ನುಡಿಯಲಿ, ಸರ್ಕಾರ ಗಟ್ಟಿಯಾಗಿ ಉಳಿಯುತ್ತದೆ. ಭವಿಷ್ಯ ಹೇಳಿದವರನ್ನು ಕಂಡಿದ್ದೇನೆ. ಅದೆಲ್ಲ ಏನೂ ಆಗಲ್ಲ. ಎಲ್ಲ ಶಾಸಕರಿಗೂ ಆಸೆ-ಆಕಾಂಕ್ಷೆಗಳು ಇರುತ್ತವೆ. ಹಿರಿಯರು, ಪ್ರಾಮಾಣಿಕರಿಗೂ ಅವಕಾಶ ಸಿಗಲಿದೆ ಎಂದು ಹೇಳಿದರು.