ಬೆಂಗಳೂರು [ಜು.07] :  ಆಡಳಿತಾರೂಢ ಕಾಂಗ್ರೆಸ್‌ ಮತ್ತು ಜೆಡಿಎಸ್‌ನ ಒಟ್ಟು 13 ಶಾಸಕರು ರಾಜೀನಾಮೆ ಸಲ್ಲಿಸಿದ ಬೆನ್ನಲ್ಲೇ ಸಮ್ಮಿಶ್ರ ಸರ್ಕಾರ ಪತನಗೊಳ್ಳುವ ಭೀತಿ ಬಲವಾಗಿ ಕಾಣಿಸಿಕೊಂಡಿದೆ.

ಕರ್ನಾಟಕದ ವಿಧಾನಸಭೆಯ ಒಟ್ಟು ಸದಸ್ಯರ ಸಂಖ್ಯೆ 224. ಇದರಲ್ಲಿ ಪಕ್ಷವಾರು ಬಲಾಬಲ ಹೀಗಿದೆ. ಬಿಜೆಪಿ 105, ಕಾಂಗ್ರೆಸ್‌ 79, ಜೆಡಿಎಸ್‌ 37, ಬಿಎಸ್‌ಪಿ 1 ಹಾಗೂ ಇಬ್ಬರು ಪಕ್ಷೇತರರು. ಆಡಳಿತಾರೂಢ ಪಕ್ಷಗಳ ಹಾಲಿ ಸದಸ್ಯರ ಒಟ್ಟು ಸಂಖ್ಯೆ ಬಿಜೆಪಿಯ ಬಲಕ್ಕಿಂತ ಒಂದು ಕಡಿಮೆಯಾದರೂ ಸಮ್ಮಿಶ್ರ ಸರ್ಕಾರ ಪತನಗೊಳ್ಳುವುದು ನಿಶ್ಚಿತ. ಒಟ್ಟು ಹಾಲಿ ಸದಸ್ಯರ ಆಧಾರದ ಮೇಲೆಯೇ ಮ್ಯಾಜಿಕ್‌ ನಂಬರ್‌ ನಿರ್ಧಾರವಾಗಲಿದೆ. ಅಂದರೆ, ಸದನದ ಪೂರ್ಣ ಸಂಖ್ಯಾಬಲ 224 ಇದ್ದಾಗ ಮ್ಯಾಜಿಕ್‌ ನಂಬರ್‌ 113. ಅಂದರೆ ಸರ್ಕಾರ ಉಳಿಯಲು 113 ಶಾಸಕರ ಬೆಂಬಲ ಬೇಕು.

ರಾಜೀನಾಮೆ ನೀಡಿದ ಶಾಸಕರನ್ನು ಹೊರತುಪಡಿಸಿ ಇನ್ನುಳಿಯುವ ಶಾಸಕರ ಸಂಖ್ಯೆಯ ಆಧಾರದ ಮೇಲೆಯೇ ಬಹುಮತ ನಿರ್ಧರಿಸಲಾಗುತ್ತದೆ. ಅಂದರೆ, ಅರ್ಧಕ್ಕಿಂತ ಒಂದು ಸ್ಥಾನ ಹೆಚ್ಚಿರುವ ಪಕ್ಷಕ್ಕೆ ಬಹುಮತ ಇದೆ ಎಂದು ಅಥವಾ ಒಂದು ಸ್ಥಾನ ಕಡಿಮೆ ಇರುವ ಪಕ್ಷ ಬಹುಮತ ಕಳೆದುಕೊಂಡಿದೆ ಎಂದು ತೀರ್ಮಾನಿಸಲಾಗುತ್ತದೆ.

ಸದ್ಯಕ್ಕೆ ಇದರ ಆಧಾರದ ಮೇಲೆ ಎರಡು ಲೆಕ್ಕಾಚಾರಗಳು ಕೇಳಿಬರುತ್ತಿವೆ:

1- ಸ್ಪೀಕರ್‌ ಸೇರಿದಂತೆ ಸದ್ಯ ಸಮ್ಮಿಶ್ರ ಸರ್ಕಾರದ ಒಟ್ಟು ಸಂಖ್ಯಾ ಬಲ 119. ಇದರಲ್ಲಿ ಇಬ್ಬರು ಪಕ್ಷೇತರರು ಮತ್ತು ಬಿಎಸ್‌ಪಿಯ ಒಬ್ಬ ಶಾಸಕರೂ ಸೇರಿದ್ದಾರೆ. ಈ ಸಂಖ್ಯೆ ಬಿಜೆಪಿಗಿಂತ ಕಡಿಮೆ, ಅಂದರೆ 104ಕ್ಕೆ ಇಳಿಯಬೇಕಾದಲ್ಲಿ ಆಡಳಿತಾರೂಢ ಪಕ್ಷಗಳ ಒಟ್ಟು 15 ಮಂದಿ ಶಾಸಕರು ರಾಜೀನಾಮೆ ನೀಡಿ ಹೊರಬರಬೇಕಾಗುತ್ತದೆ. ಸದ್ಯಕ್ಕೆ 13 ಶಾಸಕರು ರಾಜೀನಾಮೆ ನೀಡಿದ್ದಾರೆ. ಇನ್ನೂ ಇಬ್ಬರು ರಾಜೀನಾಮೆ ನೀಡಿದಲ್ಲಿ ಆಡಳಿತಾರೂಢ ಪಕ್ಷಗಳ ಸಂಖ್ಯಾಬಲ ಬಿಜೆಪಿಗಿಂತ ಕಡಿಮೆಯಾಗಲಿದೆ. ಆಗ ಸರ್ಕಾರ ಬಹುಮತ ಕಳೆದುಕೊಳ್ಳಲಿದೆ.

2- ಒಂದು ವೇಳೆ ಇಬ್ಬರು ಪಕ್ಷೇತರ ಶಾಸಕರ ಪೈಕಿ ಒಬ್ಬರು ಸಮ್ಮಿಶ್ರ ಸರ್ಕಾರಕ್ಕೆ ನೀಡಿರುವ ಬೆಂಬಲ ವಾಪಸ್‌ ಪಡೆದು ಬಿಜೆಪಿಗೆ ಬೆಂಬಲ ನೀಡಿದಲ್ಲಿ ಆಗ ಬಿಜೆಪಿ ಬಲ 106ಕ್ಕೆ ಏರಲಿದೆ. ಸರ್ಕಾರದ ಬಲ 105ಕ್ಕೆ ಕುಸಿಯುತ್ತದೆ. ಆಗಲೂ ಸರ್ಕಾರ ಅಲ್ಪಮತಕ್ಕೆ ಕುಸಿಯಲಿದೆ.