ಬೆಂಗಳೂರು [ಸೆ.10]:  ನಗರದ ಎಳ್ಕುಂಟೆ ಪ್ರಾಥಮಿಕ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಹೇಶ್ವರಿ ಎಂಬ ಕ್ಯಾನ್ಸರ್‌ ಪೀಡಿತ ಶಿಕ್ಷಕಿಗೆ ವರ್ಗಾವಣೆಯಿಂದ ವಿನಾಯಿತಿ ನೀಡಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ಬಸವನಗುಡಿ ಟಿನ್‌ ಶಾಲೆಯಲ್ಲಿ ಸೋಮವಾರ ನಡೆದ ಕೌನ್ಸೆಲಿಂಗ್‌ನಲ್ಲಿ ಭಾಗವಹಿಸಲು ತಮ್ಮ ಮಗಳ ಜತೆ ಆಗಮಿಸಿದ್ದರು. ತಾಂತ್ರಿಕ ಕಾರಣಗಳ ನೆಪವೊಡ್ಡಿ ಇವರಿಗೆ ವಿನಾಯಿತಿ ನೀಡಿಲ್ಲವೆಂದು ಆರೋಪಿಸಿ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹರಿಬಿಟ್ಟಿದ್ದಾರೆ. ಸಾಮಾಜಿಕ ತಾಣದ ಸಂದೇಶದಲ್ಲಿ ಶಿಕ್ಷಕಿ ಅವರ ಸಂಪರ್ಕ ಸಂಖ್ಯೆ ನೀಡಲಾಗಿದೆ. ಆದರೆ, ಪ್ರತಿಕ್ರಿಯೆಗಾಗಿ ಶಿಕ್ಷಕರಿಗೆ ಸತತವಾಗಿ ಪ್ರಯತ್ನ ಮಾಡಿದರೂ ಕೂಡ ಕರೆಯನ್ನು ಸ್ವೀಕರಿಸಿಲ್ಲ. ಸದ್ಯ ಮಹೇಶ್ವರಿ ಅವರು ತಮಿಳುನಾಡಿನ ಮಧುರೈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಬೆಂಗಳೂರು ದಕ್ಷಿಣ ವಲಯ-1ರಲ್ಲಿ ಮಹೇಶ್ವರಿ ಆಗಮಿಸಿದ್ದರು. ಕೆಂಗೇರಿ ಬಳಿಯಲ್ಲಿರುವ ಶಾಲೆಗೆ ವರ್ಗಾವಣೆ ಮಾಡಲಾಗಿದೆ ಎಂದು ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಸಿ. ಬಸವರಾಜೇಗೌಡ ತಿಳಿಸಿದ್ದಾರೆ. ವರ್ಗಾವಣೆ ನಿಯಮದ ಪ್ರಕಾರ ಆರೋಗ್ಯದ ಹಿನ್ನೆಲೆಯಲ್ಲಿ ವಿನಾಯಿತಿ ಕೋರುವವರು ವರ್ಗಾವಣೆ ಮೊದಲೇ ವೈದ್ಯರ ತ್ರಿಸದಸ್ಯ ಸಮಿತಿಯಿಂದ ವರದಿ ಪಡೆದು ಸಲ್ಲಿಸಬೇಕು. ಅದು 2019 ವರದಿಯಾಗಿರಬೇಕು. ಆನಂತರ ಪರಿಶೀಲಿಸಿ ರೋಗದ ತೀವ್ರತೆ ನೋಡಿ ವಿನಾಯಿತಿ ನೀಡಲು ಅವಕಾಶವಿದೆ. ಈ ರೀತಿ ಸಲ್ಲಿಸದೇ ಇರುವವರಿಗೆ ವಿನಾಯಿತಿ ನೀಡಲು ಸಾಧ್ಯವಿಲ್ಲ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.