ಬೆಂಗಳೂರು :  ಪ್ರಸಕ್ತ ವರ್ಷದಲ್ಲಿ ಮುಂಗಾರು ಕೊರತೆ ಉಂಟಾಗುವ ಮುನ್ಸೂಚನೆ ಲಭ್ಯವಾಗಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಮೋಡ ಬಿತ್ತನೆಗೆ ನಿರ್ಧರಿಸಿದ್ದು, ಬರುವ ಜೂನ್‌ ತಿಂಗಳ ಅಂತ್ಯಕ್ಕೆ ಮೋಡ ಬಿತ್ತನೆ ಕಾರ್ಯ ಆರಂಭಿಸಲಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ಬರ ಪರಿಸ್ಥಿತಿ ಕುರಿತು ಕೈಗೊಂಡಿರುವ ಕ್ರಮಗಳ ಕುರಿತು ಬುಧವಾರ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಈ ಬಾರಿ ಮುಂಗಾರು ಮಳೆಯ ಕೊರತೆ ಉಂಟಾಗುವ ಸಾಧ್ಯತೆ ಇದೆ. ಹೀಗಾಗಿ ಮೋಡ ಬಿತ್ತನೆ ಮಾಡಲು ತೀರ್ಮಾನಿಸಲಾಗಿದೆ. 2019-20 ಮತ್ತು 20-21ನೇ ಸಾಲಿನ ಅವಧಿಗೆ ಟೆಂಡರ್‌ ಕರೆಯಲಾಗುವುದು. ಅಂದಾಜು 88 ಕೋಟಿ ರು. ವೆಚ್ಚದಲ್ಲಿ ಮೋಡ ಬಿತ್ತನೆ ಮಾಡಲಾಗುವುದು ಎಂದು ಹೇಳಿದರು.

ರಾಜ್ಯಾದ್ಯಂತ ಮೋಡ ಬಿತ್ತನೆ ಮಾಡಲು ನಿರ್ಧರಿಸಲಾಗಿದೆ. ಆಯಾ ಪ್ರದೇಶದಲ್ಲಿ ಮೋಡದ ಲಭ್ಯತೆ ಮತ್ತು ಮಳೆಯ ಕೊರತೆ ಈ ಎರಡು ಮಾನದಂಡವನ್ನಾಗಿಟ್ಟುಕೊಂಡು ಮೋಡ ಬಿತ್ತನೆ ಕಾರ್ಯ ನಡೆಸಲಾಗುತ್ತದೆ. ಎರಡು ಕಡೆ ಮೋಡ ಬಿತ್ತನೆ ಕೇಂದ್ರ ಆರಂಭಿಸಲಾಗುವುದು. ಹುಬ್ಬಳ್ಳಿ ಮತ್ತು ಬೆಂಗಳೂರಿನಲ್ಲಿ ಪ್ರಾರಂಭಿಸಿ ಎರಡು ವಿಮಾನದ ಮೂಲಕ ಮೋಡ ಬಿತ್ತನೆ ಮಾಡಲಾಗುವುದು ಎಂದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ತಜ್ಞರ ಸಮಿತಿಯು ಸಹ ಮೋಡ ಬಿತ್ತನೆ ಅವಶ್ಯಕತೆ ಇದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದೆ. ತಜ್ಞರ ಅಭಿಪ್ರಾಯದ ಮೇರೆಗೆ ಮೋಡ ಬಿತ್ತನೆ ಮಾಡಲು ತೀರ್ಮಾನಿಸಲಾಗಿದೆ ಎಂದರು.

ಪ್ರತಿ ವರ್ಷ ಆಗಸ್ಟ್‌ ತಿಂಗಳಲ್ಲಿ ಮೋಡ ಬಿತ್ತನೆ ಕಾರ್ಯ ನಡೆಸಲಾಗುತ್ತಿತ್ತು. ಆದರೆ, ಅಷ್ಟೊತ್ತಿಗೆ ರೈತರ ಬಿತ್ತನೆ ಕಾರ್ಯಗಳು ಮುಗಿದಿರುತ್ತವೆ. ಅವರಿಗೆ ನೀರಿನ ಅವಶ್ಯಕತೆ ಇರುವುದರಿಂದ ಜೂನ್‌ ತಿಂಗಳಲ್ಲಿ ನಡೆಸಲಾಗುವುದು. ಇದರಿಂದ ರೈತರಿಗೆ ಬೆಳೆ ಬೆಳೆಯಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.