2000ನೇ ಇಸವಿವರೆಗಿನ ಬಗರ್ ಹುಕುಂ ಸಕ್ರಮ

news | Friday, February 16th, 2018
Suvarna Web Desk
Highlights

ರಾಜ್ಯದಲ್ಲಿ 2000ನೇ ಇಸ್ವಿಯ ಜನವರಿ `ರವರೆಗೆ ಸರ್ಕಾರಿ ಜಮೀನುಗಳಲ್ಲಿ ಸಾಗುವಳಿ ಮಾಡುತ್ತಿದ್ದ ಅನಧಿಕೃತ ಸಾಗುವಳಿಯನ್ನು ಸಕ್ರಮಗೊಳಿಸಿ ಭೂ ಮಂಜೂರು ಮಾಡಲು ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಕಲಂ 94ಎ (4)ಗೆ ತಿದ್ದುಪಡಿ ತರಲು ಗುರುವಾರದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಬೆಂಗಳೂರು: ರಾಜ್ಯದಲ್ಲಿ 2000ನೇ ಇಸ್ವಿಯ ಜನವರಿ `ರವರೆಗೆ ಸರ್ಕಾರಿ ಜಮೀನುಗಳಲ್ಲಿ ಸಾಗುವಳಿ ಮಾಡುತ್ತಿದ್ದ ಅನಧಿಕೃತ ಸಾಗುವಳಿಯನ್ನು ಸಕ್ರಮಗೊಳಿಸಿ ಭೂ ಮಂಜೂರು ಮಾಡಲು ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಕಲಂ 94ಎ (4)ಗೆ ತಿದ್ದುಪಡಿ ತರಲು ಗುರುವಾರದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಈ ಹಿಂದೆ ಸರ್ಕಾರಿ ಬಗರ್‌ಹುಕುಂ ಜಮೀನನ್ನು ಸಾಗುವಳಿ ಮಾಡುತ್ತಿದ್ದ ಭೂಹೀನರಿಗೆ ಆ ಜಮೀನು ಸಕ್ರಮಗೊಳಿಸಿ ಮಂಜೂರು ಮಾಡಲಾಗಿತ್ತು. ಈ ವೇಳೆ ಸರ್ಕಾರಿ ಜಮೀನನ್ನು 14-04-1990ರವರೆಗೆ ಸಾಗುವಳಿ ಮಾಡುತ್ತಿದ್ದ ಸಾರ್ವಜನಿಕರು ಮಾತ್ರ ಅರ್ಜಿ ಸಲ್ಲಿಸಲು ಷರತ್ತು ವಿಧಿಸಲಾಗಿತ್ತು.

ಇದರಿಂದ ಸಾಕಷ್ಟು ಮಂದಿ ಅರ್ಜಿ ಸಲ್ಲಿಸಲು ಸಾಧ್ಯವಾಗಿರಲಿಲ್ಲ. ಅಂದರೆ 1990ರ ನಂತರ ಸರ್ಕಾರಿ ಜಮೀನು ಸಾಗುವಳಿ ಮಾಡುತ್ತಿದ್ದ ಅನೇಕ ಭೂರಹಿತರಿಗೆ ಭೂಮಿ ಮಂಜೂರು ಆಗುತ್ತಿಲ್ಲ. ಹೀಗಾಗಿ ಕರ್ನಾಟಕ ಭೂ ಕಂದಾಯ ಕಾಯ್ದೆಗೆ ತಿದ್ದುಪಡಿ ಮಾಡಲು ಒಪ್ಪಿಗೆ ನೀಡಲಾಗಿದೆ. ಕಂದಾಯ ಕಾಯ್ದೆ 1964ರ ಕಲಂ 94ಎ (4)ಗೆ ಹಾಗೂ ಕೃಷಿ ಭೂಮಿಯ ಭೂ ಪರಿವರ್ತನೆಗೆ ಸಂಬಂಧಿಸಿದಂತೆ 95 (2)ಗೆ ತಿದ್ದುಪಡಿ ತರಲಾಗುವುದು.

ಈ ಮೂಲಕ 14-04-1990ರಿಂದ 1-1-2000 ವರೆಗೆ ಸರ್ಕಾರಿ ಜಮೀನು ಸಾಗುವಳಿ ಮಾಡುತ್ತಿದ್ದವರು ಬಗರ್‌ಹುಕುಂ ಸಕ್ರಮಕ್ಕೆ ಅರ್ಜಿ ಸಲ್ಲಿಸಬಹುದು. ಇದರಿಂದ ಸಾವಿರಾರು ಭೂ ಹೀನರಿಗೆ ಭೂ ಮಂಜೂರಾಗುವ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿವೆ.

ಸಿರಾದಲ್ಲಿ ಬೃಹತ್ ‘ಹೆರಿಟೇಜ್ ಹಬ್’: ತುಮಕೂರು ಜಿಲ್ಲೆ ಸಿರಾ ತಾಲೂಕಿನಲ್ಲಿ ಪಿಲಿಕುಳ ನಿಸರ್ಗ ಧಾಮದ ಮಾದರಿಯಲ್ಲಿ 811.14 ಎಕರೆ ವಿಸ್ತೀರ್ಣದಲ್ಲಿ ಬೃಹತ್ ‘ಕರ್ನಾಟಕ ಹೆರಿಟೇಜ್ ಹಬ್’ ನಿರ್ಮಿಸಲು ಭೂಮಿ ಮೀಸಲಿಡುವ ಬಗ್ಗೆ ಗುರುವಾರದ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.

ಸಿರಾ ತಾಲೂಕಿನ ಗೌಡಗೆರೆ ಹೋಬಳಿಯ ಉಜ್ಜನಕುಂಟೆ ಹಾಗೂ ಮಾರನಗೆರೆ ಗ್ರಾಮಗಳಲ್ಲಿರುವ 811 ಎಕರೆ ಗೋಮಾಳ ಜಮೀನನ್ನು ಹೆರಿಟೇಜ್ ಹಬ್ ನಿರ್ಮಾಣಕ್ಕೆ ಕಾಯ್ದಿರಿಸಲಾಯಿತು. ಪ್ರವಾಸೋದ್ಯಮ ಅಭಿವೃದ್ಧಿ ಹಾಗೂ ಪಾರಂಪತಿಕ ಸ್ಥಾನಗಳ ಸಂರಕ್ಷಣೆಗಾಗಿ ಹಬ್ ನಿರ್ಮಾಣ ಮಾಡಲಾಗುತ್ತಿದೆ. ಇದರ ನಿರ್ವಹಣೆಗೆ ಜಿಲ್ಲಾಧಿಕಾರಿ ನೇತೃತ್ವದ ಸಮಿತಿ ಮಾಡಿ ಉಸ್ತುವಾರಿ ನೋಡಿಕೊಳ್ಳಲು ಕ್ರಮ ಕೈಗೊಳ್ಳಲು ಸಭೆಯಲ್ಲಿ ನಿರ್ಧರಿಸಲಾಯಿತು.

Comments 0
Add Comment

    India Today Karnataka PrePoll Part 6

    video | Friday, April 13th, 2018
    Suvarna Web Desk