Asianet Suvarna News Asianet Suvarna News

50 ಹೊಸ ತಾಲೂಕುಗಳಿಗೆ ಶೀಘ್ರವೇ ಕಚೇರಿ

ಶೀಘ್ರವೇ ರಾಜ್ಯದಲ್ಲಿ ನಿರ್ಮಾಣವಾಗುತ್ತಿರುವ ಹೊಸ 50 ತಾಲೂಕುಗಳಿಗೆ ಕಚೇರಿ ಮಂಜೂರು ಮಾಡಲಾಗುವುದು ಎಂದು ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. 

Karnataka Govt Soon Grants 50 New Taluks Offices
Author
Bengaluru, First Published Sep 20, 2018, 9:37 AM IST

ಬೆಂಗಳೂರು :  ರಾಜ್ಯದಲ್ಲಿ ಹೊಸದಾಗಿ ರಚನೆಯಾಗಿರುವ 50 ತಾಲೂಕುಗಳಿಗೆ ವಿವಿಧ ಕಚೇರಿಗಳನ್ನು ಮಂಜೂರು ಮಾಡುವ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.

ಬುಧವಾರ ಕಂದಾಯ ಇಲಾಖೆಗೆ ಸಂಬಂಧಪಟ್ಟಂತೆ ಸಚಿವ ಆರ್‌.ವಿ.ದೇಶಪಾಂಡೆ ಹಾಗೂ ಹಿರಿಯ ಅಧಿಕಾರಿಗಳ ಜೊತೆ ನಡೆಸಿದ ಸಭೆಯಲ್ಲಿ ಮಾತನಾಡಿದ ಅವರು, ಎಂ.ಬಿ. ಪ್ರಕಾಶ್‌ ವರದಿ ಪ್ರಕಾರ ಹೊಸದಾಗಿ ರಚನೆಯಾದ ತಾಲೂಕಿನಲ್ಲಿ ಕನಿಷ್ಠ 14 ಇಲಾಖೆಗಳು ಕಾರ್ಯನಿರ್ವಹಿಸಬೇಕಾಗುತ್ತದೆ. ಹೊಸ ತಾಲೂಕುಗಳಲ್ಲಿ ವಿವಿಧ ಇಲಾಖೆಗಳ ತಾಲೂಕು ಮಟ್ಟದ ಕಚೇರಿ ಸ್ಥಾಪಿಸಲು ಆರ್ಥಿಕ ಇಲಾಖೆಗೆ ಸಲ್ಲಿಸಿರುವ ಪ್ರಸ್ತಾವನೆ ಬಗ್ಗೆ ಆರ್ಥಿಕ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಹೇಳಿದರು.

ಹೊಸ ತಾಲೂಕುಗಳ ರಚನೆ ಕೋರಿ ಬಂದಿರುವ ಬೇಡಿಕೆಗಳ ಬಗ್ಗೆ ಸೂಕ್ತವಾಗಿ ಪರಿಶೀಲಿಸುವಂತೆ ಕಂದಾಯ ಸಚಿವ ದೇಶಪಾಂಡೆ ಅವರಿಗೆ ತಿಳಿಸಿದರು. ಇದೇ ಸಂದರ್ಭದಲ್ಲಿ ಹೊಸ ತಾಲೂಕುಗಳಲ್ಲಿ ಮಿನಿ ವಿಧಾನಸೌಧ ನಿರ್ಮಾಣದ ಬಗ್ಗೆ ಚರ್ಚಿಸಿದರು.

114 ಕುಟುಂಬಕ್ಕೆ ಪರಿಹಾರ:  ಪ್ರಸಕ್ತ ವರ್ಷದ ಆಗಸ್ಟ್‌ ಅಂತ್ಯಕ್ಕೆ ಆತ್ಮಹತ್ಯೆ ಮಾಡಿಕೊಂಡ 114 ರೈತರ ಕುಟುಂಬಗಳಿಗೆ ತಲಾ ಐದು ಲಕ್ಷ ರು. ಪರಿಹಾರ ನೀಡಲಾಗಿದೆ. ರಾಜ್ಯದಲ್ಲಿ 2742 ಕಂದಾಯ ಗ್ರಾಮಗಳನ್ನು ರಚಿಸಬೇಕಾಗಿದ್ದು, 1413 ಕಂದಾಯ ಗ್ರಾಮಗಳ ರಚನೆಗೆ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದೆ. 724 ಕಂದಾಯ ಗ್ರಾಮಗಳ ರಚನೆಗೆ ಅಧಿಸೂಚನೆ ಹೊರಡಿಸಲಾಗಿದೆ. ಇದಲ್ಲದೇ ಸೆ.17ರಂದು ಭೂ ಪರಿವರ್ತನೆಯನ್ನು ಆನ್‌ಲೈನ್‌ನಲ್ಲಿ ಮಾಡಿಕೊಳ್ಳುವ ಸಂಬಂಧ ಸುತ್ತೋಲೆ ಹೊರಡಿಸಲಾಗಿದೆ ಎಂದು ಕಂದಾಯ ಸಚಿವ ದೇಶಪಾಂಡೆ ತಿಳಿಸಿದರು. ಸರಳೀಕರಣ ಪ್ರಕ್ರಿಯೆಯಲ್ಲಿ ಯಾವುದೇ ಲೋಪದೋಷ ಆಗದಂತೆ ಎಚ್ಚರಿಕೆ ವಹಿಸುವಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ಸೂಚಿಸಿದರು.

ಅರ್ಜಿ ವಿಲೇವಾರಿ:  ಕರ್ನಾಟಕ ಭೂ ಕಂದಾಯ ಕಾಯ್ದೆಯ 1964ರ ಕಲಂ 94 (ಸಿ) ಅಡಿಯಲ್ಲಿ 26,922 ಅರ್ಜಿಗಳನ್ನು ಹಾಗೂ 94(ಸಿಸಿ) ಅಡಿಯಲ್ಲಿ 13971 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಸಾಮಾಜಿಕ ಮತ್ತು ಭದ್ರತೆ ಪಿಂಚಣಿ ವಿತರಣೆಯಲ್ಲಿ ವಿಳಂಬವಾಗುತ್ತಿರುವ ಬಗ್ಗೆ ಅಂಚೆ ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸಿ ಸಮಸ್ಯೆ ಬಗೆಹರಿಸಿರುವುದಾಗಿ ಅಧಿಕಾರಿಗಳು ಮುಖ್ಯಮಂತ್ರಿಗಳ ಗಮನಕ್ಕೆ ತಂದರು.

ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ವಿವಿಧ ಐದು ಸೇವೆಗಳನ್ನು ಆನ್‌ಲೈನ್‌ನಲ್ಲಿ ಒದಗಿಸಲು ಸಿದ್ಧತೆ ನಡೆದಿದ್ದು, ಈ ಬಗ್ಗೆ ಕಾನೂನು ಸಲಹೆ ಪಡೆಯಲು ತೀರ್ಮಾನಿಸಲಾಯಿತು.

ಸಭೆಯಲ್ಲಿ ಮುಖ್ಯಮಂತ್ರಿಗಳ ಅಪರ ಮುಖ್ಯಕಾರ್ಯದರ್ಶಿ ಡಾ.ಇ.ವಿ.ರಮಣ ರೆಡ್ಡಿ, ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜಕುಮಾರ್‌ ಖತ್ರಿ, ಗಂಗಾರಾಮ ಬಡೇರಿಯಾ, ಭೂ ಮಾಪನ ಇಲಾಖೆಯ ಆಯುಕ್ತ ಮನೀಶ್‌ ಮೌದ್ಗಿಲ್‌, ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಮಹಾಪರಿವೀಕ್ಷಕ ಡಾ.ಕೆ.ವಿ.ತ್ರಿಲೋಕಚಂದ್ರ ಮತ್ತಿತರರು ಉಪಸ್ಥಿತರಿದ್ದರು.

Follow Us:
Download App:
  • android
  • ios