ಮಂಡ್ಯ  :  ಕೃಷ್ಣರಾಜಸಾಗರ ಜಲಾಶಯದಲ್ಲಿ ಡಿಸ್ನಿಲ್ಯಾಂಡ್‌ ಮಾದರಿ ಅಭಿವೃದ್ಧಿಗೆ ಭಿನ್ನಾಭಿಪ್ರಾಯಗಳು ವ್ಯಕ್ತವಾಗಿರುವ ಬೆನ್ನಿಗೇ ಈ ಯೋಜನೆಯಿಂದ ಹಿಂದಕ್ಕೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿರುವ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಇದೀಗ ಕಬಿನಿ, ಹಾರಂಗಿ, ಹೇಮಾವತಿ ಜಲಾಶಯಗಳಲ್ಲೂ ಈ ಮಾದರಿ ಅಭಿವೃದ್ದಿಗೆ ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.

ವಿ.ಸಿ.ಫಾರ್ಮ್ ಲ್ಲಿ ಶುಕ್ರವಾರ ಕನ್ನಡಪ್ರಭದೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿ, ಯಾರು ಎಷ್ಟೆವಿರೋಧ ಮಾಡಿದರೂ ಕೃಷ್ಣರಾಜಸಾಗರ ಜಲಾಶಯದಲ್ಲಿ ಡಿಸ್ನಿಲ್ಯಾಂಡ್‌ ಮಾದರಿ ಅಭಿವೃದ್ದಿ ಯೋಜನೆಯಿಂದ ಹಿಂದೆ ಸರಿಯುವುದಿಲ್ಲ. ಕಾವೇರಿ ಪ್ರತಿಮೆ ನಿರ್ಮಾಣಕ್ಕೂ ಹಿಂದೇಟು ಹಾಕುವುದಿಲ್ಲ. ಈ ಯೋಜನೆಯಲ್ಲಿ ರಾಜಿ ಮಾಡಿಕೊಳ್ಳುವ ಪ್ರಶ್ನೆ ಇಲ್ಲ ಎಂದರು. ಇದೇವೇಳೇ ಮೊದಲ ಹಂತದಲ್ಲಿ ಕೆಆರ್‌ಎಸ್‌ ಎರಡನೇ ಹಂತದಲ್ಲಿ ಕಬಿನಿ, ಹಾರಂಗಿ ಹಾಗೂ ಹೇಮಾವತಿ ಜಲಾಶಯಗಳಲ್ಲಿ ಡಿಸ್ನಿಲ್ಯಾಂಡ್‌ ಮಾದರಿ ಅಭಿವೃದ್ಧಿ ಮಾಡಲಾಗುವುದು ಎಂದರು.

ಪ್ರತಿ ಡ್ಯಾಂನಲ್ಲೂ ಪ್ರವಾಸೋದ್ಯಮ ವಿಕಾಸ: ಪ್ರತಿ ಜಲಾಶಯಗಳ ಸುತ್ತಮುತ್ತಲಿನ ಪ್ರದೇಶವನ್ನು ಪ್ರವಾಸೋದ್ಯಮಕ್ಕೆ ಬಳಕೆ ಮಾಡಿಕೊಂಡು ಉದ್ಯೋಗ ಸೃಷ್ಟಿಮಾಡುವುದರ ಜೊತೆಗೆ ಆ ಪ್ರದೇಶಗಳನ್ನು ಅಭಿವೃದ್ಧಿ ಪಡಿಸುವುದು ನಮ್ಮ ಗುರಿಯಾಗಿದೆ. ಈ ಯೋಜನೆಗಳ ರೂಪುರೇಷಗಳ ಬಗ್ಗೆ ಉನ್ನತ ಮಟ್ಟದಲ್ಲಿ ಚರ್ಚೆ ಮಾಡಿದ್ದೇವೆ. ಡಿಸ್ನಿಲ್ಯಾಂಡ್‌ ಮಾದರಿ ನಿರ್ಮಾಣಕ್ಕೆ 1060 ಕೋಟಿ ರು. ವ್ಯಯಿಸಲಾಗುತ್ತಿದೆ. ಯೋಜನೆ ಬಗ್ಗೆ ಪರಿಶೀಲನೆಗಾಗಿ ವಿಶ್ವ ಮಟ್ಟದ ತಾಂತ್ರಿಕ ತಜ್ಞರನ್ನು ಕೆಆರ್‌ಎಸ್‌ಗೆ ಕರೆಸಲಾಗುತ್ತಿದೆ. ಮೊದಲ ಹಂತದ ಕಾಮಗಾರಿ 2020ಕ್ಕೆ ಹಾಗೂ ಎರಡನೇ ಹಂತದ ಕಾಮಗಾರಿ 2022ಕ್ಕೆ ಪೂರ್ಣಗೊಳಿಸುವ ಸಂಕಲ್ಪ ಮಾಡಿದ್ದೇನೆ ಎಂದು ತಿಳಿಸಿದರು.

ಖಾಸಗಿ ಮತ್ತು ಸಾರ್ವಜನಿಕ ಸಹಭಾಗಿತ್ವಕ್ಕೆ ಯೋಜನೆ ಅನುಷ್ಠಾನಗೊಳ್ಳಲಿದೆ. 25 ವರ್ಷಗಳ ಕಾಲ ಖಾಸಗಿಯವರು ಡಿಸ್ನಿಲ್ಯಾಂಡ್‌ ಮಾದರಿಯನ್ನು ನಿರ್ವಹಿಸಿ ನಂತರ ಸರ್ಕಾರಕ್ಕೆ ಬಿಟ್ಟುಕೊಡಲಿದ್ದಾರೆ. ಈ ಯೋಜನೆಯಿಂದ ಕನಿಷ್ಠ 50 ಸಾವಿರ ಜನರಿಗೆ ಉದ್ಯೋಗ ಸೃಷ್ಠಿಸುವ ಗುರಿ ಹೊಂದಲಾಗಿದೆ. ಅಲ್ಲದೇ 2 ಲಕ್ಷ ಕುಟುಂಬಗಳು ಸಣ್ಣ ಪುಟ್ಟವ್ಯಾಪಾರ, ವ್ಯವಹಾರ ಮಾಡಿಕೊಂಡು ನೆಮ್ಮದಿಯಾಗಿ ಬದುಕು ಸಾಗಿಸಲಿವೆ ಎಂದರು.

ಚರ್ಚೆಗೆ ಬರಲಿ: ಕೆಆರ್‌ಎಸ್‌ ಜಲಾಶಯಕ್ಕೆ ಡಿಸ್ನಿಲ್ಯಾಂಡ್‌ ಮಾದರಿ ಯೋಜನೆಯಿಂದ ಯಾವುದೇ ಧಕ್ಕೆ ಬಾರದಂತೆ ನೋಡಿಕೊಳ್ಳುವ ಜವಾಬ್ದಾರಿ ನಮಗೂ ಇದೆ. ವಿರೋಧಿಗಳು ಅಪಪ್ರಚಾರ ಮಾಡುವಂತೆ ನಾವೇನು ಕೃಷ್ಣರಾಜಸಾಗರವನ್ನು ಧ್ವಂಸ ಮಾಡಲು ಹೊರಟಿದ್ದೇವೆಯೇ ಎಂದು ಖಾರವಾಗಿ ಪ್ರಶ್ನಿಸಿದರು. ಯೋಜನೆಯಿಂದ ಕೃಷ್ಣರಾಜಸಾಗರ ಜಲಾಶಯಕ್ಕೆ ಧಕ್ಕೆಯಾಗುತ್ತದೆ ಎಂದು ಹೇಳುವ ಎಲ್ಲಾ ವಿರೋಧಿಗಳು ನನ್ನೊಂದಿಗೆ ಚರ್ಚೆಗೆ ಬರಲಿ. ಯಾರು ವಿರೋಧ ಮಾಡ್ತಾರೋ ಅವರ ಸಮ್ಮುಖದಲ್ಲೇ ಚರ್ಚೆ ನಡೆಸ್ತೇನೆ. ನಾನು ಸಮಗ್ರ ವಿವರವನ್ನು ತಾಂತ್ರಿಕವಾಗಿ, ಅಭಿವೃದ್ದಿಗೆ ಪೂರಕವಾಗಿ ದಾಖಲೆ ಸಮೇತ ವಿವರಿಸುತ್ತೇನೆ. ಅದನ್ನು ಬಿಟ್ಟು ಅಪಪ್ರಚಾರ ಮಾಡಿ ಅಭಿವೃದ್ದಿಗೆ ಕಲ್ಲು ಹಾಕುವ ಪ್ರಯತ್ನ ಮಾಡಿದರೆ ಜಿಲ್ಲೆಯ ಜನರೆ ಉತ್ತರ ನೀಡುತ್ತಾರೆ ಎಂದು ಹೇಳಿದರು.