ಇನ್ನು 15 ದಿನದಲ್ಲಿ ಉರುಳಲಿದೆ ಸರ್ಕಾರ? : ಹೊಸ ಬಾಂಬ್

First Published 1, Aug 2018, 8:01 AM IST
Karnataka Govt Only Have 15 Days Timing Says BS Yeddyurappa
Highlights

ಕರ್ನಾಟಕ ಸರ್ಕಾರಕ್ಕೆ ಕೇವಲ15 ದಿನಗಳ ಸಮಯಾವಕಾಶವಿದ್ದು, ಸರ್ಕಾರಕ್ಕೆ ಹೆಚ್ಚು ದಿನಗಳ ಕಾಲ ಭವಿಷ್ಯವು ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ. 

ಬೆಂಗಳೂರು :  ಈ ಸರ್ಕಾರ ಏನಾಗುತ್ತದೆ ಎಂಬುದನ್ನು ಇನ್ನು 15 ದಿನಗಳ ಕಾಲ ಕಾದು ನೋಡಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ  ಬಿ.ಎಸ್.ಯಡಿಯೂರಪ್ಪ ಹೇಳುವ ಮೂಲಕ ಕುತೂಹಲ ಮೂಡಿಸಿದ್ದಾರೆ.

ಮಂಗಳವಾರ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಹೋರಾಟದ ಬಿಸಿಗೆ ಹೈರಾಣಾಗಿರುವ ಎಚ್ .ಡಿ.ಕುಮಾರಸ್ವಾಮಿ ನೇತೃತ್ವದ ಸರ್ಕಾರದ ಆಯುಷ್ಯ ಹೆಚ್ಚು ದಿನ ಇಲ್ಲ ಎಂದು ಭವಿಷ್ಯ ನುಡಿದರು.

ಮುಖ್ಯಮಂತ್ರಿ ಕುಮಾರಸ್ವಾಮಿ ಅವರು  ರಾಜ್ಯದ ಜನತೆ ಹಾಗೂ ಶಾಸಕರಷ್ಟೇ ಅಲ್ಲ ಸಮ್ಮಿಶ್ರ ಸರ್ಕಾರದ ಪಾಲುದಾರರಾಗಿರುವ ಕಾಂಗ್ರೆಸ್‌ನರೂ ಅವರ ಬಗ್ಗೆ ವಿಶ್ವಾಸ ಕಳೆದುಕೊಂಡಿದ್ದಾರೆ ಎಂದೂ ಯಡಿಯೂರಪ್ಪ ಹೇಳಿದರು.

ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಜೆಡಿಎಸ್-ಕಾಂಗ್ರೆಸ್ ತಿಕ್ಕಾಟದಿಂದಾಗಿಯೇ ಕುಸಿದು ಬೀಳಲಿದೆ. ಈ ಸರ್ಕಾರದ ಆಯುಷ್ಯ ಹೆಚ್ಚಿಲ್ಲ ಎಂದು ಬಿಜೆಪಿ ಮುಖಂಡರು ಆಗಾಗ್ಗೆ ಹೇಳಿಕೆ ನೀಡುತ್ತಲೇ ಇದ್ದಾರೆ. ಆದರೆ, ಮತ್ತೊಮ್ಮೆ ಮುಖ್ಯಮಂತ್ರಿ ಹುದ್ದೆಗೇರಲು ಪ್ರಯತ್ನ ನಡೆಸುತ್ತಿರುವ ಯಡಿಯೂರಪ್ಪ ಅವರೇ ಈಗ ‘15  ದಿನ ಕಾದು ನೋಡಿ’ ಎಂದಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಆಷಾಢ ಮಾಸ ಮುಗಿಯುತ್ತಿದ್ದಂತೆಯೇ ಸಚಿವ ಸಂಪುಟ ವಿಸ್ತರಣೆ ಮತ್ತು ನಿಗಮ ಮಂಡಳಿಗಳ ಅಧ್ಯಕ್ಷರ ನೇಮಕ ಪ್ರಕ್ರಿಯೆ ಕೈಗೆತ್ತಿಕೊಳ್ಳುವ ದೊಡ್ಡ ಜವಾಬ್ದಾರಿ ಸಮ್ಮಿಶ್ರ  ಸರ್ಕಾರದ ಮೇಲಿದೆ. ಈ ಬಗ್ಗೆ ಸಾಕಷ್ಟು ಒತ್ತಡ, ಲಾಬಿ ನಡೆಯುತ್ತಿದೆ. ಆಕಾಂಕ್ಷಿಗಳ ಸಂಖ್ಯೆ ಹತ್ತಾರು. ಇರುವ ಸ್ಥಾನಗಳು ಕಡಿಮೆ. ಸಚಿವ ಸ್ಥಾನದ ಒತ್ತಡ ಹೆಚ್ಚಾಗಿರುವುದು ಸರ್ಕಾರದ ಪಾಲುದಾರ ಪಕ್ಷವಾಗಿರುವ ಕಾಂಗ್ರೆಸ್‌ನಲ್ಲಿ. 

ಹೀಗಾಗಿ ಯಾರನ್ನು ಸಮಾಧಾನಪಡಿಸಬೇಕು ಎಂಬ ಗೊಂದಲದಲ್ಲೇ ಕಾಲ ಕಳೆಯುತ್ತಿರುವ ನಾಯಕರು ಲೆಕ್ಕಾಚಾರ ಹಾಕುತ್ತಲೇ ಇದ್ದಾರೆ. ಕಾಂಗ್ರೆಸ್ಸಿನಲ್ಲಾಗುವ ಬೆಳವಣಿಗೆಗಳು ಸಹಜವಾಗಿಯೇ ಮಿತ್ರ ಪಕ್ಷವಾದ ಜೆಡಿಎಸ್ ಮೇಲೂ ಬೀಳಲಿದೆ. ಈ ಸಚಿವ ಸಂಪುಟ ವಿಸ್ತರಣೆ ಮತ್ತು ನಿಗಮ ಮಂಡಳಿಗಳ ನೇಮಕ ಪ್ರಕ್ರಿಯೆ ಸುಗಮವಾಗಿ ನಡೆಯದಿದ್ದಲ್ಲಿ ಅಥವಾ ವಿಳಂಬವಾದಲ್ಲಿ ಅಸಮಾಧಾನ ಸ್ಫೋಟಗೊಳ್ಳುವ ಸಾಧ್ಯತೆ ಹೆಚ್ಚಿದೆ. ಹಾಗಾದಲ್ಲಿ ಅದರ ರಾಜಕೀಯ ಲಾಭ ಪಡೆದುಕೊಳ್ಳಲು ಪ್ರತಿಪಕ್ಷ ಬಿಜೆಪಿ ಮುಂದಾಗುವುದು ನಿಶ್ಚಿತ.

ಬಿಜೆಪಿಯ ಉನ್ನತ ಮೂಲಗಳ ಪ್ರಕಾರ, ಕಾಂಗ್ರೆಸ್ಸಿನ ಹಲವು ಶಾಸಕರು ಸಂಪರ್ಕದಲ್ಲಿದ್ದಾರೆ. ಆದರೆ, ಅವರೆಲ್ಲರೂ ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದಾರೆ. ಒಂದು ವೇಳೆ ತಮ್ಮ ನಿರೀಕ್ಷೆಯಂತೆ ಸ್ಥಾನ ಸಿಗದಿದ್ದರೆ ಮುಂದಿನ ರಾಜಕೀಯ ತೀರ್ಮಾನ ಕೈಗೊಳ್ಳುವ ಭರವಸೆಯನ್ನೂ ನೀಡಿದ್ದಾರೆ. ಹಾಗಾದಲ್ಲಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸರ್ಕಾರ ಸಂಕಷ್ಟಕ್ಕೆ ಸಿಲುಕಬಹುದು ಎನ್ನಲಾಗಿದೆ.

loader