ಬೆಂಗಳೂರು[ಜು.1]  : ಬಿಜೆಪಿ ಮುಖಂಡರು ಯಾರನ್ನು ಸಂಪರ್ಕಿಸಿದ್ದಾರೆ. ಏನೇನು ಮಾಡುತ್ತಿದ್ದಾರೆ ಎನ್ನುವುದೆಲ್ಲವೂ ಸಂಪೂರ್ಣವಾಗಿ ನನಗೆ ಗೊತ್ತಿದೆ ಎಂದು ಜಲಸಂಪನ್ಮೂಲ  ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. 

ಬಿಜೆಪಿಯವರು  ಶಾಸಕರ ಜೊತೆಗೆ ಮಾತನಾಡಿರುವುದನ್ನು ನಾನು ಬಹಿರಂಗವಾಗಿ ಹೇಳುವುದಿಲ್ಲ ಎಂದು ಆನಂದ್ ಸಿಂಗ್ ರಾಜೀನಾಮೆ ಬೆನ್ನಲ್ಲೇ ಶಿವಕುಮಾರ್ ಬಿಜೆಪಿಗರ ವಿರುದ್ಧ ವಾಕ್ ಪ್ರಹಾರ ನಡೆಸಿದ್ದಾರೆ. 

ಯಾವ ಶಾಸಕರಿಗೆ ಏನು ನೋವು ಇರುತ್ತದೆಯೋ ಯಾರಿಗೆ ಗೊತ್ತು. ನನಗೆ ನಿನ್ನೆ ಹೊಟ್ಟೆ ನೋವಿತ್ತು.  ವೈದ್ಯರ ಬಳಿ ತೆರಳಿ ಸರಿಮಾಡಿಕೊಂಡೆ. ಅದೇ ರೀತಿ ಕೆಲ ಶಾಸಕರಿಗೆ ಹೊಟ್ಟೆ ನೋವಿರುತ್ತೆ ಅದಕ್ಕೆ ಚಿಕಿತ್ಸೆ ಕೊಟ್ಟು ಸರಿ ಮಾಡಬೇಕಿದೆ. ಆದ್ರೆ ಎಲ್ಲಾ ಸಮಯದಲ್ಲೂ ಚಿಕಿತ್ಸೆ ಫಲಿಸದೇ ಇರಬಹುದು ಎಂದರು. 

ಸದ್ಯ ರಾಜ್ಯದಲ್ಲಿ ಯಾವ ಶಾಸಕರಿಗೂ ಈಗ ಚುನಾವಣೆ  ನಡೆಯುವುದು ಬೇಕಿಲ್ಲ. ಯಾರೂ ರಾಜೀನಾಮೆ ನೀಡಿದರೂ ಸರ್ಕಾರಕ್ಕೆ ಏನೂ ಆಗಲ್ಲ.  ನಾನೇ ರಾಜೀನಾಮೆ ಕೊಟ್ಟರೂ ಮೈತ್ರಿ ಸರ್ಕಾರಕ್ಕೆ ತೊಂದರೆ ಇಲ್ಲ ಎಂದು ಶಿವಕುಮಾರ್ ಹೇಳಿದರು. 

ಇನ್ನು ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನ ತೊರೆದ ಎಚ್. ವಿಶ್ವನಾಥ್ ಅವರು ಬಿಜೆಪಿ ಸೇರಲಿದ್ದಾರೆ ಎನ್ನುವ ವದಂತಿ ಬಗ್ಗೆಯೂ ಪ್ರತಿಕ್ರಿಯಿಸಿದ್ದು,  ಅವರು ಹಿರಿಯ ರಾಜಕಾರಣಿ,  ಬಿಜೆಪಿ ಯತ್ನ ಮಾಡಲಾರರು.  ಅವರು ಮಕ್ಕಳಾಟದ ರಾಜಕಾರಣಿ ಅಲ್ಲ ಎಂದು ಶಿವಕುಮಾರ್ ಹೇಳಿದರು.