ಬೆಂಗಳೂರು[ಜು.17]: ಆ್ಯಂಟಿ ರೇಬಿಸ್‌ ಲಸಿಕೆ (ಎಆರ್‌ವಿ) ಖರೀದಿ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಸ್ಥಳೀಯವಾಗಿ ಲಸಿಕೆ ಖರೀದಿಸಿ ರೋಗಿಗಳಿಗೆ ಚಿಕಿತ್ಸೆ ನೀಡುವಂತೆ ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿರ್ದೇಶನ ನೀಡಿದೆ.

ಔಷಧಿ ಖರೀದಿಗಾಗಿ ಸರ್ಕಾರ ಅನುಮೋದನೆ ನೀಡಿದೆ. ಈ ಸಂಬಂಧ ಈಗಾಗಲೇ ಎರಡು ಬಾರಿ ಟೆಂಡರ್‌ ಕರೆಯಲಾಗಿದ್ದು, ಯಾವೊಬ್ಬ ಗುತ್ತಿಗೆದಾರರು ಭಾಗವಹಿಸದಿರುವುದರಿಂದ ಲಸಿಕೆ ಕೊರತೆ ಎದುರಾಗಿದೆ. ಕೇರಳ ಸರ್ಕಾರದಿಂದ 10 ಸಾವಿರ ವಾಯಿಲ್ಸ್‌ಗಳನ್ನು ಪಡೆದು ಜಿಲ್ಲೆಗಳಿಗೆ ವಿತರಿಸಲಾಗಿದೆ. ತಮಿಳುನಾಡು ಸರ್ಕಾರದಿಂದ ಎಆರ್‌ವಿ ಔಷಧಿ ಪಡೆಯಲು ಪ್ರಯತ್ನ ನಡೆಸುತ್ತಿದ್ದೇವೆ, ಅಲ್ಲದೆ, ಮರು ಟೆಂಡರ್‌ ಕರೆಯುವ ಪ್ರಯತ್ನ ಮಾಡುತ್ತಿದ್ದು, ಪ್ರಕ್ರಿಯೆ ಪೂರ್ಣಗೊಳ್ಳಲು ಕನಿಷ್ಠ ಮೂರರಿಂದ ನಾಲ್ಕು ತಿಂಗಳುಗಳಾಗಲಿವೆ. ಹೀಗಾಗಿ, ಸ್ಥಳೀಯವಾಗಿ ಲಸಿಕೆ ಖರೀದಿಸಿ ಚಿಕಿತ್ಸೆ ನೀಡುವಂತೆ ಇಲಾಖೆ ಆಯುಕ್ತರು ಸೂಚನೆ ನೀಡಿದ್ದಾರೆ.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು, ಜಿಲ್ಲಾ ಶಸ್ತ್ರಚಿಕಿತ್ಸಕರು, ತಾಲೂಕು ವೈದ್ಯಾಧಿಕಾರಿಗಳು, ವೈದ್ಯಾಧಿಕಾರಿಗಳು, ಸರ್ಕಾರಿ ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ತಮ್ಮ ಹಂತದಲ್ಲಿ ಲಭ್ಯವಿರುವ ಅನುದಾನದಲ್ಲಿ ಔಷಧ ಖರೀದಿಸುವಂತೆ ತಿಳಿಸಿದ್ದಾರೆ.

ಔಷಧ ಕೊರತೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಯಾವುದೇ ಲೋಪವಾಗದಂತೆ ಕ್ರಮ ಕೈಗೊಳ್ಳಬೇಕು. ತಪ್ಪಿದಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಜಿಲ್ಲಾವಾರು ಲಭ್ಯವಿರುವ ಲಸಿಕೆ ವಿವರ:

ಕಲಬುರಗಿ- 7,339, ಹಾಸನ - 5,089, ಬೆಂಗಳೂರು ನಗರ- 4,959, ದಕ್ಷಿಣ ಕನ್ನಡ- 4,322, ರಾಮನಗರ- 3,370, ಗದಗ- 3,046, ಉತ್ತರ ಕನ್ನಡ- 2,552, ಶಿವಮೊಗ್ಗ- 2,480, ಮೈಸೂರು- 2,429, ಮಂಡ್ಯ- 2,129, ಉಡುಪಿ- 1,879, ತುಮಕೂರು- 1,790, ಬಳ್ಳಾರಿ- 1,786, ಯಾದಗಿರಿ- 1,656, ದಾವಣಗೆರೆ- 1,647, ಕೊಡಗು- 1,457, ಚಿತ್ರದುರ್ಗ- 1,383, ಚಿಕ್ಕಮಗಳೂರು- 1,328, ಬಾಗಲಕೋಟೆ- 1,316, ಬೆಳಗಾವಿ- 1,251, ವಿಜಯಪುರ- 1,080, ರಾಯಚೂರು- 882, ಚಾಮರಾಜನಗರ- 806, ಹಾವೇರಿ- 721, ಕೋಲಾರ- 690, ಧಾರವಾಡ- 687, ಬೆಂ. ಗ್ರಾಮಾಂತರ- 596, ಬೀದರ್‌- 507, ಚಿಕ್ಕಬಳ್ಳಾಪುರ- 468, ಕೊಪ್ಪಳ- 422 ಸೇರಿ ಒಟ್ಟಾರೆ ರಾಜ್ಯಾದ್ಯಂತ 60,067 ಜನರಿಗೆ ನೀಡುವಷ್ಟುಲಸಿಕೆಗಳು ಲಭ್ಯವಿವೆ ಎಂದು ತಿಳಿಸಿದ್ದಾರೆ.