ಬಿಜೆಪಿಗೆ ಸಣ್ಣಪುಟ್ಟ ರಾಜಕೀಯ ಒತ್ತಾಸೆಗಳಿಗಿಂತ ರಾಷ್ಟ್ರೀಯತೆಯ ಭಾವನೆಗಳು ಮುಖ್ಯ ಎಂದು ಕೇಂದ್ರ ಸಚಿವ ಬಂಡಾರು ದತ್ತಾತ್ರೇಯ ಸ್ಪಷ್ಟಪಡಿಸಿದ್ದಾರೆ. ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ಪ್ರತ್ಯೇಕ ಧ್ವಜ ಸ್ಥಾಪನೆಯ ನಿಲುವನ್ನು ಅಂಗೀಕರಿಸುತ್ತದಾ ಎಂಬುದನ್ನು ಸಾರ್ವಜನಿಕವಾಗಿ ತಿಳಿಸಲಿ ಎಂದು ಕೇಂದ್ರ ಸಚಿವರು ಕೇಳಿದ್ದಾರೆ.
ಬೆಂಗಳೂರು(ಜುಲೈ 18): ಕರ್ನಾಟಕ ರಾಜ್ಯಕ್ಕೆ ಪ್ರತ್ಯೇಕ ಧ್ವಜ ಸ್ಥಾಪನೆಗೆ ಸರಕಾರ ಒಂದಡಿ ಮುಂದಿರಿಸಿ ಇಡೀ ದೇಶಕ್ಕೆ ಸಂಚಲನ ಮೂಡಿಸಿದೆ. ನಾಡಧ್ವಜ ರಚನೆ ಪ್ರಕ್ರಿಯೆಯ ಕಾನೂನಾತ್ಮಕ ಅಂಶಗಳನ್ನು ಅವಲೋಕಿಸಲು ರಾಜ್ಯ ಸರಕಾರವು 9 ಮಂದಿಯ ಸಮಿತಿಯನ್ನು ರಚಿಸಿದೆ. ಜಮ್ಮು-ಕಾಶ್ಮೀರ ಬಿಟ್ಟರೆ ದೇಶದ ಬೇರಾವ ರಾಜ್ಯವೂ ಪ್ರತ್ಯೇಕ ರಾಜ್ಯ ಧ್ವಜ ಹೊಂದಿಲ್ಲ. ಹೀಗಾಗಿ, ಸಿದ್ದರಾಮಯ್ಯನವರ ನಿರ್ಧಾರವು ರಾಷ್ಟ್ರವ್ಯಾಪಿ ಸುದ್ದಿಯಾಗಿದೆ. ಭಾರತೀಯ ಜನತಾ ಪಕ್ಷದ ಮುಖಂಡರು ಸಿದ್ದರಾಮಯ್ಯ ಸರಕಾರದ ನಿಲುವನ್ನು ಖಂಡಿಸಿದ್ದು, ದೇಶದ್ರೋಹದ ಕ್ರಮ ಎಂದು ಬಣ್ಣಿಸಿದ್ದಾರೆ.
ಆದರೆ, ತಾವಿನ್ನೂ ಕಾನೂನು ಅಂಶಗಳನ್ನು ಅವಲೋಕಿಸುತ್ತಿದ್ದೇವೆಯೇ ಹೊರತು ಅಂತಿಮ ನಿರ್ಧಾರ ಕೈಗೊಂಡಿಲ್ಲ. ಈಗಲೇ ತಮ್ಮನ್ನು ದೇಶದ್ರೋಹ ಎಂದು ಬಣ್ಣಿಸುವುದು ಉಚಿತವಲ್ಲ ಎಂದು ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ. ಅಲ್ಲದೇ, ಏಪ್ರಿಲ್'ನಲ್ಲಿ ಚುನಾವಣೆ ಬರಲಿದ್ದು, ವಿರೋಧ ಪಕ್ಷಗಳು ತಮಗೆ ಧ್ವಜ ಬೇಡ ಎಂದು ಸಾರ್ವಜನಿಕವಾಗಿ ಹೇಳಿಕೆ ಕೊಡಲಿ ಎಂದೂ ಬಿಜೆಪಿ ನಾಯಕರಿಗೆ ಸಿಎಂ ಸವಾಲೆಸೆದಿದ್ದಾರೆ.
ಇದೇ ವೇಳೆ, ಬಿಜೆಪಿಗೆ ಸಣ್ಣಪುಟ್ಟ ರಾಜಕೀಯ ಒತ್ತಾಸೆಗಳಿಗಿಂತ ರಾಷ್ಟ್ರೀಯತೆಯ ಭಾವನೆಗಳು ಮುಖ್ಯ ಎಂದು ಕೇಂದ್ರ ಸಚಿವ ಬಂಡಾರು ದತ್ತಾತ್ರೇಯ ಸ್ಪಷ್ಟಪಡಿಸಿದ್ದಾರೆ. ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ಪ್ರತ್ಯೇಕ ಧ್ವಜ ಸ್ಥಾಪನೆಯ ನಿಲುವನ್ನು ಅಂಗೀಕರಿಸುತ್ತದಾ ಎಂಬುದನ್ನು ಸಾರ್ವಜನಿಕವಾಗಿ ತಿಳಿಸಲಿ ಎಂದು ಕೇಂದ್ರ ಸಚಿವರು ಕೇಳಿದ್ದಾರೆ.
ಇನ್ನು, ಮಾಜಿ ಸಚಿವೆ ಶೋಭಾ ಕರಂದ್ಲಾಜೆ ಅವರು ಸಿದ್ದರಾಮಯ್ಯ ಸರಕಾರದ ಕ್ರಮವನ್ನು ದೇಶವಿರೋಧಿ ಎಂದು ಬಣ್ಣಿಸಿದ್ದಾರೆ. "ಒಂದು ರಾಷ್ಟ್ರ ಒಂದು ಧ್ವಜ ಸಿದ್ಧಾಂತಕ್ಕೆ ಬಿಜೆಪಿ ಸದಾ ಬದ್ಧ. ಪ್ರತ್ಯೇಕ ಧ್ವಜ ಕೇಳುವುದು ಶುದ್ಧ ತಪ್ಪು. ಕಾಶ್ಮೀರಕ್ಕೂ ಬೇರೆ ಧ್ವಜ ಇಟ್ಟಿರುವುದನ್ನು ನಾವು ವಿರೋಧಿಸುತ್ತೇವೆ. ಸಿದ್ದರಾಮಯ್ಯನವರು ರಾಷ್ಟ್ರವಿರೋಧಿ ಕಾರ್ಯ ಮಾಡುತ್ತಿದ್ದಾರೆ," ಎಂದು ಶೋಭಾ ಕರಂದ್ಲಾಜೆ ಅಭಿಪ್ರಾಯಪಟ್ಟಿದ್ದಾರೆ.
ಕಾಂಗ್ರೆಸ್'ನ ಹಲವು ಮುಖಂಡರು ರಾಜ್ಯ ಸರಕಾರದ ಕ್ರಮದಲ್ಲಿ ಯಾವ ತಪ್ಪೂ ಇಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ರಾಷ್ಟ್ರಧ್ವಜಕ್ಕೆ ಅತ್ಯುಚ್ಚ ಸ್ಥಾನ ಇರುವವರೆಗೂ ರಾಜ್ಯಗಳು ತಮ್ಮದೇ ಧ್ವಜ ಹೊಂದಿರಲು ಯಾವುದೇ ಅಭ್ಯಂತರವಿರಬಾರದು. ಇದಕ್ಕೆ ಸಂವಿಧಾನದಲ್ಲಿ ಎಲ್ಲೂ ವಿರೋಧವಿಲ್ಲ ಎಂದು ಮಾಜಿ ಕೇಂದ್ರ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ಶಶಿ ತರೂರ್ ಹೇಳಿದ್ದಾರೆ.
ಮಾಹಿತಿ ಕೃಪೆ: ನ್ಯೂಸ್18
