ಬೆಂಗಳೂರು [ಜು.25] :  ರಾಜ್ಯ ಸರ್ಕಾರ ವಿವಿಧ ಇಲಾಖೆಗಳಿಗೆ ನಿಗದಿಪಡಿಸಿದ ಮೊತ್ತ, ಖರ್ಚು-ವೆಚ್ಚ ಹಾಗೂ ನೌಕರರಿಗೆ ಸಂಬಳ ನೀಡಲು ಒಪ್ಪಿಗೆ ನೀಡುವ ಧನವಿನಿಯೋಗ ವಿಧೇಯಕಕ್ಕೆ ಜುಲೈ 31ರೊಳಗೆ ವಿಧಾನಮಂಡಲದ ಉಭಯ ಸದನಗಳು ಒಪ್ಪಿಗೆ ನೀಡದಿದ್ದರೆ ಆಗಸ್ಟ್‌ ತಿಂಗಳಲ್ಲಿ ಸರ್ಕಾರದ ಯಾವುದೇ ಹಣಕಾಸಿನ ಚಟುವಟಿಕೆಗಳು ನಡೆಯದಂತಹ ಸ್ಥಿತಿ ನಿರ್ಮಾಣವಾಗುವ ಆತಂಕ ಎದುರಾಗಿದೆ.

ಧನವಿನಿಯೋಗ ವಿಧೇಯಕಕ್ಕೆ ಒಪ್ಪಿಗೆ ಪಡೆಯುವ ಪ್ರಮುಖ ಉದ್ದೇಶದಿಂದಲೇ ಕರೆಯಲಾಗಿದ್ದ ಅಧಿವೇಶನದಲ್ಲಿ ಮೈತ್ರಿ ಸರ್ಕಾರ ಬಹುಮತ ಕಳೆದುಕೊಂಡ ಹಿನ್ನೆಲೆಯಲ್ಲಿ ವಿಧೇಯಕ ಅಂಗೀಕಾರ ಬಾಕಿ ಉಳಿದಿದೆ. ರಾಜ್ಯದಲ್ಲಿ ಮೊದಲ ಬಾರಿಗೆ ಇಂತಹ ಸ್ಥಿತಿ ಎದುರಾಗಿದೆ.

ಸಂವಿಧಾನದಲ್ಲಿಯೂ ಸಹ ವಿಧಾನಮಂಡಲದ ಒಪ್ಪಿಗೆ ಪಡೆದ ನಂತರ ರಾಜ್ಯಪಾಲರ ಒಪ್ಪಿಗೆ ಪಡೆಯಬೇಕೆಂದು ಸ್ಪಷ್ಟವಾಗಿ ಹೇಳಲಾಗಿದೆ. ಸಾಮಾನ್ಯವಾಗಿ ರಾಜ್ಯಪಾಲರ ಆಡಳಿತವಿದ್ದ ಸಂದರ್ಭದಲ್ಲಿ ಸಂಸತ್ತಿನಲ್ಲಿ ವಿಧೇಯಕಕ್ಕೆ ಒಪ್ಪಿಗೆ ಪಡೆದು ಜಾರಿಗೆ ತರಲಾಗುತ್ತಿತ್ತು. ಆದರೆ ರಾಜ್ಯದಲ್ಲಿ ಅಂತಹ ಸನ್ನಿವೇಶ ಇಲ್ಲ, ಸದ್ಯ ಇರುವುದು ಹಂಗಾಮಿ ಸರ್ಕಾರ. ಇಂತಹ ಸಂದರ್ಭದಲ್ಲಿ ರಾಜ್ಯಪಾಲರು ಸ್ವಯಂ ಆಗಿ ವಿಧೇಯಕಕ್ಕೆ ಅಂಗೀಕಾರ ಪಡೆಯಲು ಅವಕಾಶ ಇಲ್ಲ. ಇಂತಹ ಸ್ಥಿತಿ ಬಹುಶಃ ಹಿಂದೆ ಎಂದೂ ಕಂಡು ಬಂದ ಉದಾಹರಣೆಗಳು ಇಲ್ಲ.

ಇಂತಹ ಸಂದರ್ಭದಲ್ಲಿ ಹೊಸದಾಗಿ ಅಸ್ತಿತ್ವಕ್ಕೆ ಬರುವ ಸರ್ಕಾರ ಮತ್ತೊಮ್ಮೆ ತುರ್ತು ಅಧಿವೇಶನ ಕರೆದು ವಿಧೇಯಕ ಅಂಗೀಕರಿಸಬೇಕಾಗುತ್ತದೆ. ಆದರೆ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರ ತನ್ನದೇ ಆದ ಯೋಜನೆ, ಕಾರ್ಯಕ್ರಮಗಳನ್ನು ಸೇರಿಸಿ ವಿಧೇಯಕ ರೂಪಿಸಿರುವುದರಿಂದ ನೂತನವಾಗಿ ಬರಲಿರುವ ಸರ್ಕಾರ ಅದನ್ನು ಯಥಾಸ್ಥಿತಿಯಲ್ಲಿ ಅಂಗೀಕರಿಸುವುದು ಅನುಮಾನ. ಇನ್ನು ಹೊಸ ಸರ್ಕಾರ ಅಥವಾ ಬಿಜೆಪಿ ಸರ್ಕಾರ ತನ್ನದೇ ಆದ ಯೋಜನೆ, ಕಾರ್ಯಕ್ರಮಗಳನ್ನು ರೂಪಿಸಿ ವಿಧೇಯಕ ಜಾರಿಗೆ ತರಲು ಇರುವ ಏಳು ದಿನಗಳು ಸಾಕಾಗುವುದಿಲ್ಲ. ಒಂದು ವೇಳೆ ಮೈತ್ರಿ ಸರ್ಕಾರದ ವಿಧೇಯಕದ ಕೆಲವು ಅಂಶಗಳನ್ನು ಕೈಬಿಟ್ಟು ಅಂಗೀಕಾರ ಪಡೆಯಲು ಹೊಸ ಸರ್ಕಾರ ನಿರ್ಧರಿಸಿದರೆ, ತಕ್ಷಣ ಎಲ್ಲ ಶಾಸಕರಿಗೆ ಮಾಹಿತಿ ನೀಡಿ, ಒಂದು ದಿನದ ತುರ್ತು ಅಧಿವೇಶನ ಕರೆದು, ಯಾವುದೇ ಚರ್ಚೆ ಇಲ್ಲದೇ ಅಂಗೀಕಾರ ಪಡೆಯಬಹುದು.

ಆಗಸ್ಟ್‌ನಲ್ಲಿ ವಿಧೇಯಕ?:  ಈ ಎಲ್ಲ ಅಂಶಗಳ ಹಿನ್ನೆಲೆಯಲ್ಲಿ ಸ್ವಲ್ಪ ತೊಂದರೆಯಾದರೂ ಪರವಾಗಿಲ್ಲ ಎಂದು ಬಿಜೆಪಿ ಸರ್ಕಾರ ಆಗಸ್ಟ್‌ ತಿಂಗಳಲ್ಲಿ ತನ್ನ ಯೋಜನೆ, ಕಾರ್ಯಕ್ರಮಗಳನ್ನು ಸೇರ್ಪಡೆ ಮಾಡಿ ವಿಧೇಯಕ ಮಂಡಿಸಿದರೂ ಅಶ್ಚರ್ಯವಿಲ್ಲ. ಒಂದು ವೇಳೆ ಇದು ನಡೆದರೆ ಬಹುಶಃ ರಾಜ್ಯದ ರಾಜಕೀಯ ಇತಿಹಾಸದಲ್ಲಿ ದಾಖಲೆಯಾಗಲಿದೆ.