ಬೆಂಗಳೂರು :  ರಾಜ್ಯ ಸರ್ಕಾರವು ಬಜೆಟ್‌ನಲ್ಲಿ ಘೋಷಿಸಿದ್ದ ಸಹಕಾರಿ ಬ್ಯಾಂಕ್‌ಗಳಲ್ಲಿನ ಎಲ್ಲಾ ರೈತರ ಒಂದು ಲಕ್ಷ ರು.ವರೆಗಿನ ಚಾಲ್ತಿ ಸಾಲವನ್ನು ಮನ್ನಾ ಮಾಡಲು ಸಚಿವ ಸಂಪುಟ ಸಭೆ ಗುರುವಾರ ಒಪ್ಪಿಗೆ ನೀಡಿದ್ದು, ಸಹಕಾರಿ ಬ್ಯಾಂಕ್‌ಗಳಿಂದ ರೈತರಿಗೆ ನೀಡಿರುವ 10,734 ಕೋಟಿ ರು. ಸಾಲದ ಪೈಕಿ 9,448 ಕೋಟಿ ರು. ಮನ್ನಾ ಆಗಲಿದೆ.

ಈ ಮೂಲಕ 2018ರ ಜುಲೈ 10ರವರೆಗೆ ಸಹಕಾರಿ ಬ್ಯಾಂಕ್‌ಗಳಲ್ಲಿ ರೈತರು ಹೊಂದಿರುವ ಎಲ್ಲಾ ರೀತಿಯ ಅಲ್ಪಾವಧಿ ಬೆಳೆ ಸಾಲವು ಒಂದು ಲಕ್ಷ ರು.ವರೆಗೆ ಮನ್ನಾ ಆಗಲಿದೆ. ಅಲ್ಲದೆ, ಜುಲೈ 10ರ ಬಳಿಕ ರೈತರು ಸಾಲ ಮರುಪಾವತಿ ಮಾಡಿದ್ದರೆ ಸಂಬಂಧಪಟ್ಟಮೊತ್ತ ಅವರ ಉಳಿತಾಯ ಖಾತೆಗೆ ವರ್ಗಾವಣೆಯಾಗಲಿದೆ ಎಂದು ಖುದ್ದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.

ಗುರುವಾರ ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿದ ಕುಮಾರಸ್ವಾಮಿ, ಸಚಿವ ಸಂಪುಟ ಸಭೆಯಲ್ಲಿ ಸಹಕಾರಿ ಬ್ಯಾಂಕ್‌ಗಳಲ್ಲಿನ ರೈತರ 1 ಲಕ್ಷ ರು.ವರೆಗಿನ ಚಾಲ್ತಿ ಸಾಲ ಮನ್ನಾ ನಿರ್ಧಾರಕ್ಕೆ ಒಪ್ಪಿಗೆ ನೀಡಲಾಗಿದೆ. ಆದೇಶವು ಶುಕ್ರವಾರದಿಂದಲೇ ಅನ್ವಯವಾಗಲಿದ್ದು, ಯಾವುದೇ ಸಹಕಾರಿ ಬ್ಯಾಂಕ್‌ ಸಾಲ ವಸೂಲಾತಿಗೆ ನೋಟಿಸ್‌ ನೀಡುವುದಾಗಲಿ ಅಥವಾ ಹೊಸ ಸಾಲ ನೀಡಲು ನಿರಾಕರಿಸುವುದಾಗಲಿ ಮಾಡುವಂತಿಲ್ಲ ಎಂದು ಸ್ಪಷ್ಟಪಡಿಸಿದರು.

ಸಚಿವ ಸಂಪುಟದ ನಿರ್ಧಾರದಿಂದ ಸಹಕಾರಿ ಬ್ಯಾಂಕ್‌ಗಳಿಂದ ರೈತರಿಗೆ ನೀಡಿರುವ 10,734 ಕೋಟಿ ರು. ಸಾಲದ ಪೈಕಿ 9,448 ಕೋಟಿ ರು. ಮನ್ನಾ ಆಗುವುದರಿಂದ ಸಹಕಾರಿ ಸಂಘದ ಸದಸ್ಯತ್ವ ಪಡೆದಿರುವ 22 ಲಕ್ಷ ರೈತರಲ್ಲಿ 20,38,000 ರೈತರಿಗೆ ಅನುಕೂಲವಾಗಲಿದೆ. ಪ್ರತಿ ತಿಂಗಳು ಸಾಲ ನವೀಕರಣದ ವೇಳೆ ಸಂಬಂಧಪಟ್ಟಮೊತ್ತವನ್ನು ಹಣಕಾಸು ಇಲಾಖೆಯಿಂದ ಸಹಕಾರ ಇಲಾಖೆಗೆ ವರ್ಗಾವಣೆ ಮಾಡಲಾಗುವುದು. ಈ ವಿಷಯದಲ್ಲಿ ಸರ್ಕಾರಕ್ಕೆ ಹಣದ ಕೊರತೆ ಇಲ್ಲ ಎಂದು ಹೇಳಿದರು.

ಜುಲೈ ವೇಳೆಗೆ ಸಂಪೂರ್ಣ ಸಾಲ ಮನ್ನಾ:  ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ಸಂಪೂರ್ಣ ಸಾಲವನ್ನು ಮುಂದಿನ ಜುಲೈ ವೇಳೆಗೆ ತೀರಿಸುವ ಬಗ್ಗೆಯೂ ಯೋಜನೆ ಸಿದ್ಧಪಡಿಸಲಾಗಿದೆ ಎಂದು ಇದೇ ವೇಳೆ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು.

ರಾಷ್ಟ್ರೀಕೃತ ಬ್ಯಾಂಕ್‌ಗಳು ಸಾಲ ಮನ್ನಾಗೆ ಒಪ್ಪುವುದಿಲ್ಲ ಎಂದು ಕೆಲವರು ಹೇಳುತ್ತಿದ್ದಾರೆ. ಈ ಸಾಲ ಮನ್ನಾ ಆಗಬಾರದು ಎಂಬ ಕಾರಣಕ್ಕೆ ದೆಹಲಿಯಿಂದ ಒತ್ತಡ ತರುತ್ತಿರುವುದೂ ಗೊತ್ತಿದೆ. ನಾಲ್ಕು ವರ್ಷ 4 ಕಂತುಗಳಲ್ಲಿ ಸಾಲ ತೀರಿಸಲು ನಿರ್ಧರಿಸಲಾಗಿತ್ತು. ಮುಂದಿನ ಸಚಿವ ಸಂಪುಟ ಸಭೆ ಬಳಿಕ ಎಲ್ಲಾ ಮಾಹಿತಿಯನ್ನೂ ಒದಗಿಸಲಾಗುವುದು. ಹೀಗಾಗಿ ಯಾರೊಬ್ಬರೂ ಆತ್ಮಹತ್ಯೆಯ ಪ್ರಯತ್ನ ಮಾಡಬಾರದು. ರಾಜ್ಯದ ರೈತರನ್ನು ಉಳಿಸಿಕೊಳ್ಳುವ ಜವಾಬ್ದಾರಿ ನನ್ನದು ಎಂದರು.

ಇದೇ ವೇಳೆ ಮುಂದಿನ ವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಎರಡನೇ ಹಂತದ ಸಾಲ ಮನ್ನಾಗೆ ಅಧಿಕೃತ ಮುದ್ರೆ ಹಾಕಲಾಗುವುದು. ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ರೈತರು ಪಡೆದಿರುವ ಕೃಷಿ ಸಾಲ ಮನ್ನಾ ಬಗ್ಗೆ ಈಗಾಗಲೇ ಬ್ಯಾಂಕ್‌ಗಳ ವ್ಯವಸ್ಥಾಪಕರ ಜತೆ ಸಭೆ ನಡೆಸಲಾಗಿದೆ. ಮುಂದಿನ ವಾರ ಸಚಿವ ಸಂಪುಟ ಸಭೆ ಬಳಿಕ ರಾಷ್ಟ್ರೀಕೃತ ಬ್ಯಾಂಕ್‌ಗಳ ಸಾಲ ಮನ್ನಾ ಸಂಪೂರ್ಣ ವಿವರವನ್ನು ಸುದ್ದಿಗಾರರ ಮುಂದಿಡಲಾಗುವುದು ಎಂದು ಭರವಸೆ ನೀಡಿದರು.

ಕುಟುಂಬಕ್ಕೆ 1 ಲಕ್ಷ ರು. ಮಿತಿ ರದ್ದು :  ಸಾಲ ಮನ್ನಾ ಮಾರ್ಗಸೂಚಿಯನ್ನು ಬದಲಿಸಲಾಗಿದೆ ಎಂದು ಇದೇ ವೇಳೆ ಕುಮಾರಸ್ವಾಮಿ ಮಾಹಿತಿ ನೀಡಿದರು.  ಬಜೆಟ್‌ನಲ್ಲಿ ಘೋಷಿಸುವಾಗ ಕುಟುಂಬವೊಂದರ ರೈತರ ಒಂದು ಲಕ್ಷ ರು.ವರೆಗಿನ ಗರಿಷ್ಠ ಸಾಲ ಮಾತ್ರ ಮನ್ನಾ ಎಂದು ಹೇಳಲಾಗಿತ್ತು. ಇದನ್ನು ಪರಿಷ್ಕರಿಸಿ ಕುಟುಂಬದಲ್ಲಿ ಎಷ್ಟುಮಂದಿ ಸಾಲ ಪಡೆದಿರುತ್ತಾರೋ ಅಷ್ಟೂಮಂದಿಗೆ ಸಾಲ ಮನ್ನಾ ಲಾಭ ಅನ್ವಯವಾಗುವಂತೆ ಮಾಡಲಾಗಿದೆ ಎಂದು ತಿಳಿಸಿದರು