ಬೆಂಗಳೂರು : ಕೇಂದ್ರ ಸರ್ಕಾರವು ‘ಆಯುಷ್ಮಾನ್ ಭಾರತ್’ ಯೋಜನೆಗೆ ಚಾಲನೆ ನೀಡಿರುವ ಬೆನ್ನಲ್ಲೇ ರಾಜ್ಯದ ‘ಆರೋಗ್ಯ ಕರ್ನಾಟಕ’ ಯೋಜನೆಯನ್ನು ಕೇಂದ್ರದ ಯೋಜನೆಯೊಂದಿಗೆ ಒಗ್ಗೂಡಿಸಿ ‘ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ’ ಯೋಜನೆ ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರ ಮುಂದಾಗಿದೆ. 

ಇದರಡಿ ರಾಜ್ಯದ ಪ್ರತಿ ಬಿಪಿಎಲ್ ಕುಟುಂಬಕ್ಕೆ ವಾರ್ಷಿಕ 5 ಲಕ್ಷ ರು.ವರೆಗೆ ಚಿಕಿತ್ಸಾ ವೆಚ್ಚ ಸರ್ಕಾರದ ವತಿಯಿಂದಲೇ ಭರಿಸುವುದಾಗಿ ಘೋಷಿಸಿದೆ.  ಅಲ್ಲದೆ, ಎಪಿಎಲ್ ಕುಟುಂಬಗಳಿಗೂ ವಾರ್ಷಿಕ 1.5 ಲಕ್ಷ ರು.ವರೆಗೆ ಚಿಕಿತ್ಸಾ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸಲಿದೆ

ಸಿದ್ದರಾಮಯ್ಯ ನೇತೃತ್ವದ ಹಿಂದಿನ ರಾಜ್ಯ ಸರ್ಕಾರವು ಮಾ.21 ರಿಂದ ರಾಜ್ಯದಲ್ಲಿ ‘ಆರೋಗ್ಯ  ಕರ್ನಾಟಕ’ ಯೋಜನೆ ಜಾರಿಗೆ ತಂದಿದೆ. ಇದರಡಿ ರಾಜ್ಯದಲ್ಲಿರುವ 1.15 ಕೋಟಿ ಬಿಪಿಎಲ್ ಕುಟುಂಬ  ಗಳಿಗೆ ವಾರ್ಷಿಕ 1.5 ಲಕ್ಷ ರು. ಚಿಕಿತ್ಸಾ ವೆಚ್ಚ ಹಾಗೂ 19 ಲಕ್ಷ ಎಪಿಎಲ್ ಕುಟುಂಬಗಳಿಗೆ ಖಾಸಗಿ ಆಸ್ಪತ್ರೆ ಶುಲ್ಕದಲ್ಲಿ ಶೇ.30ರಷ್ಟು ಪಾವತಿಸುವುದಾಗಿ ಘೋಷಿಸಿತ್ತು. 

ತುರ್ತು ಪರಿಸ್ಥಿತಿಯಲ್ಲಿ ಕುಟುಂಬದ ಚಿಕಿತ್ಸಾ ವೆಚ್ಚದ ಮಿತಿಯನ್ನು 2 ಲಕ್ಷ ರು.ವರೆಗೆ ವಿಸ್ತರಿಸಲು ಅವಕಾಶ ಕಲ್ಪಿಸಿತ್ತು. ಇದರಂತೆ, ಸೆ.20ರವರೆಗೆ 18,201 ಮಂದಿ ಖಾಸಗಿ ಆಸ್ಪತ್ರೆ ಹಾಗೂ 13,842 ಮಂದಿ ಸರ್ಕಾರಿ ಆಸ್ಪತ್ರೆಯಲ್ಲಿ ಸೇರಿದಂತೆ 32,043 ಮಂದಿ ಆರೋಗ್ಯ ಸೇವೆ ಪಡೆದಿದ್ದಾರೆ.  ಆದರೆ, ಪ್ರಸ್ತುತ ಕೇಂದ್ರ ಸರ್ಕಾರವು ‘ಆಯುಷ್ಮಾನ್ ಭಾರತ್’ ಯೋಜನೆಯಡಿ ದೇಶಾದ್ಯಂತ ಪ್ರತಿ ಬಿಪಿಎಲ್ ಕುಟುಂಬಕ್ಕೆ 5 ಲಕ್ಷ ರು. ವಾರ್ಷಿಕ ಚಿಕಿತ್ಸಾ ವೆಚ್ಚ ಭರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದೆ.

ಕೇಂದ್ರ ಸರ್ಕಾರದ ಅಂಕಿ-ಅಂಶಗಳ ಪ್ರಕಾರ ರಾಜ್ಯದ 62 ಲಕ್ಷ ಬಿಪಿಎಲ್ ಕುಟುಂಬಗಳಿಗೆ ಮಾತ್ರ ಆಯುಷ್ಮಾನ್ ಭಾರತ್ ಯೋಜನೆಯಡಿ ಚಿಕಿತ್ಸಾ ಸೇವೆ ಲಭ್ಯ ವಾಗಲಿದೆ. ಈ 62 ಲಕ್ಷ ಕುಟುಂಬಗಳಿಗೆ ಶೇ.60 ರಷ್ಟು ಚಿಕಿತ್ಸಾ ವೆಚ್ಚವನ್ನು ಕೇಂದ್ರ ಸರ್ಕಾರ ಹಾಗೂ ಶೇ. 40ರಷ್ಟು ವೆಚ್ಚವನ್ನು ರಾಜ್ಯ ಸರ್ಕಾರ ಭರಿಸುತ್ತದೆ. ಉಳಿದ 72 ಲಕ್ಷ ಕುಟುಂಬಗಳಿಗೆ ‘ಆರೋಗ್ಯ ಕರ್ನಾಟಕ’ ಯೋಜನೆಯಡಿಯಲ್ಲಿಯೇ ಶೇ.100 ರಷ್ಟು ಚಿಕಿತ್ಸಾ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸಬೇಕು. ಹೀಗಾಗಿ ಎರಡೂ ಯೋಜನೆಗಳನ್ನು ಒಗ್ಗೂಡಿ ಸಲಾಗುವುದು. ಆರೋಗ್ಯ ಕರ್ನಾಟಕ ಯೋಜನೆಯಡಿ ಬರುವ 53 ಲಕ್ಷ ಬಿಪಿಎಲ್ ಕುಟುಂಬಗಳಿಗೆ 1.5 ಲಕ್ಷ ಬದಲಿಗೆ ರಾಜ್ಯ ಸರ್ಕಾರದ ವೆಚ್ಚದಲ್ಲೇ 5 ಲಕ್ಷ ರು.ವರೆಗೆ ಚಿಕಿತ್ಸಾ ವೆಚ್ಚ ಭರಿಸಲಾಗುವುದು. 

ಉಳಿದ 19 ಲಕ್ಷ ಎಪಿಎಲ್ ಕಾರ್ಡ್ ಕುಟುಂಬದವರೆಗೆ ಶೇ.30 ರಷ್ಟು ಶುಲ್ಕವನ್ನು ರಾಜ್ಯ ಸರ್ಕಾರ ಭರಿಸಲಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.