ಬೆಂಗಳೂರು[ಜೂ.07]: ರೈತರು ಬೆಳೆದಿರುವ ಆಹಾರ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ, ರಾಜ್ಯ ಸರ್ಕಾರದಿಂದ ಪ್ರೋತ್ಸಾಹ ಧನ ನೀಡುವುದರ ಜತೆಗೆ ಉಚಿತವಾಗಿ ದಾಸ್ತಾನು ಮಾಡಲು ಪ್ರಸಕ್ತ ವರ್ಷದಿಂದ ಗೋದಾಮು ಸೌಲಭ್ಯ, ರೈತರ ಹೊಲದಿಂದ ಗೋದಾಮಿನವರೆಗೆ ಉಚಿತ ಸಾಗಣೆ ವ್ಯವಸ್ಥೆ ಕಲ್ಪಿಸಲಾಗುವುದು. ಅಲ್ಲದೆ, ಗೋದಾಮಿನಲ್ಲಿ ಸಂಗ್ರಹಿಸಿಟ್ಟಿರುವ ದವಸ ಧಾನ್ಯದ ಮೇಲೆ ಸಬ್ಸಿಡಿ ಸಹಿತ ಸಾಲವನ್ನೂ ಒದಗಿಸಲಾಗುವುದು ಎಂದು ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ್‌ ಹೇಳಿದ್ದಾರೆ.

ಗುರುವಾರ ವಿಧಾನಸೌಧದಲ್ಲಿ 2018-19ನೇ ಸಾಲಿನಲ್ಲಿ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಕೃಷಿ ಉತ್ಪನ್ನಗಳನ್ನು ಖರೀದಿಸಿರುವ ಕುರಿತು ಪ್ರಗತಿ ಪರಿಶೀಲಿಸಲು ರಚಿಸಿರುವ ಸಚಿವ ಸಂಪುಟ ಉಪ ಸಮಿತಿ ಸಭೆಯ ಬಳಿಕ ಅವರು ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.

2018-19ನೇ ಸಾಲಿನಲ್ಲಿ ಸೂಕ್ತ ಸಮಯಕ್ಕೆ ರೈತರ ನೆರವಿಗೆ ಧಾವಿಸಿ ಅಗತ್ಯ ಬೆಂಬಲ ಬೆಲೆ, ಮಾರುಕಟ್ಟೆಗೆ ಮಧ್ಯಪ್ರವೇಶಿಸಿ ದರ ಒದಗಿಸುವುದು ಹಾಗೂ ಪ್ರೋತ್ಸಾಹ ಧನ ನೀಡುವ ಕೆಲಸ ಮಾಡಿದ್ದೇವೆ. ಬೆಂಬಲ ಬೆಲೆ ಖರೀದಿ ಕೇಂದ್ರಗಳಲ್ಲಿ ರೈತರಿಂದ 36.62 ಲಕ್ಷ ಕ್ವಿಂಟಲ್‌ ಕೃಷಿ ಉತ್ಪನ್ನ ಖರೀದಿಸಿದ್ದು, 2.80 ಲಕ್ಷ ರೈತರು ಪ್ರಯೋಜನ ಪಡೆದಿದ್ದಾರೆ. ಈ ಪೈಕಿ ರೈತರಿಗೆ ಸಂದಾಯವಾಗಬೇಕಿದ್ದ 1400 ಕೋಟಿ ರು. ಹಣವನ್ನು ರಾಜ್ಯ ಸರ್ಕಾರ ಪಾವತಿ ಮಾಡಿದೆ. ಹೀಗಾಗಿ ಈ ಬಾರಿ ಎಲ್ಲೂ ಬೆಲೆ ಕುಸಿತವಾಗಿದೆ ಎಂದು ರೈತರು ಪ್ರತಿಭಟನೆಗಳನ್ನು ಮಾಡದಂತೆ ಸಮಸ್ಯೆ ಬಗೆಹರಿಸಿದ್ದೇವೆ ಎಂದು ಹೇಳಿದರು.

2019-20ನೇ ಸಾಲಿನಲ್ಲಿ ಆಗಸ್ಟ್‌ ಬಳಿಕ ರೈತರಿಂದ ಭತ್ತ, ರಾಗಿ, ಜೋಳ ಸೇರಿ ವಿವಿಧ ದವಸ ಧಾನ್ಯ ಖರೀದಿ ಮಾಡಲು ಶುರು ಮಾಡುತ್ತೇವೆ. ರೈತರಿಗೆ ಸಮಸ್ಯೆಯಾಗದಂತೆ ಮೊದಲೇ ಮುನ್ನೆಚ್ಚರಿಕೆ ವಹಿಸುತ್ತಿದ್ದು, ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಬಜೆಟ್‌ನಲ್ಲಿ ಘೋಷಿಸಿರುವಂತೆ ಈ ಬಾರಿ ರೈತರಿಗೆ ಬೆಂಬಲ ಬೆಲೆ ನೀಡುವುದರ ಜತೆಗೆ ಉತ್ತಮ ಬೆಲೆ ದೊರೆಯುವವರೆಗೆ ಉಚಿತ ದಾಸ್ತಾನು ವ್ಯವಸ್ಥೆ ಕಲ್ಪಿಸಲು ನಿರ್ಧರಿಸಲಾಗಿದೆ ಎಂದರು.

8 ತಿಂಗಳು ದಾಸ್ತಾನಿಗೆ ಅವಕಾಶ:

8 ತಿಂಗಳುಗಳ ಕಾಲ ರೈತರು ತಮ್ಮ ದವಸ ಧಾನ್ಯಗಳನ್ನು ಸರ್ಕಾರಿ ಗೋದಾಮುಗಳಲ್ಲಿ ದಾಸ್ತಾನು ಮಾಡಿಕೊಳ್ಳಬಹುದು. ಗೋದಾಮುಗಳಿಗೆ ಸಾಗಣೆ ಮಾಡುವ ವೆಚ್ಚವನ್ನೂ ಸರ್ಕಾರವೇ ಭರಿಸುತ್ತದೆ. ರೈತರಿಗೆ ಈ ಸೇವೆ ಪಡೆಯಲು ಅನುವಾಗುವಂತೆ ಸಹಾಯವಾಣಿ ಸ್ಥಾಪಿಸಲಾಗುವುದು. ರೈತರ ಮನವಿ ಮೇರೆಗೆ ಅಧಿಕಾರಿಗಳು ಜಿಪಿಎಸ್‌ ಆಧಾರದ ಮೇಲೆ ಅಲ್ಲಿಂದ ದವಸ ಧಾನ್ಯ ಸಾಗಣೆ ಮಾಡಲು ಸ್ಥಳೀಯವಾಗಿ ನೋಂದಣಿ ಮಾಡಿಕೊಂಡಿರುವ ಟ್ರಾಕ್ಟರ್‌ ಮಾಲೀಕರಿಗೆ ಸೂಚಿಸುತ್ತಾರೆ. ಗೋದಾಮಿಗೆ ಸಾಗಿಸಿದ ಬಳಿಕ ಡಿಜಿಟಲ್‌ ಸಹಿಯುಳ್ಳ ಸ್ವೀಕೃತಿ ಪತ್ರವನ್ನು ರೈತನಿಗೆ ನೀಡಲಾಗುವುದು ಎಂದರು. ಅಲ್ಲದೆ, ರಾಜ್ಯದ ಒಟ್ಟು ಆಹಾರ ಉತ್ಪಾದನೆಯ ಶೇ.25ರಷ್ಟುಆಹಾರ ಧಾನ್ಯಗಳನ್ನು ದಾಸ್ತಾನು ಮಾಡಲು ಗೋದಾಮು ಸಾಮರ್ಥ್ಯ ಹೊಂದಿದ್ದೇವೆ. ರಾಜ್ಯದ ವಿವಿಧ ಗೋದಾಮುಗಳಲ್ಲಿ 37 ಲಕ್ಷ ಟನ್‌ ಆಹಾರ ಸಾಮಗ್ರಿ ದಾಸ್ತಾನು ಮಾಡಬಹುದು. ಅಧಿಕಾರಿಗಳು ನೀಡುವ ರಸೀದಿ ಆಧಾರದ ಮೇಲೆ ಸಬ್ಸಿಡಿ ಸಹಿತ ಅಡಮಾನವೂ ಸಾಲವೂ ದೊರೆಯಲಿದೆ ಎಂದು ಸ್ಪಷ್ಟಪಡಿಸಿದರು.

35.62 ಲಕ್ಷ ಕ್ವಿಂಟಲ್‌ ಖರೀದಿ:

ಕಳೆದ 2018-19ನೇ ಸಾಲಿನಲ್ಲಿ ಪ್ರತಿ ಕ್ವಿಂಟಲ್‌ಗೆ 6,975 ರು. ಬೆಂಬಲ ಬೆಲೆಯಂತೆ 75 ಸಾವಿರ ಮಂದಿ ರೈತರಿಂದ 2.97 ಲಕ್ಷ ಕ್ವಿಂಟಲ್‌ ಹೆಸರು ಕಾಳು ಖರೀದಿ ಮಾಡಲಾಗಿದೆ. ಕ್ವಿಂಟಲ್‌ಗೆ 5,600 ರು.ರಂತೆ 1,703 ಕ್ವಿಂಟಲ್‌ ಉದ್ದಿನಕಾಳು, ಪ್ರತಿ ಕ್ವಿಂಟಲ್‌ಗೆ 3,399 ರು.ಗಳಂತೆ 60 ಟನ್‌ ಸೋಯಾಬೀನ್‌, ಪ್ರತಿ ಕ್ವಿಂಟಲ್‌ಗೆ 6,100 ರು.ಗಳಂತೆ 12.66 ಲಕ್ಷ ಕ್ವಿಂಟಲ್‌ ತೊಗರಿ, ಪ್ರತಿ ಕ್ವಿಂಟಲ್‌ ಮಾವಿನ ಹಣ್ಣಿಗೆ 2,500 ರು.ಗಳಂತೆ 7,512 ಕ್ವಿಂಟಲ್‌ ಮಾವಿನ ಹಣ್ಣು ಖರೀದಿ ಮಾಡಿದ್ದೇವೆ. ಅಲ್ಲದೆ, ಪ್ರತಿ ಕ್ವಿಂಟಲ್‌ಗೆ 17,770 ರು.ಗಳಂತೆ 8.23 ಲಕ್ಷ ಕ್ವಿಂಟಲ್‌ ಭತ್ತ, ಪ್ರತಿ ಕ್ವಿಂಟಲ್‌ಗೆ 2,897 ರು.ಗಳಂತೆ 9.43 ಲಕ್ಷ ಕ್ವಿಂಟಲ್‌ ರಾಗಿ, 1,129 ಕ್ವಿಂಟಲ್‌ ಜೋಳ ಖರೀದಿಸಲಾಗಿದೆ. 35.62 ಲಕ್ಷ ಕ್ವಿಂಟಲ್‌ ಉತ್ಪನ್ನಗಳನ್ನು ಖರೀದಿ ಮಾಡಿ ಈ ಸಂಬಂಧ 1,402 ಕೋಟಿ ರು. ಹಣವನ್ನು ಈಗಾಗಲೇ ರೈತರಿಗೆ ನೀಡಿದ್ದೇವೆ. ಇದರಲ್ಲಿ ಆಧಾರ್‌ ಲಿಂಕ್‌ ಸಮಸ್ಯೆಯಿರುವ 27 ಕೋಟಿ ರು. ಮೊತ್ತದ ಭತ್ತದ ಹಣ ಮಾತ್ರ ಬಾಕಿ ಉಳಿದಿದ್ದು, ಈ ಹಣ ಪಾವತಿಗೂ ಸಚಿವ ಸಂಪುಟ ಉಪ ಸಮಿತಿಯಲ್ಲಿ ಒಪ್ಪಿಗೆ ನೀಡಿದ್ದೇವೆ ಎಂದರು.

ಈ ವೇಳೆ ಕೃಷಿ ಸಚಿವ ಎನ್‌.ಎಚ್‌. ಶಿವಶಂಕರರೆಡ್ಡಿ, ತೋಟಗಾರಿಕೆ ಸಚಿವ ಎಂ.ಸಿ. ಮನಗೂಳಿ ಹಾಜರಿದ್ದರು.

ಜು.10ರ ವೇಳೆಗೆ 9 ಸಾವಿರ ಕೋಟಿ ರು. ಸಾಲಮನ್ನಾ ಗುರಿ

ಸಹಕಾರಿ ಬ್ಯಾಂಕ್‌ಗಳಲ್ಲಿ ಸಾಲ ಮನ್ನಾಗೆ ಎಲ್ಲಾ ಕ್ರಮ ಕೈಗೊಂಡಿದ್ದೇವೆ. ಈಗಾಗಲೇ 3,600 ಕೋಟಿ ರು. ಸಾಲ ಮನ್ನಾ ಮಾಡಲಾಗಿದ್ದು, ಸರ್ಕಾರವು ಸಂಬಂಧಪಟ್ಟಸಹಕಾರಿ ಬ್ಯಾಂಕ್‌ಗಳಿಗೆ ಹಣ ಪಾವತಿ ಮಾಡಿದೆ. ಜುಲೈ 10ರ ವೇಳೆಗೆ 9 ಸಾವಿರ ಕೋಟಿ ರು. ಸಾಲ ತೀರಿಸುವ ಗುರಿ ಹೊಂದಿದ್ದೇವೆ ಎಂದು ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ್‌ ಹೇಳಿದರು.

ಬಿಜೆಪಿಯವರು ಬರ ಸಮೀಕ್ಷೆ ನಡೆಸಲಿ

ರಾಜ್ಯ ಸರ್ಕಾರವು ಬರ ಪರಿಸ್ಥಿತಿಯನ್ನು ಸಮರ್ಥವಾಗಿ ನಿರ್ವಹಣೆ ಮಾಡಿದೆ. ಮೂರು ತಿಂಗಳು ನೀತಿ ಸಂಹಿತೆ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳು ಹಸ್ತಕ್ಷೇಪ ಮಾಡಲು ಆಗದಿದ್ದರೂ ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಪ್ರತಿಯೊಂದು ತಾಲೂಕು, ಹಳ್ಳಿಯಲ್ಲೂ ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಒದಗಿಸುವ ಕೆಲಸವನ್ನು ಮಾಡಿದೆ. ಬಿಜೆಪಿಯವರು ಸಮೀಕ್ಷೆ ನಡೆಸಲು ನಾವು ಅಡ್ಡಿ ಹೇಳುವುದಿಲ್ಲ. ಅವರು ಸಮೀಕ್ಷೆ ನಡೆಸಿ ವರದಿ ನೀಡಲಿ. ಇನ್ನೂ ಸುಧಾರಿಸಬೇಕಾದ ಕ್ರಮಗಳಿದ್ದರೆ ಸರ್ಕಾರ ಮಾಡುತ್ತದೆ ಎಂದು ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ್‌ ತಿಳಿಸಿದರು