ಬೆಂಗಳೂರು[ಜು.07]: ಮೈತ್ರಿ ಸರ್ಕಾರ ಉರುಳಿಸುವ ಅತೃಪ್ತ ಶಾಸಕರ ತಂತ್ರವನ್ನು ಮಣಿಸಲು ವಿಧಾನಸಭೆ ವಿಸರ್ಜಿಸುವ ಹಾಗೂ ಅತೃಪ್ತರ ಮನವೊಲಿಸಲು ವಿಧಾನಮಂಡಲ ಅಧಿವೇಶನ ಮುಂದೂಡುವ ಮೈತ್ರಿಕೂಟದ ನಾಯಕರ ಪ್ರಯತ್ನಗಳಿಗೆ ರಾಜ್ಯಪಾಲರು ಕ್ಯಾರೆ ಎನ್ನದಿರುವ ಸಾಧ್ಯತೆಯೇ ಹೆಚ್ಚು ಎಂದು ಕಾನೂನು ತಜ್ಞರು ಹೇಳುತ್ತಾರೆ.

ಮೈತ್ರಿ ಸರ್ಕಾರವು ಸಚಿವ ಸಂಪುಟ ಸಭೆ ನಡೆಸಿ ವಿಧಾನಸಭೆ ವಿಸರ್ಜನೆಗೆ ಶಿಫಾರಸು ಮಾಡಿದರೂ ಅದನ್ನು ರಾಜ್ಯಪಾಲರು ತಿರಸ್ಕರಿಸಲು ಅವಕಾಶವಿದೆ ಎನ್ನಲಾಗಿದೆ. ಏಕೆಂದರೆ, ಈಗಾಗಲೇ 13 ಶಾಸಕರು ರಾಜೀನಾಮೆ ನೀಡಿರುವುದರಿಂದ ಸರ್ಕಾರ ಬಹುಮತ ಹೊಂದಿದೆಯೇ ಎಂಬುದು ಶಂಕಾಸ್ಪದವಾಗಿದೆ. ಅಲ್ಪಮತದಲ್ಲಿರುವ ಸರ್ಕಾರ ವಿಧಾನಸಭೆ ವಿಸರ್ಜನೆಗೆ ಶಿಫಾರಸು ಮಾಡುವ ಅಧಿಕಾರ ಹೊಂದಿಲ್ಲ ಎಂಬ ಕಾರಣ ನೀಡಿ ಈ ಶಿಫಾರಸನ್ನು ರಾಜ್ಯಪಾಲರು ತಳ್ಳಿಹಾಕಲು ಅವಕಾಶವಿದೆ.

ಅದೇ ರೀತಿ ಅತೃಪ್ತ ಶಾಸಕರ ಮನವೊಲಿಸಲು ಸಮಯಾವಕಾಶ ಪಡೆದುಕೊಳ್ಳಲು ಜೂ.12ರಿಂದ ಆಯೋಜಿಸಲು ಉದ್ದೇಶಿಸಲಾಗಿರುವ ವಿಧಾನಮಂಡಲ ಅಧಿವೇಶನವನ್ನು ಮುಂದೂಡುವ ಸಾಧ್ಯತೆಯನ್ನು ಮೈತ್ರಿಕೂಟ ಅವಲೋಕಿಸುತ್ತಿದೆ. ಆದರೆ, ಶಾಸಕರ ರಾಜೀನಾಮೆಯಿಂದಾಗಿ ಸರ್ಕಾರ ಅಲ್ಪಮತಕ್ಕೆ ಕುಸಿದಿರುವುದರಿಂದ ಈ ಕೂಡಲೇ ವಿಶ್ವಾಸ ಮತ ಸಾಬೀತುಪಡಿಸಿ ಎಂದು ರಾಜ್ಯಪಾಲರು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಸೂಚಿಸುವ ಅವಕಾಶವಿದೆ. ತನ್ಮೂಲಕ ವಿಧಾನಮಂಡಲ ಅಧಿವೇಶನ ಮುಂದೂಡುವ ಮೂಲಕ ಅತೃಪ್ತರ ಮನವೊಲಿಕೆಗೆ ಸಮಯಾವಕಾಶ ಪಡೆಯುವ ಮೈತ್ರಿಕೂಟದ ಆಸೆಗೆ ತಣ್ಣೀರೆರಚಬಹುದು.