ಬೆಂಗಳೂರು [ಆ.10]:  ರಾಜ್ಯದಲ್ಲಿ ನೆರೆ ಹಾವಳಿಯಿಂದ ಸಂಕಷ್ಟಕ್ಕೊಳಗಾಗಿರುವ ಜನತೆಯ ರಕ್ಷಣೆ ಹಾಗೂ ವಿಪತ್ತು ಪರಿಹಾರ ಕಾರ್ಯಗಳಿಗಾಗಿ ರಾಜ್ಯ ವಿಪತ್ತು ನಿರ್ವಹಣಾ ನಿಧಿಯಡಿಯಲ್ಲಿ 100 ಕೋಟಿ ರು. ಅನುದಾನವನ್ನು ರಾಜ್ಯ ಸರ್ಕಾರವು ಬಿಡುಗಡೆಗೊಳಿಸಿದೆ.

ರಾಜ್ಯದ 14 ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಪ್ರವಾಹದಿಂದ ಅತಿಹೆಚ್ಚು ಹಾನಿ ಸಂಭವಿಸಿರುವ ಮತ್ತು ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿ ಜಿಲ್ಲೆಗೆ 25 ಕೋಟಿ ರು. ಬಿಡುಗಡೆ ಮಾಡಲಾಗಿದ್ದು, ಬಾಗಲಕೋಟೆ ಮತ್ತು ಉತ್ತರ ಕನ್ನಡ ಜಿಲ್ಲೆಗಳಿಗೆ ತಲಾ 10 ಕೋಟಿ ರು. ಅನುದಾನ ಒದಗಿಸಲಾಗಿದೆ. ವಿಜಯಪುರ, ಯಾದಗಿರಿ, ದಕ್ಷಿಣ ಕನ್ನಡ, ಶಿವಮೊಗ್ಗ, ಉಡುಪಿ, ಕೊಡಗು, ಚಿಕ್ಕಮಗಳೂರು, ಹಾಸನ, ಧಾರವಾಡ, ಗದಗ ಮತ್ತು ಕಲಬುರಗಿ ಜಿಲ್ಲೆಗಳಿಗೆ ತಲಾ 5 ಕೋಟಿ ರು. ನೀಡಲಾಗಿದೆ.

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಬಿಡುಗಡೆ ಮಾಡಿರುವ ಅನುದಾನವನ್ನು ಅತಿವೃಷ್ಟಿಯ ವಿಪತ್ತು ಪರಿಹಾರ ಕಾರ್ಯಗಳಿಗಾಗಿ ಕೇಂದ್ರ ಹೊರಡಿಸಿರುವ ಎಸ್‌ಡಿಆರ್‌ಎಫ್‌/ ಎನ್‌ಡಿಆರ್‌ಎಫ್‌ ಮಾರ್ಗಸೂಚಿಯ ಪ್ರಕಾರ ವೆಚ್ಚಗೊಳಿಸಬೇಕು. ಯಾವ ಉದ್ದೇಶಕ್ಕಾಗಿ ಅನುದಾನ ಬಿಡುಗಡೆ ಮಾಡಲಾಗಿದೆಯೋ ಅದೇ ಉದ್ದೇಶಕ್ಕಾಗಿ ಮಾತ್ರ ಬಳಸಬೇಕು. 

ಅನುದಾನ ವೆಚ್ಚಕ್ಕೆ ಸಂಬಂಧಿಸಿದಂತೆ ಹಣ ಬಳಕೆ ಪ್ರಮಾಣಪತ್ರವನ್ನು ಕಡ್ಡಾಯವಾಗಿ ಸಲ್ಲಿಸಬೇಕು. ಹಣ ಬಳಕೆಯಲ್ಲಿ ಯಾವುದೇ ಲೋಪವಾದ್ದಲ್ಲಿ ಆಯಾ ಜಿಲ್ಲಾಧಿಕಾರಿಯವರನ್ನೇ ನೇರವಾಗಿ ಜವಾಬ್ದಾರರನ್ನಾಗಿ ಮಾಡಲಾಗುವುದು ಎಂದು ಸರ್ಕಾರವು ನಿರ್ದೇಶನ ನೀಡಿದೆ.