ಕರ್ನಾಟಕದಲ್ಲಿ ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದರೂ ಕೈಗಾರಿಕೆಗೆ ಒತ್ತು ನೀಡುವುದನ್ನು ಸಂಪ್ರದಾಯದಂತೆ ಪಾಲಿಸಿಕೊಂಡು ಬಂದಿವೆ. ಹೂಡಿಕೆದಾರರ ಸಮಾವೇಶ ನಡೆಸಿ, ರಾಜ್ಯದಲ್ಲಿ ಬಂಡವಾಳ ತೊಡಗಿಸುವಂತೆ ಉದ್ಯಮಿಗಳಿಗೆ ರತ್ನಗಂಬಳಿ ಹಾಸಿಕೊಂಡು ಬಂದಿವೆ.

ಬೆಂಗಳೂರು(ಡಿ.6): ಕರ್ನಾಟಕದಲ್ಲಿ ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದರೂ ಕೈಗಾರಿಕೆಗೆ ಒತ್ತು ನೀಡುವುದನ್ನು ಸಂಪ್ರದಾಯದಂತೆ ಪಾಲಿಸಿಕೊಂಡು ಬಂದಿವೆ. ಹೂಡಿಕೆದಾರರ ಸಮಾವೇಶ ನಡೆಸಿ, ರಾಜ್ಯದಲ್ಲಿ ಬಂಡವಾಳ ತೊಡಗಿಸುವಂತೆ ಉದ್ಯಮಿಗಳಿಗೆ ರತ್ನಗಂಬಳಿ ಹಾಸಿಕೊಂಡು ಬಂದಿವೆ.

ಸಿದ್ದರಾಮಯ್ಯ ಸರ್ಕಾರ ಕೂಡ ನಾಲ್ಕೂವರೆ ವರ್ಷಗಳಲ್ಲಿ ಅದನ್ನೇ ಮಾಡಿತು. ಈ ಮಧ್ಯೆ ಬಂಡವಾಳ ಹೂಡಿಕೆ ಆಕರ್ಷಣೆಯಲ್ಲಿ ದೇಶದಲ್ಲೇ ನಂ.1 ಸ್ಥಾನ ಗಳಿಸುವ ಮೂಲಕ ಗಮನ ಸೆಳೆಯಿತು. ಅದರ ಫಲವೋ ಏನೋ ಎಂಬಂತೆ ಈ ಸರ್ಕಾರದ ಅವಧಿಯಲ್ಲಿ ಕೈಗಾರಿಕಾ ಕ್ಷೇತ್ರದಲ್ಲಿ ಒಂದಷ್ಟು ಪ್ರಗತಿಯಾಗಿದೆ ಎಂಬ ಅಭಿಪ್ರಾಯ ಜನರಿಂದ ವ್ಯಕ್ತವಾಗಿದೆ.

ಲಿಂಗಾಯತ ಬಾಹುಳ್ಯದ ಮುಂಬೈ- ಕರ್ನಾಟಕದಲ್ಲಿ ಈ ರೀತಿಯ ಅಭಿಪ್ರಾಯ ರಾಜ್ಯದಲ್ಲೇ ಹೆಚ್ಚಿನ ಪ್ರಮಾಣದಲ್ಲಿ ಕಂಡುಬಂದಿರುವುದು ಬಿಜೆಪಿಗೆ ಎಚ್ಚರಿಕೆಯ ಗಂಟೆ. ಯಾವುದೇ ಸಮುದಾಯದಲ್ಲೂ ಸರ್ಕಾರದ ಕೈಗಾರಿಕಾ ಪ್ರಗತಿ ಬಗ್ಗೆ ಎದ್ದುಕಾಣುವಷ್ಟು ಆಕ್ರೋಶ ಇಲ್ಲದಿರುವುದನ್ನು ಕಾಂಗ್ರೆಸ್ಸಿಗೆ ಪ್ಲಸ್ ಎಂದು ಪರಿಗಣಿಸಬಹುದು.

ವಿಶೇಷ ಎಂದರೆ, ಸಿದ್ದು ಸರ್ಕಾರದಿಂದ ಕೈಗಾರಿಕಾ ಪ್ರಗತಿಯಲ್ಲಿ ಒಂದಿಷ್ಟು ಹಿನ್ನಡೆಯಾಗಿದೆ ಎಂಬುದಕ್ಕಿಂತ ಒಂದಷ್ಟು ಪ್ರಗತಿಯಾಗಿದೆ ಎಂಬ ಅಭಿಪ್ರಾಯವನ್ನು ಹೆಚ್ಚಿನ ಕರಾವಳಿಗರು ಹೇಳಿದ್ದಾರೆ.