Asianet Suvarna News Asianet Suvarna News

ಸರ್ಕಾರಕ್ಕೆ ಶತದಿನ: ಸಚಿವರ ಮೌಲ್ಯಮಾಪನ?

ಸರ್ಕಾರಕ್ಕೆ ಶತದಿನ: ಸಚಿವರ ಮೌಲ್ಯಮಾಪನ? | ಜೆಡಿಎಸ್‌ ಸಚಿವರ ಮೌಲ್ಯಮಾಪನಕ್ಕೆ ಸಿಎಂ ಚಿಂತನೆ |  ಬಿಜೆಪಿ ಟೀಕೆ ಹಿನ್ನೆಲೆ ಕಾರ್ಯವೈಖರಿ ಪರಿಶೀಲನೆ 
 

Karnataka Government decides to valuation of their minister performance
Author
Bengaluru, First Published Aug 29, 2018, 12:00 PM IST

ಬೆಂಗಳೂರು (ಆ. 29): ರಾಜ್ಯದಲ್ಲಿ ಜೆಡಿಎಸ್‌-ಕಾಂಗ್ರೆಸ್‌ ನೇತೃತ್ವದ ಸರ್ಕಾರದ ರಚನೆಯಾಗಿ ಶತ ದಿನ ಪೂರೈಸುತ್ತಿರುವ ಹೊಸ್ತಿಲಿನಲ್ಲಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತಮ್ಮ ಪಕ್ಷದ ಸಚಿವರ ಮೌಲ್ಯಮಾಪನ ಮಾಡುವ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಿದ್ದಾರೆ.

ಸಮ್ಮಿಶ್ರ ಸರ್ಕಾರದ ಕಾರ್ಯವೈಖರಿಯ ಬಗ್ಗೆ ಪ್ರತಿಪಕ್ಷ ಬಿಜೆಪಿಯಿಂದ ಮಿತ್ರ ಮತ್ತು ಸ್ವಪಕ್ಷದಿಂದಲೇ ಭಿನ್ನಸ್ವರಗಳು ಕೇಳಿಬಂದಿವೆ. ಸರ್ಕಾರ ರಚನೆಯಾಗಿ ಆ.30ಕ್ಕೆ 100 ದಿನ ಪೂರೈಸಲಿದೆ. ಹೀಗಾಗಿ ಸಚಿವರು ತಮ್ಮ ಇಲಾಖೆಯಲ್ಲಿ ಮಾಡಿರುವ ಪ್ರಗತಿಯ ಕುರಿತು ಪರಿಶೀಲನೆ ನಡೆಸಲು ಮುಂದಾಗಿದ್ದಾರೆ ಎಂದು ಮೂಲಗಳು ಹೇಳಿವೆ. ಸಚಿವರ ಮೌಲ್ಯಮಾಪನದ ಬಗ್ಗೆ ತಮ್ಮ ಆಪ್ತರ ಬಳಿ ಕುಮಾರಸ್ವಾಮಿ ಹೇಳಿಕೊಂಡಿದ್ದು, ಶತದಿನ ಕಳೆದ ಬಳಿಕ ಈ ಕೆಲಸಕ್ಕೆ ಮುಂದಾಗಲಿದ್ದಾರೆ ಎಂದು ಹೇಳಲಾಗಿದೆ.

ಮೂರು ತಿಂಗಳ ಅವಧಿಯಲ್ಲಿ ಸಚಿವರು ಕೈಗೊಂಡಿರುವ ಯೋಜನೆಗಳ ಕುರಿತು ಚರ್ಚಿಸಲಿದ್ದಾರೆ. ಜಿಲ್ಲಾವಾರು ಭೇಟಿ, ಅಧಿಕಾರಿಗಳ ಸಭೆ ಸೇರಿದಂತೆ ಸಚಿವರ ಆಡಳಿತ ಕಾರ್ಯವೈಖರಿ ಕುರಿತು ಪರಿಶೀಲನೆ ನಡೆಸಲಿದ್ದಾರೆ. ಮೌಲ್ಯ ಮಾಪನ ಕೆಲಸವನ್ನು 2-3 ದಿನಗಳ ಕಾಲ ನಡೆಸುವ ಸಾಧ್ಯತೆ ಇದೆ. ಈ ಬಗ್ಗೆ ಸುಳಿವು ಪಡೆದುಕೊಂಡಿರುವ ಜೆಡಿಎಸ್‌ನ ಸಚಿವರು ತಮ್ಮ ಕಾರ್ಯವೈಖರಿಯನ್ನು ಬದಲಿಸಿಕೊಂಡಿದ್ದಾರೆ. ಜಿಲ್ಲಾ ಪ್ರವಾಸ ಕೈಗೊಳ್ಳುವುದು ಮಾತ್ರವಲ್ಲದೇ, ಆಡಳಿತದಲ್ಲಿ ಚುರುಕುಗೊಳಿಸಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.

ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ರಾಜಕೀಯ ಏಳು-ಬೀಳುಗಳ ನಡುವೆ ಜನಪರ ಯೋಜನೆಗಳನ್ನು ಮುಂದುಡುತ್ತಿರುವ ಪ್ರಯತ್ನವನ್ನು ಕುಮಾರಸ್ವಾಮಿ ಮಾಡುತ್ತಿದ್ದಾರೆ. ರೈತರ ಸಾಲ ಮನ್ನಾ ಮಾಡುವ ಮೂಲಕ ದಿಟ್ಟಹೆಜ್ಜೆ ಕ್ರಮ ಕೈಗೊಂಡಿದ್ದಾರೆ. ಪ್ರತಿಪಕ್ಷ ಬಿಜೆಪಿಯ ಟೀಕಾಪ್ರಹಾರ, ಆಡಳಿತಾರೂಢ ಕಾಂಗ್ರೆಸ್‌, ಜೆಡಿಎಸ್‌ ಪಕ್ಷದ ನಡುವಿನ ಅಸಮಾಧಾನದ ನಡುವೆಯೂ ಸರ್ಕಾರವನ್ನು ನಡೆಸಲಾಗುತ್ತಿದೆ.

ಕುಮಾರಸ್ವಾಮಿ ಅವರು ಪ್ರತಿ ಹೆಜ್ಜೆಯನ್ನು ಎಚ್ಚರಿಕೆಯಿಂದ ಇಡುತ್ತಿದ್ದಾರೆ. ಆದರೆ, ತಮ್ಮದೇ ಪಕ್ಷದ ಸಚಿವರ ಕಾರ್ಯವೈಖರಿ ಬಗ್ಗೆ ಕೆಲವೆಡೆ ಅಸಮಾಧಾನ ಕಂಡುಬರುತ್ತಿದೆ. ಈ ಬಗ್ಗೆ ಮಾಹಿತಿ ಪಡೆದ ಕುಮಾರಸ್ವಾಮಿ ಮೌಲ್ಯಮಾಪನಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ.

ಮುಂದಿನ ದಿನದಲ್ಲಿ ಸಚಿವಸಂಪುಟ ಪುನಾರಚನೆಗೆ ಸಚಿವರ ಕಾರ್ಯವೈಖರಿ ಸಹಕಾರಿಯಾಗಲಿದೆ. ತಮಗೆ ವಹಿಸಿರುವ ಖಾತೆಗಳ ನಿರ್ವಹಣೆ ಮಾಡುವಲ್ಲಿ ವಿಫಲವಾಗಿರುವ ಸಚಿವರನ್ನು ಸಚಿವ ಸಂಪುಟದ ಪುನಾರಚನೆ ವೇಳೆ ಕೈ ಬಿಡುವ ಆಲೋಚನೆ ಹೊಂದಿದ್ದಾರೆ ಎಂದು ತಿಳಿದು ಬಂದಿದೆ.
 

Follow Us:
Download App:
  • android
  • ios