ಬೆಂಗಳೂರು (ಜೂ. 28): ಪರಿಶಿಷ್ಟ ಪಂಗಡಕ್ಕೆ ಶೇ.7.5 ಮೀಸಲಾತಿ ನೀಡುವಂತೆ ಒತ್ತಾಯಿಸಿ 4 ದಿನಗಳ ಹಿಂದೆ ವಾಲ್ಮೀಕಿ ಸಮುದಾಯ ತೀವ್ರ ಸ್ವರೂಪದ ಹೋರಾಟ ನಡೆಸಿದ ಕುರಿತು ಸಂಪುಟ ಸಭೆಯಲ್ಲಿ ಗಂಭೀರವಾಗಿ ಚರ್ಚೆ ನಡೆದಿದ್ದು, ಮೀಸಲಾತಿಯ ಸಾಧಕ-ಬಾಧಕ ಕುರಿತು ಪರಿಶೀಲನೆ ನಡೆಸಲು ಸಮಿತಿ ರಚಿಸಬೇಕೋ ಅಥವಾ ಆಯೋಗ ರಚಿಸಬೇಕೋ ಎಂಬುದರ ಬಗ್ಗೆ ಮಾರ್ಗೋಪಾಯಗಳನ್ನು ತಿಳಿಸುವಂತೆ ಮುಖ್ಯ ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಲಾಗಿದೆ.

ಮುಂದಿನ ಸಚಿವ ಸಂಪುಟ ಸಭೆ ವೇಳೆಗೆ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್‌ ಅವರು ವರದಿ ರೂಪದಲ್ಲಿ ಮಾರ್ಗೋಪಾಯಗಳನ್ನು ಸಿದ್ಧಪಡಿಸಿ ಮಂಡಿಸಲಿದ್ದಾರೆ.

ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ಶುಕ್ರವಾರ ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಸಚಿವ ಸತೀಶ್‌ ಜಾರಕಿಹೊಳಿ ಅವರು ಪರಿಶಿಷ್ಟಪಂಗಡಕ್ಕೆ ಮೀಸಲಾತಿ ವಿಚಾರವನ್ನು ಪ್ರಸ್ತಾಪಿಸಿದ್ದರಿಂದ ಗಂಭೀರ ಚರ್ಚೆ ನಡೆಯಿತು.

ಮೀಸಲಾತಿ ಕುರಿತು ಸಾಧಕ-ಬಾಧಕಗಳ ಬಗ್ಗೆ ಅಧ್ಯಯನ ನಡೆಸಿ ವರದಿ ಸಲ್ಲಿಸುವ ಸಂಬಂಧ ಸಮಿತಿ ರಚನೆ ಮಾಡಬೇಕೋ ಅಥವಾ ಆಯೋಗ ರಚಿಸಬೇಕೋ ಎಂಬುದರ ಬಗ್ಗೆ ಸಮಾಲೋಚನೆ ನಡೆಸಲಾಯಿತು. ಬಳಿಕ ಯಾವುದು ಸೂಕ್ತ ಎಂಬುದರ ಬಗ್ಗೆ ಸಲಹೆ ನೀಡುವಂತೆ ಮುಖ್ಯಕಾರ್ಯದರ್ಶಿಗಳಿಗೆ ಸೂಚಿಸಲಾಯಿತು.

ಮೀಸಲಾತಿ ಪ್ರಮಾಣ ಶೇ.50ರ ಮಿತಿ ದಾಟಬಾರದು ಎಂದು ಸುಪ್ರೀಂಕೋರ್ಟ್‌ ನಿರ್ದೇಶನ ಇದೆ. ಮಹಾರಾಷ್ಟ್ರ ಸರ್ಕಾರವು ಶೇ.50ರ ಗಡಿ ಮೀರಿ ಮೀಸಲಾತಿ ಹೆಚ್ಚಿಸಿ ನಿರ್ಧಾರ ಕೈಗೊಂಡಿರುವ ಬಗ್ಗೆ ಚರ್ಚಿಸಲಾಯಿತು.

ಹೀಗಾಗಿ ಸುಪ್ರೀಂಕೋರ್ಟ್‌ ನಿರ್ದೇಶನದಂತೆ ಶೇ.50ರ ಮಿತಿಯೊಳಗೆ ಮೀಸಲಾತಿ ನೀಡುವುದೋ ಅಥವಾ ಅದನ್ನು ಮೀರಿ ಮೀಸಲಾತಿ ನೀಡಬಹುದೋ ಎಂಬ ವಿಚಾರಗಳ ಕುರಿತು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಮಾಹಿತಿ ಒದಗಿಸುವಂತೆ ತಿಳಿಸಲಾಯಿತು.