ಪ್ರಸಕ್ತ ವರ್ಷದ ಆಡಳಿತ ನಿರ್ವಹಣೆ ಸೂಚ್ಯಂಕ ಸಮೀಕ್ಷೆಯ ವಾರ್ಷಿಕ ವರದಿಯ ಎರಡನೇ ಆವೃತ್ತಿಯನ್ನು ಶುಕ್ರವಾರ ಪಿಎಸಿ ಅಧ್ಯಕ್ಷರೂ ಆಗಿರುವ ಸುಪ್ರಿಂಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್‌. ವೆಂಕಟಾಚಲಯ್ಯ ಬಿಡುಗಡೆಗೊಳಿಸಿದ್ದಾರೆ. ಸಂಸ್ಥೆಯು ಪರಿಗಣಿಸುವ 11 ಮಾನದಂಡಗಳ ಪೈಕಿ 10 ಮಾನದಂಡಗಳಲ್ಲಿ ಉತ್ತಮ ಅಂಕ ಗಳಿಸಿರುವ ಕರ್ನಾಟಕ, ನ್ಯಾಯದಾನದಲ್ಲಿ ವಿಫಲಗೊಂಡು ದೊಡ್ಡ ರಾಜ್ಯಗಳ ಪೈಕಿ 11ನೇ ಸ್ಥಾನ ಹಾಗೂ ಒಟ್ಟಾರೆ ನ್ಯಾಯದಾನದಲ್ಲಿ 18ನೇ ಸ್ಥಾನ ಪಡೆದುಕೊಂಡಿದೆ.

ಬೆಂಗಳೂರು(ಮೇ.14): ದೇಶದ ಉತ್ತಮ ಆಡಳಿತ ನಡೆಸುವ ರಾಜ್ಯಗಳ ಸೂಚ್ಯಂಕ ಪಟ್ಟಿಯಲ್ಲಿ ಕರ್ನಾಟಕ ಕಳೆದ ಬಾರಿ ಗಳಿಸಿದ್ದ ಮೂರನೇ ಸ್ಥಾನದಿಂದ ಈ ಬಾರಿ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ ಎಂದು ಪಬ್ಲಿಕ್‌ ಅಫೇ​ರ್‍ಸ್ ಸೆಂಟರ್‌ (ಪಿಎಸಿ) ಸರ್ಕಾರೇತರ ಸಂಸ್ಥೆ ತನ್ನ ಸಮೀಕ್ಷೆಯಲ್ಲಿ ತಿಳಿಸಿದೆ.

ಪ್ರಸಕ್ತ ವರ್ಷದ ಆಡಳಿತ ನಿರ್ವಹಣೆ ಸೂಚ್ಯಂಕ ಸಮೀಕ್ಷೆಯ ವಾರ್ಷಿಕ ವರದಿಯ ಎರಡನೇ ಆವೃತ್ತಿಯನ್ನು ಶುಕ್ರವಾರ ಪಿಎಸಿ ಅಧ್ಯಕ್ಷರೂ ಆಗಿರುವ ಸುಪ್ರಿಂಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್‌. ವೆಂಕಟಾಚಲಯ್ಯ ಬಿಡುಗಡೆಗೊಳಿಸಿದ್ದಾರೆ. 
ಸಂಸ್ಥೆಯು ಪರಿಗಣಿಸುವ 11 ಮಾನದಂಡಗಳ ಪೈಕಿ 10 ಮಾನದಂಡಗಳಲ್ಲಿ ಉತ್ತಮ ಅಂಕ ಗಳಿಸಿರುವ ಕರ್ನಾಟಕ, ನ್ಯಾಯದಾನದಲ್ಲಿ ವಿಫಲಗೊಂಡು ದೊಡ್ಡ ರಾಜ್ಯಗಳ ಪೈಕಿ 11ನೇ ಸ್ಥಾನ ಹಾಗೂ ಒಟ್ಟಾರೆ ನ್ಯಾಯದಾನದಲ್ಲಿ 18ನೇ ಸ್ಥಾನ ಪಡೆದುಕೊಂಡಿದೆ.
ಹೈಕೋರ್ಟ್‌ ಮತ್ತು ಜಿಲ್ಲಾ ನ್ಯಾಯಾಲಯಗಳಲ್ಲಿ ಬಾಕಿ ಉಳಿದಿರುವ ಪ್ರಕರಣಗಳು, ಜಿಲ್ಲಾ ಮತ್ತು ನ್ಯಾಮಂಡಳಿಗಳಲ್ಲಿ ಖಾಲಿ ಇರುವ ನ್ಯಾಯಾಂಗದ ಮುಖ್ಯಸ್ಥರ ಹುದ್ದೆಗಳು ಮತ್ತು ಬಾಕಿ ಇರುವ ಪ್ರಕರಣಗಳ ಸಂಖ್ಯೆಯನ್ನು ಪಿಎಸಿ ಪರಿಗಣಿಸಿದೆ. 
ಉತ್ತಮ ಆಡಳಿತ ನಿರ್ವಹಣೆಯಲ್ಲಿ ದೊಡ್ಡ ರಾಜ್ಯಗಳ ಪೈಕಿ ಕೇರಳ ಮೊದಲ ಸ್ಥಾನವನ್ನು ಸತತವಾಗಿ ಉಳಿಸಿಕೊಂಡಿದ್ದರೆ, ತಮಿಳುನಾಡು ನಂತರದ ಸ್ಥಾನ ಕಾಯ್ದುಕೊಂಡಿದೆ. ಗುಜರಾತ್‌ ರಾಜ್ಯ ಕಳೆದ ಬಾರಿಗಿಂತ ಎರಡು ಸ್ಥಾನ ಮೇಲಕ್ಕೇರಿ 3ನೇ ಸ್ಥಾನಕ್ಕೆ ತನ್ನ ಗುಣಮಟ್ಟವೃದ್ಧಿಸಿಕೊಂಡಿದೆ.
ಆರ್ಥಿಕ ನಿರ್ವಹಣೆಯಲ್ಲಿ ಕಳಪೆ ಸಾಧನೆ ತೋರಿರುವ ಕರ್ನಾಟಕ, ದೊಡ್ಡ ರಾಜ್ಯಗಳ ಪೈಕಿ 10ನೇ ಸ್ಥಾನಕ್ಕೆ, ಒಟ್ಟಾರೆ 16ನೇ ಸ್ಥಾನಕ್ಕೆ ತೃಪ್ತಿಪಟ್ಟಿದೆ. ಆದರೆ ಆರ್ಥಿಕ ನಿರ್ವಹಣೆ ಪ್ರಕಾರದಲ್ಲಿ 2016ರಲ್ಲಿ 18ನೇ ಸ್ಥಾನ ಪಡೆದಿದ್ದ ರಾಜ್ಯ ಈ ಬಾರಿ ಎರಡು ರ‌್ಯಾಂಕ್ ಮೇಲಕ್ಕೇರಿದೆ.
ಕರ್ನಾಟಕವು ಪರಿಸರ ರಕ್ಷಣೆ, ಪಾರದರ್ಶಕತೆ ಮತ್ತು ಮಹಿಳಾ-ಮಕ್ಕಳ ಅಭಿವೃದ್ಧಿ ಸಂಬಂಧಿ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಉತ್ತಮ ಅಂಕ ಗಳಿಸುವ ಮೂಲಕ ಕಳೆದ ಬಾರಿಯಂತೆ ಒಟ್ಟಾರೆ ರ‌್ಯಾಂಕಿಂಗ್'ನಲ್ಲಿ ಸಮತೋಲನ ಕಾಯ್ದುಕೊಂಡಿದೆ. 
ಪರಿಸರ ಮತ್ತು ಪಾರದರ್ಶಕತೆ ಹಾಗೂ ಉತ್ತರದಾಯಿತ್ವ ವಿಚಾರದಲ್ಲಿ ದೇಶದಲ್ಲೇ ಎರಡನೇ ರ‌್ಯಾಂಕ್ ಗಳಿಸಿದ್ದರೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಮೂರನೇ ರ‌್ಯಾಂಕ್ ಪಡೆದಿದೆ. ಆದರೆ ಸಾರಿಗೆ, ವಿದ್ಯುತ್‌, ನೀರು ಮತ್ತು ವಸತಿ ವಿಚಾರಗಳಲ್ಲಿ ಪರಿಣಾಮಕಾರಿ ಆಡಳಿತ ನೀಡುವಲ್ಲಿ ಇನ್ನೂ ಸಾಕಷ್ಟುಸುಧಾರಣೆಗಳನ್ನು ತರಬೇಕಿದೆ ಎಂಬುದನ್ನು ವರದಿ ಉಲ್ಲೇಖಿಸಿದೆ.
ದೇಶದ ದೊಡ್ಡ ರಾಜ್ಯಗಳ ಪೈಕಿ ಕೇರಳ ಸತತ ಎರಡನೇ ಬಾರಿಗೆ ಮೊದಲ ರ‌್ಯಾಂಕ್ ಗಿಟ್ಟಿಸಿಕೊಂಡಿದೆ. ಬಿಹಾರ ಉತ್ತಮ ಆಡಳಿತ ನಿರ್ವಹಣೆ ರಾಜ್ಯಗಳ ಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ಕುಸಿದಿದೆ. ಸಮೀಕ್ಷೆಯನ್ನು ಆಯಾ ರಾಜ್ಯಗಳ ಜನಸಂಖ್ಯೆ ಆಧರಿಸಿ ನಡೆಸಲಾಗಿತ್ತು. ತಲಾ 2 ಕೋಟಿಗಿಂತ ಹೆಚ್ಚು ಜನಸಂಖ್ಯೆ ಹೊಂದಿರುವ 18 ರಾಜ್ಯಗಳನ್ನು ದೊಡ್ಡ ರಾಜ್ಯಗಳೆಂದೂ, ಅದಕ್ಕಿಂತ ಕಡಿಮೆ ಜನಸಂಖ್ಯೆ ಇರುವ 12 ರಾಜ್ಯಗಳನ್ನು ಸಣ್ಣ ರಾಜ್ಯಗಳೆಂದೂ ವಿಂಗಡಿಸಲಾಗಿತ್ತು. 
ದೇಶದ 12 ಸಣ್ಣ ರಾಜ್ಯಗಳ ಪೈಕಿ, ಹಿಮಾಚಲ ಪ್ರದೇಶ ಮೊದಲ ರ‌್ಯಾಂಕ್, ಗೋವಾ, ಮಿಜೋರಂ ಹಾಗೂ ಸಿಕ್ಕಿಂ ರಾಜ್ಯಗಳು ಕ್ರಮವಾಗಿ ನಂತರದ ರ‌್ಯಾಂಕ್ ಪಡೆದಿವೆ. ದೆಹಲಿ ಸಣ್ಣ ರಾಜ್ಯಗಳ ಪಟ್ಟಿಯಲ್ಲಿ 9ನೇ ರ‌್ಯಾಂಕ್ ಹಾಗೂ ಒಟ್ಟಾರೆ ರಾಜ್ಯಗಳ ಪಟ್ಟಿಯಲ್ಲಿ 22ನೇ ಸ್ಥಾನ ಪಡೆದಿದೆ. ಆದರೆ ದೆಹಲಿ 2016ರಲ್ಲಿ 9ನೇ ಸ್ಥಾನದಲ್ಲಿತ್ತು.
ಅಸಮಾನತೆ ವಿಚಾರದಲ್ಲಿ ಕರ್ನಾಟಕ ಏಳನೇ ರ‌್ಯಾಂಕ್ ಪಡೆದಿದ್ದರೆ, ಕೇರಳ ಮತ್ತು ಸಿಕ್ಕಿಂ ರಾಜ್ಯಗಳು ಕ್ರಮವಾಗಿ ದೊಡ್ಡ ಮತ್ತು ಸಣ್ಣ ರಾಜ್ಯಗಳ ವಿಭಾಗದಲ್ಲಿ ಮೊದಲ ಸ್ಥಾನ ಪಡೆದಿವೆ.

(ಕನ್ನಡಪ್ರಭ ವಾರ್ತೆ)