ಬೆಂಗಳೂರು[ಆ.31]: ಮಾಜಿ ಸಚಿವ ಎಚ್‌.ಡಿ. ರೇವಣ್ಣ ಅವರಿಗೆ ಕೆಎಂಎಫ್‌ ಅಧ್ಯಕ್ಷಗಿರಿ ಸಿಗದಂತೆ ಮಾಡುವಲ್ಲಿ ಬಹುತೇಕ ಯಶಸ್ವಿಯಾಗಿರುವ ರಾಜ್ಯದ ಬಿಜೆಪಿ ಸರ್ಕಾರ ಇದೀಗ ಮತ್ತೊಂದು ಶಾಕ್‌ ನೀಡಲು ಮುಂದಾಗಿದೆ.

ಹಮೂಲ್‌ನಿಂದ ಚಿಕ್ಕಮಗಳೂರು ಔಟ್?

ರೇವಣ್ಣ ಅವರ ಬಿಗಿ ಹಿಡಿತವಿರುವ ಹಾಸನ ಹಾಲು ಒಕ್ಕೂಟದಿಂದ (ಹಮೂಲ್‌) ಚಿಕ್ಕಮಗಳೂರನ್ನು ವಿಭಜಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದ್ದು, ಅಗತ್ಯ ಕ್ರಮ ಕೈಗೊಳ್ಳುವಂತೆ ಅದೇ ಜಿಲ್ಲೆಯವರಾದ ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಅವರಿಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸೂಚನೆ ನೀಡಿದ್ದಾರೆ. ಶುಕ್ರವಾರ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಚಿಕ್ಕಮಗಳೂರು ಜಿಲ್ಲೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಭೆಯಲ್ಲಿ ಹಾಸನ ಒಕ್ಕೂಟದಿಂದ ಚಿಕ್ಕಮಗಳೂರನ್ನು ಪ್ರತ್ಯೇಕಗೊಳಿಸುವ ಕುರಿತು ನಿರ್ಣಯ ಕೈಗೊಳ್ಳುವಂತೆ ಸೂಚಿಸಲಾಗಿದೆ.

ಹಿಂದಿನಿಂದಲೂ ಹಾಸನ ಹಾಲು ಒಕ್ಕೂಟದಿಂದ ಚಿಕ್ಕಮಗಳೂರನ್ನು ಬೇರ್ಪಡಿಸುವಂತೆ ಬೇಡಿಕೆ ಕೇಳಿ ಬಂದಿತ್ತು. ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲೂ ಇದೇ ಸಿ.ಟಿ.ರವಿ ಅವರು ಸಾಕಷ್ಟುಪ್ರಯತ್ನಪಟ್ಟರೂ ಸಾಧ್ಯವಾಗಿರಲಿಲ್ಲ. ಈಗ ಕಾಲ ಕೂಡಿ ಬಂದಿದ್ದು, ಹಮೂಲ್‌ ಆಡಳಿತ ಮಂಡಳಿ ಸಭೆಯಲ್ಲಿ ಈ ಕುರಿತು ನಿರ್ಣಯ ಕೈಗೊಳ್ಳಬೇಕಿದೆ. ಆ ನಂತರ ಚಿಕ್ಕಮಗಳೂರಲ್ಲಿ ನೂತನ ಒಕ್ಕೂಟ ಪ್ರಾರಂಭಿಸಲು ಸರ್ಕಾರ ಅಗತ್ಯ ನೆರವು ನೀಡಲಿದೆ. ಪ್ರತ್ಯೇಕ ಒಕ್ಕೂಟ ಸ್ಥಾಪನೆಗಾಗಿ 30 ಎಕರೆ ಜಾಗ ನೀಡಲು ಸರ್ಕಾರ ಒಪ್ಪಿಕೊಂಡಿದೆ.

ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಗಳು ಒಟ್ಟು ಸೇರಿ ಒಂದೇ ಹಾಲು ಒಕ್ಕೂಟ ರಚನೆ ಮಾಡಲಾಗಿದೆ. ಈ ಒಕ್ಕೂಟದಲ್ಲಿ ರೇವಣ್ಣ ಪ್ರಭಾವ ಹೊಂದಿದ್ದಾರೆ. ಅತಿ ಹೆಚ್ಚು ಲಾಭವನ್ನು ಈ ಹಾಸನ ಹಾಲು ಒಕ್ಕೂಟ(ಹಮೂಲ್‌) ತರುತ್ತಿರುವ ಹಿನ್ನೆಲೆಯಲ್ಲಿಯೇ ಈ ಹಿಂದಿನ ಮೈತ್ರಿ ಸರ್ಕಾರ ಹಾಸನದಲ್ಲಿ ಮೆಗಾ ಡೈರಿ ಸ್ಥಾಪಿಸಲು 500 ಕೋಟಿ ರು.ಗಳ ಅನುದಾನವನ್ನು ಮೀಸಲು ಇಟ್ಟಿತ್ತು. ಇದೀಗ ಚಿಕ್ಕಮಗಳೂರನ್ನು ಹಾಸನ ಹಾಲು ಒಕ್ಕೂಟದಿಂದ ವಿಭಜಿಸಿ ರೇವಣ್ಣ ಅವರ ವರ್ಚಸ್ಸನ್ನು ತಗ್ಗಿಸುವ ಪ್ರಯತ್ನಕ್ಕೆ ಬಿಜೆಪಿ ಮುಂದಾಗಿದೆ.

ಹಾಸನದಲ್ಲಿ ಜೆಡಿಎಸ್‌ ಪ್ರಭಾವ ಕುಸಿಯುಂತೆ ಮಾಡುವ ಯೋಜನೆ ಬಿಜೆಪಿಯದ್ದು ಎನ್ನಲಾಗಿದೆ. ಸಭೆಯಲ್ಲಿ ಸಚಿವ ಸಿ.ಟಿ.ರವಿ, ಲೋಕಸಭಾ ಸದಸ್ಯೆ ಶೋಭಾ ಕರಂದ್ಲಾಜೆ ಮತ್ತಿತರರು ಪಾಲ್ಗೊಂಡಿದ್ದರು.

ಹಾಸನ ಹಾಲು ಒಕ್ಕೂಟದಿಂದ ಚಿಕ್ಕಮಗಳೂರನ್ನು ವಿಭಜಿಸಿ ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪಿಸಬೇಕು ಎಂಬುದು ದಶಕದ ಬೇಡಿಕೆ. ಈಗ ಮುಖ್ಯಮಂತ್ರಿ ಯಡಿಯೂರಪ್ಪ ಒಪ್ಪಿಕೊಂಡಿದ್ದಾರೆ. ಇದರಿಂದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಹಾಲಿನ ಉತ್ಪಾದನೆ ಹೆಚ್ಚಾಗುವುದಕ್ಕೆ ಅನುಕೂಲವಾಗಲಿದೆ.

-ಸಿ.ಟಿ.ರವಿ, ಪ್ರವಾಸೋದ್ಯಮ ಸಚಿವ

ರೇವಣ್ಣನಿಗಿಲ್ಲ KMF ಬಾಸ್ ಪಟ್ಟ?

ಕೆಎಂಎಫ್‌ನಲ್ಲಿನ 19 ನಿರ್ದೇಶಕರ ಪೈಕಿ ತಾವು ಸೇರಿದಂತೆ 12 ಮಂದಿಯ ಬೆಂಬಲ ಪಡೆದಿರುವ ಜಾರಕಿಹೊಳಿ ಅವರ ವಿರುದ್ಧ ಎಚ್‌.ಡಿ. ರೇವಣ್ಣ ಅವರು ಕಣದಲ್ಲಿದ್ದಾರೆ. ಆದರೆ, ರೇವಣ್ಣ ಅವರಿಗೆ ಎರಡಕ್ಕಿಂತ ಹೆಚ್ಚಿನ ಸದಸ್ಯರ ಬೆಂಬಲವಿದ್ದಂತೆ ಕಂಡು ಬರುತ್ತಿಲ್ಲ. ಹುದ್ದೆಯ ಆಕಾಂಕ್ಷಿಯಾಗಿದ್ದ ಮತ್ತೊಬ್ಬ ನಿರ್ದೇಶಕ ಭೀಮಾ ನಾಯ್‌್ಕ ಸಹ ಪರೋಕ್ಷವಾಗಿ ಬಾಲಚಂದ್ರ ಜಾರಕಿಹೊಳಿ ಅವರ ಬೆಂಬಲಕ್ಕೆ ನಿಂತಿರುವುದರಿಂದ ಜಾರಕಿಹೊಳಿ ಅವರ ಗೆಲುವು ನಿಶ್ಚಿತ ಎಂದೇ ಹೇಳಲಾಗುತ್ತಿದೆ. ಯಾವುದೇ ನಿರ್ದೇಶಕರ ಬೆಂಬಲವಿಲ್ಲದ ಕಾರಣ ಎಚ್‌.ಡಿ.ರೇವಣ್ಣ ಅವರು ಸೋಲುವುದಕ್ಕಿಂತ ಸ್ಪರ್ಧೆಯಿಂದ ಹಿಂದಕ್ಕೆ ಸರಿಯುವುದೇ ಲೇಸು ಎಂದು ತೀರ್ಮಾನಿಸಿದ್ದಾರೆ ಎಂದೂ ಹೇಳಲಾಗುತ್ತಿದೆ. ಹೀಗೇನಾದರೂ ಆದರೆ ಜಾರಕಿಹೊಳಿ ಅವರು ಅವಿರೋಧವಾಗಿ ಆಯ್ಕೆಯಾಗುವ ಸಂಭವವಿದೆ.