ಬೆಂಗಳೂರು[ಆ.31]: ‘ರಾಜ್ಯಕ್ಕೆ ಪ್ರತ್ಯೇಕ ನಾಡ ಧ್ವಜ ಅಗತ್ಯವಿಲ್ಲ’ ಎಂಬ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ. ರವಿ ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದು, ಬಿಜೆಪಿ ಸರ್ಕಾರ ಕನ್ನಡ ವಿರೋಧಿ ಧೋರಣೆ ಅನುಸರಿಸುತ್ತಿದೆ ಎಂದು ಕಿಡಿಕಾರಿದ್ದಾರೆ.

ಈ ಬಗ್ಗೆ ಶುಕ್ರವಾರ ಸರಣಿ ಟ್ವೀಟ್‌ ಮಾಡಿರುವ ಅವರು, ‘ಸಿ.ಟಿ. ರವಿಯವರೇ, ನಾಡ ಧ್ವಜ ಅಗತ್ಯವಿಲ್ಲ ಎಂದು ಹೇಳಿ ಕನ್ನಡಿಗರನ್ನು ಕೆರಳಿಸುವುದು ಸರಿಯಲ್ಲ. ಮಾಡಬೇಕಾಗಿರುವ ಕೆಲಸ ಬಿಟ್ಟು ಅನಗತ್ಯ ವಿವಾದ ಸೃಷ್ಟಿಸಲು ಹೊರಟಿದ್ದೀರಿ. ಕೂಡಲೇ ನಿಮ್ಮ ಅಭಿಪ್ರಾಯ ಹಿಂಪಡೆದು ನಾಡಧ್ವಜವನ್ನು ಒಪ್ಪಿಕೊಳ್ಳಬೇಕು’ ಆಗ್ರಹಿಸಿದ್ದಾರೆ.

ರಾಜ್ಯಕ್ಕೆ ಪ್ರತ್ಯೇಕ ಕನ್ನಡ ಧ್ವಜ ಬೇಡ: ಸಿ. ಟಿ. ರವಿ

ನಾಡ ಧ್ವಜದಿಂದ ರಾಷ್ಟ್ರ ಧ್ವಜಕ್ಕೆ ಅವಮಾನ ಆಗುತ್ತದೆ ಎಂದು ಬಿಂಬಿಸುತ್ತಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಅವರು, ‘ನಾವು ನಮ್ಮ ರಾಜ್ಯಕ್ಕೊಂದು ನಾಡಗೀತೆಯನ್ನು ಒಪ್ಪಿಕೊಂಡಿದ್ದೇವೆ. ಇದರಿಂದ ರಾಷ್ಟ್ರಗೀತೆಗೆ ಅವಮಾನ ಮಾಡಿದಂತಾಗುತ್ತದೆಯೇ? ಎಂದು ಪ್ರಶ್ನಿಸಿದ್ದಾರೆ.

ರಾಷ್ಟ್ರಧ್ವಜದ ಕೆಳಗೆ ಬೇರೆ ಧ್ವಜ ಹಾರಿಸಬೇಕೆಂದು ರಾಷ್ಟ್ರಧ್ವಜ ಸಂಹಿತೆ ಹೇಳಿದೆ. ಅದನ್ನು ಪಾಲಿಸಬೇಕಿರುವುದು ನಮ್ಮೆಲ್ಲರ ಕರ್ತವ್ಯ. ಬೇರೇನು ಸಮಸ್ಯೆ ಇದೆ? ವಿನಾಕಾರಣ ನಾಡ ಧ್ವಜವನ್ನು ಏಕೆ ವಿರೋಧಿಸಲಾಗುತ್ತಿದೆ. ನಾವು ಪ್ರತ್ಯೇಕ ಧ್ವಜ ಕೇಳುತ್ತಿಲ್ಲ. ರಾಜ್ಯಗಳು ತಮ್ಮದೇ ಆದ ಧ್ವಜ ಹೊಂದಲು ಸಂವಿಧಾನ ಅಥವಾ ಕಾನೂನಿನಲ್ಲಿ ಯಾವ ಅಡ್ಡಿಯೂ ಇಲ್ಲ. ಹೀಗಾಗಿ ವಿನಾಕಾರಣ ಕನ್ನಡ ನಾಡಿಗೆ ನಾಡ ಧ್ವಜ ಹೊಂದುವುದನ್ನು ವಿರೋಧಿಸುತ್ತಿರುವ ಬಿಜೆಪಿ ಸರ್ಕಾರದ ನಿಲುವು ಸ್ಪಷ್ಟವಾಗಿ ಕನ್ನಡ ವಿರೋಧಿಯಾದದ್ದು ಎಂದು ಕಿಡಿಕಾರಿದರು.

ನಾಡೋಜ ಪಾಟೀಲ ಪುಟ್ಟಪ್ಪ ಸೇರಿದಂತೆ ಹಲವು ಕನ್ನಡಪರ ಹೋರಾಟಗಾರರು ರಾಜ್ಯಕ್ಕೆ ಪ್ರತ್ಯೇಕ ಧ್ವಜ ಬೇಕು ಎಂದು ಮನವಿ ಮಾಡಿದ್ದರು. ಇದರ ಆಧಾರದ ಮೇಲೆ ನಾಡ ಧ್ವಜ ವಿನ್ಯಾಸ ಮಾಡಲು ತಜ್ಞರ ಸಮಿತಿ ರಚಿಸಲಾಗಿತ್ತು. ತಜ್ಞರ ಸಮಿತಿ ವಿನ್ಯಾಸಗೊಳಿಸಿದ್ದ ನಾಡಧ್ವಜಕ್ಕೆ ಮನ್ನಣೆ ನೀಡಬೇಕೆಂದು ಕೇಂದ್ರ ಸರ್ಕಾರವನ್ನು ಕೋರಿದ್ದೆವು. ಇದೀಗ ನಾಡ ಧ್ವಜ ಅಗತ್ಯವಿಲ್ಲ ಎಂದು ಹೇಳುವ ಮೂಲಕ ಸಚಿವರು ಅನಗತ್ಯ ವಿವಾದ ಸೃಷ್ಟಿಸಲು ಹೊರಟಿದ್ದಾರೆ ಎಂದು ಹೇಳಿದರು.