ಬೆಂಗಳೂರು[ಆ.30]: ಧ್ವಜ ಸಮಿತಿ ಪ್ರಕಾರ ದೇಶಕ್ಕೆ ಒಂದೇ ಧ್ವಜ ಇರಬೇಕಾಗುತ್ತದೆ. ಸಂವಿಧಾನಾತ್ಮಕವಾಗಿ ಒಂದು ರಾಜ್ಯ ಪ್ರತ್ಯೇಕ ಧ್ವಜ ಹೊಂದಲು ಸಾಧ್ಯವಿಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ ಸ್ಪಷ್ಟವಾಗಿ ಹೇಳಿದ್ದಾರೆ.

ಗುರುವಾರ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಹಿಂದಿನ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ರಾಜ್ಯಕ್ಕೆ ಪ್ರತ್ಯೇಕ ಧ್ವಜ ಕುರಿತು ಕೇಂದ್ರಕ್ಕೆ ಸಲ್ಲಿಸಿದ ಪ್ರಸ್ತಾವನೆ ಬಗ್ಗೆ ಪ್ರತಿಕ್ರಿಯಿಸಿದರು. ಸಾಂಸ್ಕೃತಿಕ ಸಂಕೇತವಾಗಿ ಕನ್ನಡ ಧ್ವಜವನ್ನು ಇಟ್ಟುಕೊಳ್ಳಬಹುದು. ಸಂಘ-ಸಂಸ್ಥೆಗಳು ಪ್ರತ್ಯೇಕ ಧ್ವಜ ಹೊಂದಬಹುದು. ಆದರೆ, ಸಂವಿಧಾನಾತ್ಮಕವಾಗಿ ರಾಜ್ಯ ಪ್ರತ್ಯೇಕ ಧ್ವಜ ಹೊಂದಲು ಸಾಧ್ಯವಿಲ್ಲ. ಒಂದೇ ಧ್ವಜ ಇರಬೇಕು ಎಂಬುದು ನನ್ನ ವೈಯಕ್ತಿಕ ನಿಲುವು ಕೂಡಾ ಹೌದು ಎಂದು ತಿಳಿಸಿದರು.

ಕರ್ನಾಟಕಕ್ಕೆ ಪ್ರತ್ಯೇಕ ಧ್ವಜ ಬೇಕೆಂದು ನಾಡಿನ ವಿವಿಧ ಕನ್ನಡಪರ ಸಂಘಟನೆಗಳು, ಸಾಹಿತಿಗಳು ರಾಜ್ಯ ಸರ್ಕಾರದ ಮೇಲೆ ಒತ್ತಡ ತಂದ ಸಂದರ್ಭದಲ್ಲಿ ರಾಜ್ಯದಲ್ಲಿ ಹೆಚ್ಚು ಬಳಕೆಯಲ್ಲಿದ್ದ ಹಳದಿ ಮತ್ತು ಕೆಂಪು ಬಣ್ಣದ ಧ್ವಜವನ್ನೇ ರಾಜ್ಯದ ಧ್ವಜವನ್ನಾಗಿ ಅಂಗೀಕರಿಸಲು ಮುಂದಾಯಿತು. ಈ ಮಧ್ಯೆ ಹಳದಿ ಮತ್ತು ಕೆಂಪು ಬಣ್ಣದ ಧ್ವಜ ತಮ್ಮ ಸಂಘಟನೆಗೆ ಸೇರಿದೆ ಎಂದು ಕನ್ನಡಪರ ಸಂಘಟನೆಯೊಂದು ಹೈಕೋರ್ಟ್‌ ಮೆಟ್ಟಿಲು ಏರಿತು.

ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹಳದಿ, ಬಿಳಿ ಮತ್ತು ಕೆಂಪು ಬಣ್ಣದ ನಡುವೆ ಗಂಡ ಭೇರುಂಡ ಇರುವ ಚಿಹ್ನೆ ಹಾಗೂ ಸತ್ಯಮೇವ ಜಯತೆ ವಾಕ್ಯವಿರುವ ಧ್ವಜವನ್ನು ರಾಜ್ಯದ ಧ್ವಜವನ್ನಾಗಿ ಅಂಗೀಕರಿಸಿ ಅನುಮತಿ ನೀಡುವಂತೆ ಕೇಂದ್ರಕ್ಕೆ ಮನವಿ ಮಾಡಿತ್ತು. ಆದರೆ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಅನುಮತಿ ನೀಡಿದರೆ ಮುಂದೆ ಬೇರೆ ಬೇರೆ ರಾಜ್ಯಗಳು ಪ್ರತ್ಯೇಕ ಧ್ವಜ ಕೇಳುವ ಸಾಧ್ಯತೆ ಇರುತ್ತದೆ. ಅಲ್ಲದೇ ಯಾವುದೇ ರಾಜ್ಯ ಪ್ರತ್ಯೇಕ ಧ್ವಜ ಹೊಂದಲು ಸಂವಿಧಾನದಲ್ಲಿ ಅವಕಾಶ ನೀಡಿಲ್ಲ ಎಂದು ಹೇಳಿ ಸರ್ಕಾರದ ಪ್ರಸ್ತಾವನೆಯನ್ನು ತಿರಸ್ಕರಿಸಿದ್ದನ್ನು ಇಲ್ಲಿ ಸ್ಮರಿಸಬಹುದು.