ದೋಸ್ತಿ ಸರ್ಕಾರ ಪತನದ ನಡುವೆ ಮತ್ತೊಂದು ರಾಜಕೀಯ ಬೆಳವಣಿಗೆ ನಡೆದು ಹೋಗಿದೆ. ಬಹುಜನ ಸಮಾಜ ಪಾರ್ಟಿ  [ಬಿಎಸ್‌ಪಿ] ಕರ್ನಾಟಕದಲ್ಲಿದ್ದ ತನ್ನ ಏಕೈಕ ಶಾಸಕನನ್ನು ಅಮಾನತು ಮಾಡಿದೆ.

ಬೆಂಗಳೂರು[ಜು. 23]  ಮೈತ್ರಿ ಸರ್ಕಾರದ ಪರವಾಗಿ ಎಚ್ ಡಿ ಕುಮಾರಸ್ವಾಮಿ ಮಂಡಿಸಿದ ವಿಶ್ವಾಸಮತಯಾಚನೆ ವೇಳೆಯಲ್ಲಿ ಸದನದಿಂದ ದೂರ ಉಳಿದಿದ್ದ ಕೊಳ್ಳೆಗಾಲದ ಬಿಎಸ್ಪಿ ಪಕ್ಷದ ಎನ್. ಮಹೇಶ್ ಅವರನ್ನು ಬಿಎಸ್‌ಪಿ ಅಮಾನತು ಮಾಡಿದೆ.

ಪಕ್ಷದ ಆದೇಶ ಉಲ್ಲಂಘನೆ ಹಿನ್ನೆಲೆಯಲ್ಲಿ ಶಾಸಕ ಎನ್. ಮಹೇಶ್ ಅವರನ್ನು ಬಿಎಸ್ಪಿ ಪಕ್ಷದಿಂದ ಅಮಾನತುಪಡಿಸಿ ಪಕ್ಷದ ವರಿಷ್ಠೆ ಮಾಯಾವತಿ ಆದೇಶ ನೀಡಿದ್ದಾರೆ.

ಮೈತ್ರಿ ಸರ್ಕಾರದ ಪರವಾಗಿ ಪಾಲ್ಗೊಂಡು ಕುಮಾರಸ್ವಾಮಿ ಅವರನ್ನು ಬೆಂಬಲಿಸುವಂತೆ ಮಾಯಾವತಿ ಆದೇಶ ನೀಡಿದ್ದರು. ಆದರೆ ಇದೆಲ್ಲವನ್ನು ಕಡೆಗಣಿಸಿ ಮಹೇಶ್ ಗೈರಾಗಿದ್ದು ಶಿಕ್ಷೆಗೆ ಗುರಿಯಾಗಿದ್ದಾರೆ. ಅಮಾನತು ವಿಚಾರವನ್ನು ಮಾಯಾಔತಿ ಟ್ವೀಟ್ ಮೂಲಕ ಸ್ಪಷ್ಟಪಡಿಸಿದ್ದಾರೆ.