ಬೆಂಗಳೂರು[ಆ.12]: ರಾಜ್ಯದಲ್ಲಿ ಮಳೆ ಇಳಿಮುಖವಾಗಿದ್ದರೂ ತುಂಗಭದ್ರಾ ಮತ್ತು ಕಾವೇರಿ ನದಿಗಳ ಜಲಾಶಯಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದುಬರುತ್ತಿರುವ ಕಾರಣದಿಂದ ಹೊರಬಿಡಲಾಗಿರುವ ನೀರಿನಿಂದಾಗಿ ಎಂಟು ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ.

ಮಲೆನಾಡು ಭಾಗದಲ್ಲಿ ಉತ್ತಮ ಮಳೆಯಾಗಿದ್ದರಿಂದ ತುಂಗಭದ್ರಾ ನದಿಗೆ ಭಾರೀ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ಬಳ್ಳಾರಿ ಹೊಸಪೇಟೆಯಲ್ಲಿರುವ ಜಲಾಶಯದಿಂದ ದಾಖಲೆಯ 2.29 ಲಕ್ಷ ಕ್ಯುಸೆಕ್‌ ನೀರನ್ನು ನದಿಗೆ ಬಿಡಲಾಗಿದೆ. ಇದರಿಂದಾಗಿ ಬಳ್ಳಾರಿ, ಕೊಪ್ಪಳ, ಹಾವೇರಿ, ಗದಗ ಜಿಲ್ಲೆಯ ನದಿ ತೀರ ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ.

ವರುಣನ ಅಬ್ಬರಕ್ಕೆ ಕರುನಾಡು ತತ್ತರ: ಮಳೆಗೆ ಸಂಬಂಧಿಸಿದ ಎಲ್ಲಾ ಸುದ್ದಿಗಳಿಗಾಗಿ ಕ್ಲಿಕ್ಕಿಸಿ

ವಿದೇಶಿಯರ ಅಡ್ಡೆ ಎಂದೇ ಕರೆಯಲಾಗುತ್ತಿರುವ ವಿರೂಪಾಪುರ ಗಡ್ಡೆ ರೆಸಾರ್ಟ್‌ನಲ್ಲಿ ವಿದೇಶಿಯರೂ ಸೇರಿದಂತೆ 200 ಜನರು ಸಿಲುಕಿದ್ದು, ಅವರ ರಕ್ಷಣೆಗೆ ಯತ್ನ ಮುಂದುವರಿದಿದೆ. ವಿರೂಪಾಪುರಗಡ್ಡೆ ನಡುಗಡ್ಡೆಯಾಗಿದ್ದು ಸದ್ಯಕ್ಕೆ ಪ್ರವಾಸಿಗರಿಗೆ ಅಪಾಯ ಇಲ್ಲವಾದರೂ ನೀರಿನ ಪ್ರಮಾಣ ಏರಿದಲ್ಲಿ ತೊಂದರೆ ಖಚಿತ. ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿ, ಹರಪನಹಳ್ಳಿ, ಕಂಪ್ಲಿಯಲ್ಲಿ 900 ಕುಟುಂಬಗಳ 3000 ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ. ಗಂಗಾವತಿ- ಕಂಪ್ಲಿ ಸೇತುವೆ ಸಂಪೂರ್ಣ ಜಲಾವೃತವಾಗಿವೆ.

ಇದೇವೇಳೆ ಜಲಾಶಯಕ್ಕೆ ಹರಿದು ಬರುವ ನೀರಿನ ಒಳಹರಿವಿನ ಪ್ರಮಾಣವು ಇಂದು ಮಧ್ಯ ರಾತ್ರಿಯ ವೇಳೆಗೆ 3.5 ಲಕ್ಷ ಕ್ಯುಸೆಕ್‌ ತಲುಪಲಿದ್ದು, ನಾಳೆ ಜಲಾಶಯದಿಂದ 3 ಲಕ್ಷ ಕ್ಯುಸೆಕ್‌ ನೀರನ್ನು ನದಿಗೆ ಹರಿಸುವ ಸಾಧ್ಯತೆ ಇದೆ ಎಂದು ತುಂಗಭದ್ರಾ ಮಂಡಳಿಯ ಉನ್ನತ ಅಧಿಕಾರಿಗಳು ಕನ್ನಡ ಪ್ರಭಕ್ಕೆ ತಿಳಿಸಿದ್ದಾರೆ.

ಹಳೇ ಮೈಸೂರಲ್ಲಿ ಪ್ರವಾಹ ಪರಿಸ್ಥಿತಿ: ಇನ್ನು ಕೆಆರ್‌ಎಸ್‌ನಿಂದ 1,42 ಲಕ್ಷ ಕ್ಯುಸೆಕ್‌ ನೀರು ಬಿಡುತ್ತಿರುವುದರಿಂದ ಮೈಸೂರು ಜಿಲ್ಲೆಯ ಟಿ.ನರಸೀಪುರ, ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ, ಕೆ.ಆರ್‌.ಪೇಟೆ ತಾಲೂಕುಗಳಲ್ಲಿ ಪ್ರವಾಹ ಎದುರಾಗಿದೆ. ಟಿ.ನರಸೀಪುರದಲ್ಲಿ ಮುಖ್ಯರಸ್ತೆಯ ಸೇತುವೆ, ಅಗಸ್ತೆ್ಯೕಶ್ವರ ದೇವಸ್ಥಾನದವರೆಗೂ ನೀರು ಬಂದಿದೆ. ದೇವಸ್ಥಾನದ ಹಿಂಭಾಗ 12 ಮನೆಗೆ ಒಳ ಚರಂಡಿ ನೀರು ನುಗ್ಗಿದ್ದು, ತೆರವುಗೊಳಿಸಲಾಗಿದೆ. ಹೆಮ್ಮೆಗೆ ಸೇತುವೆ ಜಲಾವೃತಗೊಂಡಿದ್ದು, ಬದಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಅಂತೆಯೇ ತಲಕಾಡು ಭಾಗದಲ್ಲಿ ಪ್ರವಾಹ ಭೀತಿ ಎದುರಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಟಿ. ನರಸೀಪುರ ಪಟ್ಟಣದ ಸರ್ಕಾರಿ ಶಾಲೆ ಮತ್ತು ಬೆನಕನಹಳ್ಳಿ ಸರ್ಕಾರಿ ಶಾಲೆಯಲ್ಲಿ ಪರಿಹಾರ ಕೇಂದ್ರ ಪ್ರಾರಂಭಿಸಲಾಗುತ್ತಿದೆ.

ಶ್ರೀರಂಗಪಟ್ಟಣ ತಾಲೂಕಿನ 15ಕ್ಕೂ ಹೆಚ್ಚು ಗ್ರಾಮಗಳು ಪ್ರವಾಹಕ್ಕೆ ಸಿಲುಕಿದ್ದು, ನದಿ ಪಾತ್ರದಲ್ಲಿರುವ ಬೆಳೆ ಹಾಗೂ ಕೆಲವು ಗುಡಿಸಲನ್ನು ನೀರು ನುಂಗಿ ಹಾಕಿದೆ. ಶ್ರೀರಂಗಪಟ್ಟಣದ ರಂಗನತಿಟ್ಟು ಪಕ್ಷಿಧಾಮದಲ್ಲಿ ಬೋಟಿಂಗ್‌ ಸ್ಥಗಿತ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ. ಇದೇವೇಳೆ ಕಬಿನಿ ಜಲಾಶಯದ ಹೊರಹರಿವಿನ ಪ್ರಮಾಣವನ್ನು 1.21 ಲಕ್ಷ ಕ್ಯುಸೆಕ್‌ನಿಂದ 71 ಸಾವಿರ ಕ್ಯುಸೆಕ್‌ಗೆ ಇಳಿಸಲಾಗಿದ್ದರೂ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದ ನದಿದಡದಲ್ಲಿರುವ 4 ಗ್ರಾಮಗಳಲ್ಲಿ ಪ್ರವಾಹವುಂಟಾಗಿದೆ.

ಹಾಸನ ಜಿಲ್ಲೆಯ ಗೊರೂರಿನಲ್ಲಿರುವ ಹೇಮಾವತಿ ಜಲಾಶಯದಿಂದ 72 ಸಾವಿರ ಕ್ಯುಸೆಕ್‌ ನೀರು ಹರಿಬಿಟ್ಟಿರುವುದರಿಂದ ಹೊಳೆನರಸೀಪುರ ಪಟ್ಟಣವೂ ಸೇರಿದಂತೆ ತಾಲೂಕಿನ ಹಲವೆಡೆ ಪ್ರವಾಹ ಸ್ಥಿತಿ ಏರ್ಪಟ್ಟಿದೆ. ಈಗಾಗಲೇ ಪ್ರವಾಹದಿಂದ ಹೊಳೆನರಸಿಪುರ ತಾಲೂಕಿನಲ್ಲೇ 25 ಸಾವಿರ ಎಕರೆ, ಬೇಲೂರು ತಾಲೂಕಿನಲ್ಲಿ 50 ಸಾವಿರ ಎಕರೆಯಲ್ಲಿ ಇದ್ದ ಬೆಳೆ ಹಾಳಾಗಿದೆ.

ಹಂಪಿ ಜಲಾವೃತ

ಬಳ್ಳಾರಿ ಜಿಲ್ಲೆ ಹೊಸಪೇಟೆ ತಾಲೂಕಿನ ಇತಿಹಾಸ ಪ್ರಸಿದ್ಧ ಹಂಪಿಯ ರಾಮಲಕ್ಷ್ಮಣ ದೇವಸ್ಥಾನ, ಕೋಟಿಲಿಂಗ, ಪುರಂದರದಾಸ ಮಂಟಪ, ವೈದಿಕ ಮಂಟಪ, ಕಡ್ಲೆಕಾಳು ಗಣಪ, ಸಾಸಿವೆ ಗಣಪ ಸೇರಿದಂತೆ 63 ದೇವಾಲಯ, ಸ್ಮಾರಕಗಳು, ಕೊಪ್ಪಳ ಜಿಲ್ಲೆ ಗಂಗಾವತಿ ಬಳಿಯ ನವ ವೃಂದಾವನ ಗಡ್ಡೆ ತುಂಗಭದ್ರಾ ನದಿ ಪ್ರವಾಹಕ್ಕೆ ಸಿಲುಕಿವೆ.