ಬೆಂಗಳೂರು (ಆ.17) :  ಪ್ರವಾಹಪೀಡಿತ ಗ್ರಾಮಗಳ ಅಭಿವೃದ್ಧಿಗಾಗಿ ನೆರವು ನೀಡುವ ಸಂಸ್ಥೆಗಳ ಹೆಸರನ್ನು ಅಲ್ಲಿ ನಿರ್ಮಿಸಲಾಗುವ ನೂತನ ಬಡಾವಣೆಗಳಿಗೆ ಇಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ. ಯಾವುದೇ ಗ್ರಾಮಗಳ ಹೆಸರನ್ನು ಬದಲಾಯಿಸುವ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದೂ ಅವರು ತಿಳಿಸಿದ್ದಾರೆ.

ಇತ್ತೀಚೆಗೆ ಮುಖ್ಯಮಂತ್ರಿಗಳು ಕೈಗಾರಿಕೋದ್ಯಮಿಗಳ ಸಭೆ ನಡೆಸಿದ ವೇಳೆ ಪ್ರವಾಹಪೀಡಿತ ಗ್ರಾಮಗಳ ಪುನಶ್ಚೇತನಕ್ಕಾಗಿ ಹತ್ತು ಕೋಟಿ ರು.ಗಳಿಗೂ ಹೆಚ್ಚು ನೀಡುವ ಸಂಸ್ಥೆಗಳ ಹೆಸರನ್ನು ಆ ಗ್ರಾಮಗಳಿಗೆ ಇಡಲಾಗುವುದು ಎಂದು ಹೇಳಿದ್ದರು. ಆದರೆ, ಈ ಬಗ್ಗೆ ಪ್ರತಿಪಕ್ಷಗಳ ಮುಖಂಡರಿಂದ ಸಾಕಷ್ಟುಟೀಕೆ ಟಿಪ್ಪಣಿ ಕೇಳಿಬಂದಿತ್ತು. ಜತೆಗೆ ಸಾಮಾಜಿಕ ಜಾಲತಾಣದಲ್ಲೂ ವಿರೋಧ ವ್ಯಕ್ತವಾಗಿತ್ತು.

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಈ ಹಿನ್ನೆಲೆಯಲ್ಲಿ ಶುಕ್ರವಾರ ಟ್ವೀಟ್‌ ಮೂಲಕ ಸ್ಪಷ್ಟೀಕರಣ ನೀಡಿದ ಯಡಿಯೂರಪ್ಪ ಅವರು, ಪ್ರವಾಹಪೀಡಿತ ಗ್ರಾಮಗಳ ಅಭಿವೃದ್ಧಿಗಾಗಿ ಹತ್ತು ಕೋಟಿ ರು.ಗಳಿಗೂ ಹೆಚ್ಚು ನೆರವು ನೀಡುವ ಸಂಸ್ಥೆಗಳ ಹೆಸರನ್ನು ಅಲ್ಲಿ ನಿರ್ಮಿಸಲಾಗುವ ನೂತನ ಬಡಾವಣೆಗಳಿಗೆ ಇಡಲಾಗುವುದು. ಯಾವುದೇ ಗ್ರಾಮದ ಹೆಸರನ್ನು ಬದಲಾಯಿಸುವ ಪ್ರಸ್ತಾಪವಿಲ್ಲ ಎಂದು ಹೇಳಿದ್ದಾರೆ.