ಈಶ್ವರ ಶೆಟ್ಟರ

ಬಾಗಲಕೋಟೆ[ಆ.13]: ನೆರೆ ಪ್ರವಾಹದಲ್ಲಿ ಸಂತ್ರಸ್ತರಾಗಿರುವ ಜಾನವಾರುಗಳಿಗೆ ಬೆಳಗಾವಿ ಜಿಲ್ಲೆಯ ಮೂಡಲಗಿಯ ಭೀಮಪ್ಪ ಎಂಬವರು ತಾನು ಬೆಳೆದ ಒಂದು ಎಕರೆ ಕಬ್ಬಿನ ಬೆಳೆಯನ್ನು ಮೇವಾಗಿ ದಾನ ಮಾಡಿದ್ದರು. ಇದೀಗ ಬಾಗಲಕೋಟೆ ಜಿಲ್ಲೆ ಮುಧೋಳದ ರಾಜೇಶ ವಾಲಿ ಎಂಬವರು ತನ್ನ 10 ಎಕರೆ ಜಮೀನಿನಲ್ಲಿ ಬೆಳೆದು ನಿಂತ ಕಬ್ಬನ್ನು ಜಾನುವಾರುಗಳಿಗೆ ಉಚಿತ ಮೇವಾಗಿ ಒದಗಿಸಿದ್ದಾರೆ. ನೆರೆ ಸಂತ್ರಸ್ತರ ಹಾಗೂ ಅವರ ಬದುಕಿನ ಭಾಗವಾಗಿರುವ ಜಾನುವಾರುಗಳಿಗೆ ಬೇಕಾದ ಹಸಿ ಮೇವನ್ನು ಹಣ ನೀಡಿದರೂ ಸಿಗದ ಈ ಸಂದರ್ಭದಲ್ಲಿ ಮುಧೋಳದ ರಾಜೇಶ ವಾಲಿ ತೆಗೆದುಕೊಂಡ ನಿರ್ಧಾರ ಎಲ್ಲರಲ್ಲಿಯೂ ಅಚ್ಚರಿಯ ಜೊತೆಗೆ ಸಂತಸ ಮೂಡಿಸಿದೆ.

ವರುಣನ ಅಬ್ಬರಕ್ಕೆ ಕರುನಾಡು ತತ್ತರ: ಮಳೆಗೆ ಸಂಬಂಧಿಸಿದ ಎಲ್ಲಾ ಸುದ್ದಿಗಳಿಗಾಗಿ ಕ್ಲಿಕ್ಕಿಸಿ

ಮುಧೋಳದಲ್ಲಿ ಶಿಕ್ಷಣ ಸಂಸ್ಥೆ ನಡೆಸುವ ರಾಜೇಶ ವಾಲಿ, ಮುಧೋಳ ಪಕ್ಕದ ಎತ್ತರ ಪ್ರದೇಶದಲ್ಲಿರುವ ಮಂಟೂರ ವ್ಯಾಪ್ತಿಯ ಯಡಹಳ್ಳಿ ಗ್ರಾಮದಲ್ಲಿ ಹತ್ತು ಎಕರೆ ಜಮೀನಿನಲ್ಲಿ ಆರು ತಿಂಗಳ ಕಾಲ ಲಕ್ಷಾಂತರ ರು. ವ್ಯಯ ಮಾಡಿ ಕಬ್ಬು ಬೆಳೆದಿದ್ದರು. ಇನ್ನೂ ನಾಲ್ಕಾರು ತಿಂಗಳಕ್ಕೆ ಫಸಲು ಬರುವ ಕಬ್ಬು ಏನಿಲ್ಲವೆಂದರೂ ಪ್ರತಿ ಎಕರೆಗೆ 50 ಟನ್‌ ಬೆಳೆದಿದ್ದರೂ ಕನಿಷ್ಠ 400 ರಿಂದ 450 ಟನ್‌ ಕಬ್ಬು ಅವರದ್ದಾಗಿರುತಿತ್ತು. ಮಾರುಕಟ್ಟೆಯ ಕನಿಷ್ಠ ಮೌಲ್ಯವೆಂದರೂ .10 ಲಕ್ಷ ಹಣ ಬರುವ ಕಬ್ಬನ್ನು ಉದಾರ ಮನಸಿನಿಂದ ರೈತರ ಜಾನುವಾರುಗಳಿಗೆ ನೀಡಿದ್ದಾರೆ.

ಈಗಾಗಲೇ ಜಮಖಂಡಿ ಮತ್ತು ಮುಧೋಳ ತಾಲೂಕಿನ ತಹಸೀಲ್ದಾರ್‌ ಮೂಲಕ ವಾಲಿಯವರ ಯಡಹಳ್ಳಿಯ ತೋಟದಲ್ಲಿ ಬೆಳೆದ ಹಸಿ ಕಬ್ಬು ಪರಿಹಾರ ಕೇಂದ್ರಗಳಲ್ಲಿರುವ ಜಾನುವಾರುಗಳಿಗೆ ತಲುಪಿಸುವ ಕಾರ್ಯ ಭರದಿಂದ ನಡೆದಿದೆ. ಮುಧೋಳ ತಾಲೂಕು ಆಡಳಿತ ಅವರಿಗೆ ಕೃತಜ್ಞತೆ ಸಲ್ಲಿಸಿದೆ.