ಕಾಂಗ್ರೆಸ್‌ನಿಂದ 17 ಮಂದಿಗೆ ಮಂತ್ರಿಗಿರಿ?

Karnataka Election 2018: Congress' likely list of 17 ministers
Highlights

 ಸಂಪುಟ ಕಗ್ಗಂಟು ಬಗೆಹರಿಸಲು ಕಾಂಗ್ರೆಸ್‌ ನಾಯಕರು ತೀವ್ರ ಪ್ರಯತ್ನ ನಡೆಸುತ್ತಿದ್ದರೂ, ಕಾಂಗ್ರೆಸ್‌ ವಲಯದಲ್ಲಿ ಸಂಪುಟಕ್ಕೆ ಸೇರುವ ಸಂಭಾವ್ಯರ ಹೆಸರುಗಳು ಚಾಲ್ತಿಯಲ್ಲಿದೆ. ಮೈತ್ರಿಕೂಟದ ಹೊಂದಾಣಿಕೆ ಪ್ರಕಾರ ಕಾಂಗ್ರೆಸ್‌ಗೆ 22 ಸ್ಥಾನಗಳು ಲಭಿಸಲಿದ್ದು, ಅದರಲ್ಲಿ ಎರಡು ಸ್ಥಾನಗಳನ್ನು ಕಾಂಗ್ರೆಸ್‌ ಜತೆಗಿರುವ ಪಕ್ಷೇತರರಾದ ಆರ್‌. ಶಂಕರ್‌ ಹಾಗೂ ನಾಗೇಶ್‌ ಅವರಿಗೆ ಬಿಟ್ಟುಕೊಡುವ ಸಾಧ್ಯತೆಯಿದೆ.
 

ಬೆಂಗಳೂರು :  ಸಂಪುಟ ಕಗ್ಗಂಟು ಬಗೆಹರಿಸಲು ಕಾಂಗ್ರೆಸ್‌ ನಾಯಕರು ತೀವ್ರ ಪ್ರಯತ್ನ ನಡೆಸುತ್ತಿದ್ದರೂ, ಕಾಂಗ್ರೆಸ್‌ ವಲಯದಲ್ಲಿ ಸಂಪುಟಕ್ಕೆ ಸೇರುವ ಸಂಭಾವ್ಯರ ಹೆಸರುಗಳು ಚಾಲ್ತಿಯಲ್ಲಿದೆ. ಮೈತ್ರಿಕೂಟದ ಹೊಂದಾಣಿಕೆ ಪ್ರಕಾರ ಕಾಂಗ್ರೆಸ್‌ಗೆ 22 ಸ್ಥಾನಗಳು ಲಭಿಸಲಿದ್ದು, ಅದರಲ್ಲಿ ಎರಡು ಸ್ಥಾನಗಳನ್ನು ಕಾಂಗ್ರೆಸ್‌ ಜತೆಗಿರುವ ಪಕ್ಷೇತರರಾದ ಆರ್‌. ಶಂಕರ್‌ ಹಾಗೂ ನಾಗೇಶ್‌ ಅವರಿಗೆ ಬಿಟ್ಟುಕೊಡುವ ಸಾಧ್ಯತೆಯಿದೆ.

ಉಳಿದ ಇಪ್ಪತ್ತು ಸ್ಥಾನಗಳ ಪೈಕಿ ಈಗಾಗಲೇ ಡಾ.ಜಿ.ಪರಮೇಶ್ವರ್‌ ಅವರು ಉಪ ಮುಖ್ಯಮಂತ್ರಿಯಾಗಿದ್ದಾರೆ. ಇನ್ನು ಎರಡು ಸ್ಥಾನಗಳನ್ನು ಖಾಲಿ ಉಳಿಸಿಕೊಂಡರು ಬಹುತೇಕ ಕಾಂಗ್ರೆಸ್‌ 17 ಸ್ಥಾನಗಳನ್ನು ತುಂಬಿಕೊಳ್ಳುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಈ 17 ಸ್ಥಾನಗಳಿಗೆ 25ಕ್ಕೂ ಹೆಚ್ಚು ಸಂಭಾವ್ಯರ ಹೆಸರುಗಳು ಚಾಲ್ತಿಯಲ್ಲಿವೆ. ಅವು-ಹಿರಿಯರ ಪೈಕಿ ರಾಮಲಿಂಗಾರೆಡ್ಡಿ, ಎಚ್‌.ಕೆ. ಪಾಟೀಲ್‌, ಕೆ.ಜೆ. ಜಾಜ್‌ರ್‍, ಡಿ.ಕೆ. ಶಿವಕುಮಾರ್‌, ಆರ್‌.ವಿ. ದೇಶಪಾಂಡೆ ಹೆಸರುಗಳಿವೆ. ಬೆಳಗಾವಿ ಜಿಲ್ಲೆಯ ಮಟ್ಟಿಗೆ ಸಹೋದರರಾದ ಸತೀಶ್‌ ಜಾರಕಿಹೊಳಿ ಹಾಗೂ ರಮೇಶ್‌ ಜಾರಕಿಹೊಳಿ ಪೈಕಿ ಒಬ್ಬರು ಸಂಪುಟ ಸೇರ್ಪಡೆಯಾಗಬಹುದು. ಮೂಲಗಳ ಪ್ರಕಾರ, ಸತೀಶ್‌ ಜಾರಕಿಹೊಳಿ ಅವರಿಗೆ ಹೆಚ್ಚಿನ ಅವಕಾಶವಿದೆ. 

ಲಿಂಗಾಯತ ಕೋಟಾದಲ್ಲಿ ಶಾಮನೂರು ಶಿವಶಂಕರಪ್ಪ, ರಾಜಶೇಖರ್‌ ಪಾಟೀಲ್‌ ಹುಮ್ನಾಬಾದ್‌, ಶಿವಾನಂದ ಪಾಟೀಲ್‌, ಎಂ.ಬಿ. ಪಾಟೀಲ್‌ ಹೆಸರಿದೆ. ಒಕ್ಕಲಿಗರ ಪೈಕಿ ಡಿ.ಕೆ. ಶಿವಕುಮಾರ್‌ ಹೊರತುಪಡಿಸಿ, ಕೃಷ್ಣ ಬೈರೇಗೌಡ, ಎಂ. ಕೃಷ್ಣಪ್ಪ, ಡಾ. ಸುಧಾಕರ್‌ ಅವರ ಹೆಸರುಗಳು ಪರಿಗಣನೆಯಲ್ಲಿದೆ. 

ಕೃಷ್ಣ ಬೈರೇಗೌಡ ಹಾಗೂ ಎಂ.ಕೃಷ್ಣಪ್ಪ ಅವರ ಪೈಕಿ ಒಬ್ಬರಿಗೆ ಅವಕಾಶವಿದೆ ಎನ್ನಲಾಗಿದ್ದು, ಕೃಷ್ಣ ಬೈರೇಗೌಡ ಎಐಸಿಸಿ ಪ್ರಧಾನ ಕಾರ್ಯದರ್ಶಿಯಾದರೆ ಆಗ ಎಂ.ಕೃಷ್ಣಪ್ಪ ಅವರಿಗೆ ಸ್ಥಾನ ದೊರೆಯಬಹುದು. ಮುಸ್ಲಿಮರ ಪೈಕಿ ರೋಷನ್‌ಬೇಗ್‌, ರಹೀಂ ಖಾನ್‌ ಅವರ ಹೆಸರು ಪ್ರಬಲವಾಗಿದೆ. ಅಲ್ಲದೆ, ತನ್ವೀರ್‌ ಸೇಠ್‌ ಹಾಗೂ ಯು.ಟಿ. ಖಾದರ್‌ ನಡುವೆ ಪೈಪೋಟಿಯಿದೆ ಎನ್ನಲಾಗಿದೆ.

ಯುವಕರ ಪೈಕಿ ಪ್ರಿಯಾಂಕ್‌ ಖರ್ಗೆ ಅಥವಾ ಅಜಯಸಿಂಗ್‌ ಅವರ ಪೈಕಿ ಒಬ್ಬರಿಗೆ ಅವಕಾಶ ಸಿಗಬಹುದು. ಮಹಿಳೆಯರ ಪೈಕಿ ಲಕ್ಷ್ಮೇ ಹೆಬ್ಬಾಳಕರ್‌ ಅಥವಾ ರೂಪಾ ಶಶಿಧರ್‌ ಅವರ ನಡುವೆ ಪೈಪೋಟಿಯಿದೆ. ಪರಿಶಿಷ್ಟಜಾತಿಯ ಎಡಗೈ ವರ್ಗಕ್ಕೆ ಸೇರಿದವರ ಪೈಕಿ ರೂಪಾ ಶಶಿಧರ್‌ ಅವರೊಬ್ಬರೇ ಈ ಬಾರಿ ಶಾಸಕಿಯಾಗಿದ್ದಾರೆ. ಸಂಸದ ಮುನಿಯಪ್ಪ ಅವರ ಪುತ್ರಿಯಾದ ರೂಪಾ ಅವರ ಸಂಪುಟ ಸೇರ್ಪಡೆ ಸಾಧ್ಯತೆ ಹೆಚ್ಚಿದೆ. 

ಆದರೆ, ಮೊದಲ ಬಾರಿ ಶಾಸಕರಾದವರಿಗೆ ಅವಕಾಶವಿಲ್ಲ ಎಂಬ ಸೂತ್ರ ಜಾರಿಗೆ ತಂದರೆ ಲಕ್ಷ್ಮೇ ಹೆಬ್ಬಾಳಕರ್‌ ಹಾಗೂ ರೂಪಾ ಇಬ್ಬರಿಗೂ ಸಂಪುಟ ಸೇರ್ಪಡೆ ಕಷ್ಟವಾಗುತ್ತದೆ. ಕುರುಬ ಜನಾಂಗದ ಪೈಕಿ ಸಿ.ಎಸ್‌. ಶಿವಳ್ಳಿ, ಎಂ.ಟಿ.ಬಿ ನಾಗರಾಜು ಅವರ ಹೆಸರು ಚಾಲ್ತಿಯಲ್ಲಿದೆ. 

ಪರಿಶಿಷ್ಟವರ್ಗದವರ ಪೈಕಿ ಬಳ್ಳಾರಿ ಗ್ರಾಮೀಣ ಕ್ಷೇತ್ರದ ನಾಗೇಂದ್ರ ಹೆಸರು ಪ್ರಬಲವಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯಿಂದ ಶಿವಶಂಕರರೆಡ್ಡಿ ಹಾಗೂ ಡಾ.ಸುಧಾಕರ್‌ ಅವರ ಪೈಕಿ ಒಬ್ಬರಿಗೆ ಅವಕಾಶ ದೊರೆಯಬಹುದು. ಹಿಂದುಳಿದವರ ಪೈಕಿ ಚಾಮರಾಜನಗರ ಜಿಲ್ಲೆಯಿಂದ ನರೇಂದ್ರ ಅವಕಾಶ ಗಿಟ್ಟಿಸಬಹುದು. ವಿಧಾನಪರಿಷತ್‌ ಸದಸ್ಯರ ಪೈಕಿ ಎಸ್‌.ಆರ್‌.ಪಾಟೀಲ್‌ ಹಾಗೂ ಪ್ರತಾಪ್‌ ಚಂದ್ರ ಶೆಟ್ಟಿಅವರ ಹೆಸರು ಪ್ರಬಲವಾಗಿ ಕೇಳಿಬರುತ್ತಿದೆ.

loader