ಬಾಗಲಕೋಟೆ[ಸೆ.06]: ಮಾಜಿ ಸಚಿವ ಡಿ.ಕೆ.ಶಿವಕುಮಾರ ಬಂಧನ ಕುರಿತು ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ವಿವಾದವಾಗುವ ವಿಚಾರಗಳನ್ನು ಕೇಳಬೇಡಿ ಎಂದು ಕೈಮುಗಿದಿದ್ದಾರೆ.

ಬೇರೆಯವರ ಸಂಕಟಕ್ಕೆ ಖುಷಿ ಪಡಲ್ಲ, ಡಿಕೆಶಿ ಬಗ್ಗೆ ಗೌರವವಿದೆ: ಡಿಸಿಎಂ

ಬಾಗಲಕೋಟೆಯಲ್ಲಿ ಗುರುವಾರ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ ಅವರು, ನಾನು ಹೇಳುವುದೇ ಬೇರೆ. ನೀವು ಬಿಂಬಿಸುವುದೇ ಬೇರೆ. ನಾನು ಸಹಜವಾಗಿ ಉತ್ತರ ಕರ್ನಾಟಕದ ಕೆಲವು ಶಬ್ದಗಳನ್ನು ಬಳಸಿದರೆ ಮಾಧ್ಯಮದವರಾದ ನೀವು ಕನಕಪುರ ಬಂಡೆಗೆ ಡಿಚ್ಚಿ ಹೊಡೆದರು ಗೋವಿಂದ ಕಾರಜೋಳ ಅಂದರೆ ನನ್ನ ಗತಿ ಏನು? ಅಂತಹ ವಿವಾದವಾಗುವ ವಿಚಾರಗಳನ್ನು ದಯವಿಟ್ಟು ಕೇಳಬೇಡಿ ಎಂದರು.

ಟೀಕೆ ಮಾಡುವುದು ಕಾಂಗ್ರೆಸ್‌ ಕೆಲಸ:

ಮಧ್ಯಂತರ ಚುನಾವಣೆ ಕುರಿತು ಮಾಜಿ ಸಿಎಂ ಸಿದ್ದರಾಮಯ್ಯನವರ ಹೇಳಿಕೆಗೆ ಪ್ರತಿಕ್ರಿಯಿಸಿದ ಗೋವಿಂದ ಕಾರಜೋಳ, ಸದ್ಯ ಕಾಂಗ್ರೆಸ್‌ನವರು ಖಾಲಿ ಇದ್ದಾರೆ. ಆ ಕಾರಣಕ್ಕಾಗಿ ಮಧ್ಯಂತರ ಚುನಾವಣೆ ಜಪ ಮಾಡುತ್ತಿದ್ದಾರೆ. ಅವರಿಗೆ ಸದ್ಯ ಉಳಿದಿರುವ ಕೆಲಸ ಟೀಕೆ- ಟಿಪ್ಪಣಿ ಮಾಡುವುದು ಹಾಗೂ ಪ್ರತಿಭಟನೆ ಮಾಡುವುದು ಎಂದು ಲೇವಡಿ ಮಾಡಿದರು.